ನವದೆಹಲಿ:ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್ ಗಢ, ತೆಲಂಗಾಣ ಮತ್ತು ಮಿಜೋರಾಂ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಅಕ್ಟೋಬರ್ 8 ಮತ್ತು 10ರ ನಡುವೆ ಘೋಷಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Sikkim: ಕಳಪೆ ಗುಣಮಟ್ಟವೇ ಅಣೆಕಟ್ಟು ಕೊಚ್ಚಿ ಹೋಗಲು ಕಾರಣ: ಸಿಕ್ಕಿಂ ಸಿಎಂ
ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ನವೆಂಬರ್ 2ನೇ ವಾರ ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುವ ಸಾಧ್ಯತೆ ಇದ್ದಿರುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
2018ರಲ್ಲಿಯೂ ಕೂಡಾ ಈ ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಅದೇ ರೀತಿ ಚತ್ತೀಸ್ ಗಢದಲ್ಲಿಯೂ 2018ರಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು ಎಂದು ವರದಿ ವಿವರಿಸಿದೆ.
ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನ ದಿನಾಂಕ ಭಿನ್ನವಾಗಿರಲಿದ್ದು, ಫಲಿತಾಂಶದ ದಿನ ಮಾತ್ರ ಒಂದೇಯಾಗಿರಲಿದೆ. ಮಿಜೋರಾಂ ವಿಧಾನಸಭೆಯ ಅವಧಿ 2023ರ ಡಿಸೆಂಬರ್ 17ರಂದು ಕೊನೆಗೊಳ್ಳಲಿದೆ. ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ ಎಂಎನ್ ಎಫ್-ಬಿಜೆಪಿ ಮೈತ್ರಿಕೂಟ ಆಡಳಿತದಲ್ಲಿದೆ.
ತೆಲಂಗಾಣ, ರಾಜಸ್ಥಾನ, ಚತ್ತೀಸ್ ಗಢ ಮತ್ತು ರಾಜಸ್ಥಾನದ ವಿಧಾನಸಭೆಯ ಅವಧಿ 2024ರ ಜನವರಿಯಲ್ಲಿ (ಬೇರೆ, ಬೇರೆ ದಿನಾಂಕ) ಕೊನೆಗೊಳ್ಳಲಿದೆ ಎಂದು ವರದಿ ತಿಳಿಸಿದೆ. ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ ಎಸ್ ಅಧಿಕಾರದಲ್ಲಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಚತ್ತೀಸ್ ಗಢ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ.