ಹೊಸದಿಲ್ಲಿ : ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಅಕ್ರಮ ವಿಚಕ್ಷಣ ತಂಡವು ಇಂದು, ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಐದು ರಾಜ್ಯಗಳಲ್ಲಿ, 64 ಕೋಟಿ ರೂ. ನಗದು ಹಾಗೂ 8 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಳ್ಳಲಾಗಿರುವ ನಗದು ಹಣದಲ್ಲಿ 56.04 ಕೋಟಿ ರೂ.ಗಳನ್ನು ಉತ್ತರ ಪ್ರದೇಶ ಒಂದರಲ್ಲೇ ಸಿಕ್ಕಿರುವುದು ಗಮನಾರ್ಹವಾಗಿದೆ.
ಅಂಕಿ ಅಂಶಗಳ ಪ್ರಕಾರ ಪಂಜಾಬ್ ನಲ್ಲಿ 1.78 ಕೋಟಿ ರೂ. ಮೌಲ್ಯದ ಹೆರಾಯಿನ್, ಅಫೀಮು, ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಗೋವಾದಲ್ಲಿ 1.672 ಲಕ್ಷ ರೂ. ಹಾಗೂ ಮಣಇಪುರದಲ್ಲಿ 7 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶದಲ್ಲಿ 1.98 ಲಕ್ಷ ಲೀಟರ್ ಮದ್ಯ (ಮೌಲ್ಯ 6.06 ಕೋಟಿ ರೂ.) ವಶಪಡಿಸಿಕೊಳ್ಳಲಾಗಿದೆ. ಪಂಜಾಬಿನಲ್ಲಿ 17.54 ಲಕ್ಷ ರೂ. ಮೌಲ್ಯದ 10,646 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ.
ಫೆ.4ರಿಂದ ಮಾರ್ಚ್ 8ರ ವರೆಗಿನ ಅವಧಿಯಲ್ಲಿ ವಿಧಾನಸಭಾ ಚುನಾವಣೆ ಎದುರಿಸುವ ಐದು ರಾಜ್ಯಗಳೆಂದು ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ.
ಉತ್ತರ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿರುವ 56.04 ಕೋಟಿ ರೂ. ಅಕ್ರಮ ನಗದಿನಲ್ಲಿ 31.65 ಲಕ್ಷ ರೂ.ಗಳ ಹಳೇ ನಿಷೇಧಿತ ನೋಟುಗಳು ಕೂಡ ಸೇರಿವೆ. ಪಂಜಾಬ್ ನಲ್ಲಿ 8.17 ಕೋಟಿ ರೂ., ಉತ್ತರಾಖಂಡದಲ್ಲಿ 10 ಲಕ್ಷ ರೂ. ಮತ್ತು ಮಣಿಪುರದಲ್ಲಿ 6.95 ಲಕ್ಷ ರೂ. ಅಕ್ರಮ ನಗದು ವಶವಾಗಿವೆ.