Advertisement
ಬುಧವಾರ ರಾತ್ರಿ “ವಾಂಖೇಡೆ’ಯಲ್ಲಿ ನಡೆದ ಮುಂಬೈ ಎದುರಿನ ಪಂದ್ಯದಲ್ಲಿ, ಪಂಜಾಬ್ ಕೊನೆಯ ಎಸೆತದಲ್ಲಿ ಸೋಲನುಭವಿಸಿದ ಬಳಿಕ ಶ್ರೀರಾಮ್ ಇಂಥದೊಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ರೋಚಕ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಕೆ.ಎಲ್. ರಾಹುಲ್ ಅವರ ಅಜೇಯ ಶತಕ ಸಾಹಸದಿಂದ 4 ವಿಕೆಟಿಗೆ 197 ರನ್ ಪೇರಿಸಿತು. ಮುಂಬೈ ಭರ್ತಿ 20 ಓವರ್‌ಗಳಲ್ಲಿ 7 ವಿಕೆಟಿಗೆ 198 ರನ್ ಬಾರಿಸಿ ಗೆದ್ದು ಬಂದಿತು.
ಅಂಕಿತ್ ರಜಪೂತ್ ಪಾಲಾದ ಅಂತಿಮ ಓವರಿನಲ್ಲಿ ಮುಂಬೈ ಗೆಲುವಿಗೆ 15 ರನ್ ಬೇಕಿತ್ತು. ಮೊದಲ ಎಸೆತವೇ ನೋಬಾಲ್. ಇದನ್ನು ಪೊಲಾರ್ಡ್ ಸಿಕ್ಸರ್‌ಗೆ ಅಟ್ಟಿದರು. ಮುಂದಿನ ಎಸೆತಕ್ಕೆ ಬೌಂಡರಿ ಬಿತ್ತು. ಹೀಗೆ “ಒಂದೇ ಎಸೆತ’ಕ್ಕೆ 11 ರನ್ ಬಂತು. ಆದರೆ ಮುಂದಿನ ಎಸೆತದಲ್ಲಿ ಪೊಲಾರ್ಡ್ ವಿಕೆಟ್ ಬಿತ್ತು. ಪಂಜಾಬ್ ತುಸು ನಿರಾಳವಾಯಿತು. ಅನಂತರದ್ದು ಡಾಟ್ ಬಾಲ್. ಬಳಿಕ 2 ಸಿಂಗಲ್ಸ್ ಮಾತ್ರ ಲಭಿಸಿತು. ಅಂತಿಮ ಎಸೆತದಲ್ಲಿ ಅಲ್ಜಾರಿ ಜೋಸೆಫ್ ಅವಳಿ ರನ್ ತೆಗೆಯುವುದರೊಂದಿಗೆ ಮುಂಬೈ ತವರಿನಂಗಳದಲ್ಲಿ ಅತ್ಯಧಿಕ ರನ್ ಬೆನ್ನಟ್ಟಿ ವಿಜಯೋತ್ಸವ ಆಚರಿಸಿತು. ಕೆ.ಎಲ್. ರಾಹುಲ್ ಬಾರಿಸಿದ ಅಜೇಯ ಶತಕ ವ್ಯರ್ಥವಾಯಿತು!
Related Articles
“ಈ ಪಂದ್ಯಕ್ಕೆ ರೋಹಿತ್ ಅವರೇ ನಾಯಕರಾಗಬೇಕಿತ್ತು. ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಯಿತು. ಮುಂದಿನ ಪಂದ್ಯಕ್ಕೆ ರೋಹಿತ್ ಮರಳುತ್ತಾರೆ. ನಾನು ನಾಯಕತ್ವವನ್ನು ಅವರಿಗೆ ಬಿಟ್ಟುಕೊಟ್ಟು ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತ, ತಂಡಕ್ಕೇನು ಕೊಡುಗೆ ಸಲ್ಲಿಸಬೇಕು ಎಂದು ಯೋಚಿಸುತ್ತ ಉಳಿಯುತ್ತೇನೆ…’ ಎಂದು ಪೊಲಾರ್ಡ್ ಹೇಳಿದರು.
Advertisement
ಸಂಕ್ಷಿಪ್ತ ಸ್ಕೋರ್: ಪಂಜಾಬ್-4 ವಿಕೆಟಿಗೆ 197. ಮುಂಬೈ-20 ಓವರ್‌ಗಳಲ್ಲಿ 7 ವಿಕೆಟಿಗೆ 198 (ಪೊಲಾರ್ಡ್ 83, ಡಿ ಕಾಕ್ 24, ಸೂರ್ಯಕುಮಾರ್ 21, ಹಾರ್ದಿಕ್ 19, ಜೋಸೆಫ್ ಔಟಾಗದೆ 15, ಶಮಿ 21ಕ್ಕೆ 3, ಅಶ್ವಿನ್ 37ಕ್ಕೆ 1). ಪಂದ್ಯಶ್ರೇಷ್ಠ: ಕೈರನ್ ಪೊಲಾರ್ಡ್.
