ಇಟಾನಗರ: ಅರುಣಾಚಲ ಪ್ರದೇಶದ ಚೀನಾ ಗಡಿ ಸಮೀಪ ಇರುವ ಮಾಲೋಗಮ್ ಗ್ರಾಮದಲ್ಲಿರುವ ಏಕೈಕ ಮಹಿಳೆಯ ಮತದಾನಕ್ಕಾಗಿ ಚುನಾವಣಾ ಅಧಿಕಾರಿಗಳ ತಂಡವು ಏಪ್ರಿಲ್ 18ರಂದು ಬರೋಬ್ಬರು 40 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಮತಗಟ್ಟೆ ಸ್ಥಾಪಿಸಲು ಸಿದ್ದವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
ಮಾಲೋಗಾಮ್ ಗ್ರಾಮದಲ್ಲಿ ವಾಸವಾಗಿರುವ ಸೋಕೇಲಾ ತಯಾಂಗ್ (44ವರ್ಷ) ಏಕೈಕ ಮತದಾರರಾಗಿದ್ದಾರೆ. ಇದು ಕೇವಲ ಮತದಾರರ ಸಂಖ್ಯೆಯ ಪ್ರಶ್ನೆಯಲ್ಲ, ಆದರೆ ನಾವು ದೇಶದ ಪ್ರತಿಯೊಬ್ಬ ಪ್ರಜೆಯ ಧ್ವನಿಯನ್ನು ಆಲಿಸುತ್ತೇವೆ ಎಂಬ ಕರ್ತವ್ಯ ಪ್ರಜ್ಞೆಗೆ ನಮ್ಮ ನಡೆ ಸಾಕ್ಷಿಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಸೋಕೇಲಾ ಅವರ ಒಂದು ಮತ ನಮ್ಮ ಬದ್ಧತೆ ಮತ್ತು ಸಮಾನತೆಗೆ ಸಾಕ್ಷಿಯಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಪವನ್ ಕುಮಾರ್ ಸೈನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಚುನಾವಣಾ ಅಧಿಕಾರಿಗಳ ಮಾಹಿತಿ ಪ್ರಕಾರ, ಮಾಲೋಗಾಮ್ ನಲ್ಲಿ ಕೆಲವೇ ಕೆಲವು ಕುಟುಂಬಗಳು ವಾಸವಾಗಿವೆ. ತಯಾಂಗ್ ಮಾತ್ರ ಆಕೆಯ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಉಳಿದವರು ಬೇರೆ ಮತಗಟ್ಟೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ತಯಾಂಗ್ ಬೇರೆ ಮತಗಟ್ಟೆಗೆ ತೆರಳಲು ನಿರಾಕರಿಸಿರುವುದಾಗಿ ವರದಿ ತಿಳಿಸಿದೆ.
ತಯಾಂಗ್ ಅವರು ಮತಚಲಾಯಿಸಲು ಚುನಾವಣಾ ಅಧಿಕಾರಿಗಳ ತಂಡ, ಭದ್ರತಾ ಸಿಬಂದಿಗಳು ಹಾಗೂ ಹೊರೆಯಾಳುಗಳು ಗುಡ್ಡಗಾಡು ಪ್ರದೇಶವಾದ ಹಯುಲಿಯಾಂಗ್ ಗೆ ತೆರಳಿ ಮತಗಟ್ಟೆಯನ್ನು ತೆರೆಯಲಿದ್ದಾರೆ ಎಂದು ವರದಿ ವಿವರಿಸಿದೆ.
ಈ ಗ್ರಾಮವು ಹಯುಲಿಯಾಂಗ್ ವಿಧಾನಸಭಾ ಕ್ಷೇತ್ರದಲ್ಲಿದ್ದು, ಅರುಣಾಚಲ ಪೂರ್ವ ಲೋಕಸಭಾ ಕ್ಷೇತ್ರದಲ್ಲಿದ್ದು, ಇಲ್ಲಿ ಕಾಂಗ್ರೆಸ್ ನ ಬೋಸಿರಾಮ್ ಸಿರಾಮ್ ಮತ್ತು ಬಿಜೆಪಿಯ ತಾಪಿರ್ ಗಾವೋ ಕಣದಲ್ಲಿದ್ದಾರೆ.