ಆಂಧ್ರಪ್ರದೇಶ/ಒಡಿಶಾ: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ (ಮೇ 13) ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ವಿಧಾನಸಭೆ ಚುನಾವಣೆಯ ಮತದಾನ ನಡೆಯುತ್ತಿದೆ.
ಇದನ್ನೂ ಓದಿ:ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು
ಆಂಧ್ರಪ್ರದೇಶದಲ್ಲಿ 25 ಲೋಕಸಭೆ ಸ್ಥಾನದ ಜೊತೆಗೆ 175 ವಿಧಾನಸಭೆ ಸ್ಥಾನಕ್ಕೂ ಮತದಾನ ನಡೆಯುತ್ತಿದೆ. ಅದೇ ರೀತಿ ಒಡಿಶಾದ ನಾಲ್ಕು ಲೋಕಸಭೆ ಕ್ಷೇತ್ರಗಳ ಚುನಾವಣೆ ಜೊತೆಗೆ 28 ವಿಧಾನಸಭೆ ಸ್ಥಾನಕ್ಕೂ ಮತದಾನ ನಡೆಯುವ ಮೂಲಕ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಒಡಿಶಾದಲ್ಲಿ ಬಿಜೆಡಿ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದರೆ, ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಸಿಪಿ, INDIA, NDA ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿ ನಡೆಯಲಿದೆ ಎಂದು ವರದಿ ತಿಳಿಸಿದೆ.
ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್ ಆರ್ ಕಾಂಗ್ರೆಸ್, ಕಾಂಗ್ರೆಸ್ ಮೈತ್ರಿಯ ಇಂಡಿಯಾ ಕೂಟ ಹಾಗೂ ಎನ್ ಡಿಎ ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಬಿಜೆಪಿ ನೇತೃತ್ವದ ಎನ್ ಡಿಎಗೆ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷ ಮೈತ್ರಿ ಮಾಡಿಕೊಂಡಿದೆ.
ಒಡಿಶಾದಲ್ಲಿ ಆಡಳಿತಾರೂಢ ಬಿಜು ಜನತಾ ದಳ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ನಡೆಯಲಿದೆ. ಒಡಿಶಾದಲ್ಲಿ ಒಟ್ಟು 21 ಲೋಕಸಭಾ ಸ್ಥಾನ ಹಾಗೂ 147 ವಿಧಾನಸಭಾ ಕ್ಷೇತ್ರಗಳಿವೆ. ಒಡಿಶಾದಲ್ಲಿ ಮೇ 13ರಂದು 4 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಂತರ ಮೇ 20ರಂದು 5 ಸ್ಥಾನಗಳಿಗೆ, ಮೇ 25ರಂದು 6 ಹಾಗೂ ಜೂನ್ 1ರಂದು 6 ಲೋಕಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.