ದೇವರಿಗೆ ಕೃತಜ್ಞತೆ, ಹೆಂಡತಿಗೆ ಅರ್ಪಣೆ!ಇಂಥದೊಂದು ಆಟಕ್ಕೆ ಶಕ್ತಿ ಕೊಟ್ಟದ್ದೇ ದೇವರು. ಆತನಿಗೆ ಕೃತಜ್ಞತೆಗಳು. ಹಾಗೆಯೇ ಇಂದು ನನ್ನ ಹೆಂಡತಿಯ ಜನ್ಮದಿನ. ನನ್ನ ಈ ಸಾಧನೆಯನ್ನು ಆಕೆಗೆ ಅರ್ಪಿಸುತ್ತೇನೆ. ವಾಂಖೇಡೆಯಲ್ಲಿ ಬ್ಯಾಟಿಂಗ್ ನಡೆಸುವುದನ್ನು ನಾನು ಯಾವತ್ತೂ ಆನಂದಿಸುತ್ತೇನೆ. ಹೀಗಾಗಿ ಬೇಗನೇ ಕ್ರೀಸಿಗೆ ಬಂದೆ. ಅಶ್ವಿನ್ ಸ್ಪಿನ್ ಎಸೆತಗಳನ್ನು ದಂಡಿಸುವುದು ನನ್ನ ಯೋಜನೆಯಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಹೀಗಾಗಿ ಸ್ವಲ್ಪ ಹೊತ್ತು ತಾಳ್ಮೆಯಿಂದ ಉಳಿದೆ. ಇದು ಬ್ಯಾಟಿಂಗ್ ಯೋಗ್ಯ ಪಿಚ್ ಎಂಬುದು ತಿಳಿದಿತ್ತು.
ಕೈರನ್ ಪೊಲಾರ್ಡ್ ಎಕ್ಸ್‌ಟ್ರಾ ಇನ್ನಿಂಗ್ಸ್
* ಮುಂಬೈ ಇಂಡಿಯನ್ಸ್ ಕೊನೆಯ 10 ಓವರ್‌ಗಳಲ್ಲಿ 133 ರನ್ ಬಾರಿಸಿತು. ಇದು ಐಪಿಎಲ್‌ನ ಯಶಸ್ವಿ ಚೇಸಿಂಗ್ ವೇಳೆ ತಂಡವೊಂದು ಗಳಿಸಿದ ಅತ್ಯಧಿಕ ಮೊತ್ತ. ಹಿಂದಿನ ದಾಖಲೆ ಪಂಜಾಬ್ ಹೆಸರಲ್ಲಿತ್ತು. 2012ರ ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಅದು 126 ರನ್ ಬಾರಿಸಿ ಜಯ ಸಾಧಿಸಿತ್ತು.
* ಮುಂಬೈ 2ನೇ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತು (198 ರನ್). ಹಿಂದಿನ ದಾಖಲೆ 199 ರನ್. ಇದು ಕೂಡ ಪಂಜಾಬ್ ವಿರುದ್ಧ 2017ರ ಇಂದೋರ್ ಪಂದ್ಯದಲ್ಲಿ ದಾಖಲಾಗಿತ್ತು.
* ಕೈರನ್ ಪೊಲಾರ್ಡ್ ನಾಯಕತ್ವ ವಹಿಸಿದ ಮೊದಲ ಐಪಿಎಲ್ ಪಂದ್ಯದಲ್ಲೇ 2ನೇ ಅತ್ಯಧಿಕ ರನ್ ಬಾರಿಸಿದರು (83). ಕಳೆದ ಋತುವಿನಲ್ಲಿ ಕೆಕೆಆರ್ ವಿರುದ್ಧ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ 93 ರನ್ ಹೊಡೆದದ್ದು ದಾಖಲೆ.
* ಪೊಲಾರ್ಡ್ ಐಪಿಎಲ್ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ 10 ಸಿಕ್ಸರ್ ಸಿಡಿಸಿದ 2ನೇ ಸಾಧಕನೆನಿಸಿದರು. ಕಳೆದ ವರ್ಷ ಶ್ರೇಯಸ್ ಅಯ್ಯರ್ ಕೂಡ 10 ಸಿಕ್ಸರ್ ಹೊಡೆದಿದ್ದರು.
* ಪೊಲಾರ್ಡ್ ಮುಂಬೈ ಪರ ಪಂದ್ಯವೊಂದರಲ್ಲಿ 10 ಪ್ಲಸ್ ಸಿಕ್ಸರ್ ಬಾರಿಸಿದ 2ನೇ ಕ್ರಿಕೆಟಿಗ. 2008ರಲ್ಲಿ ಚೆನ್ನೈ ವಿರುದ್ಧ ಸನತ್ ಜಯಸೂರ್ಯ 48 ಎಸೆತಗಳಿಂದ ಅಜೇಯ 114 ರನ್ ಬಾರಿಸಿದ ವೇಳೆ 11 ಸಿಕ್ಸರ್ ಸಿಡಿಸಿದ್ದರು.
* ಪೊಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ 600 ಸಿಕ್ಸರ್ ಹೊಡೆದ 2ನೇ ಬ್ಯಾಟ್ಸ್‌ಮನ್ ಎನಿಸಿದರು. 925 ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ.
* ಕ್ರಿಸ್ ಗೇಲ್ 19 ಶತಕದ ಜತೆಯಾಟದಲ್ಲಿ ಕಾಣಿಸಿಕೊಂಡು ಡೇವಿಡ್ ವಾರ್ನರ್ ದಾಖಲೆ ಮುರಿದರು (18). ಗೇಲ್ ಮೊದಲ ವಿಕೆಟಿಗೆ ದಾಖಲಿಸಿದ 10ನೇ ಶತಕದ ಜತೆಯಾಟ ಇದಾಗಿದೆ.
* ರೋಹಿತ್ ಶರ್ಮ 2011ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಾರಂಭಿಸಿದ ಬಳಿಕ ಇದೇ ಮೊದಲ ಸಲ ಪಂದ್ಯವೊಂದರಿಂದ ಹೊರಗುಳಿದರು. ಇದಕ್ಕೂ ಮುನ್ನ ಸತತ 133 ಪಂದ್ಯಗಳನ್ನಾಡಿದ್ದಾರೆ. ಈ ಯಾದಿಯಲ್ಲಿ ರೋಹಿತ್‌ಗೆ ದ್ವಿತೀಯ ಸ್ಥಾನ. ಸುರೇಶ್ ರೈನಾ ಚೆನ್ನೈ ಪರ ಸತತ 134 ಪಂದ್ಯಗಳನ್ನಾಡಿದ್ದು ದಾಖಲೆ. ಕಳೆದ ವರ್ಷ ಅವರು ಒಂದು ಪಂದ್ಯವನ್ನು ತಪ್ಪಿಸಿಕೊಂಡಿದ್ದರು.
* ಡೇವಿಡ್ ಮಿಲ್ಲರ್ 4 ಕ್ಯಾಚ್‌ಗಳೊಂದಿಗೆ ಐಪಿಎಲ್‌ನ ಜಂಟಿ ದಾಖಲೆ ಬರೆದರು. ತೆಂಡುಲ್ಕರ್, ಕ್ಯಾಲಿಸ್, ವಾರ್ನರ್ ಮತ್ತು ರಾಹುಲ್ ತೆವಾಟಿಯ ಕೂಡ 4 ಕ್ಯಾಚ್ ಪಡೆದ ಕ್ಷೇತ್ರರಕ್ಷಕರಾಗಿದ್ದಾರೆ
* ಕೆ.ಎಲ್. ರಾಹುಲ್ ಐಪಿಎಲ್‌ನಲ್ಲಿ ಮೊದಲ ಶತಕ ಹೊಡೆದರು (ಔಟಾಗದೆ 100).
* ರಾಹುಲ್ ಇನ್ನಿಂಗ್ಸ್ ಆರಂಭಿಸಿ ಕೊನೆಯ ತನಕ ಬ್ಯಾಟಿಂಗ್ ವಿಸ್ತರಿಸಿದ ವೇಳೆ 4ನೇ ಸರ್ವಾಧಿಕ ರನ್ ಹೊಡೆದರು. ಡಿ ವಿಲಿಯರ್ (ಅಜೇಯ 133), ಗಿಲ್‌ಕ್ರಿಸ್ಟ್ (ಅಜೇಯ 109), ಆಮ್ಲ (ಅಜೇಯ 104) ಮೊದಲ ಸ್ಥಾನದಲ್ಲಿದ್ದಾರೆ. ಯೂಸುಫ್ ಪಠಾಣ್ ಕೂಡ ಆರಂಭಿಕನಾಗಿ ಬಂದು ಅಜೇಯ 100 ರನ್ ಮಾಡಿದ್ದಾರೆ.