ಪುತ್ತೂರು: 3ನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಸಂತ ಫಿಲೋ ಮಿನಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ನಳಿನ್ ಕುಮಾರ್ ಕಟೀಲು ಅವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿದ ಕಟೀಲು, 10 ವರ್ಷಗಳಿಂದ ಸಜ್ಜನ ರಾಜಕಾರಣದ ಮೂಲಕ ನಾನು ಕಲಿತ ವಿದ್ಯಾಸಂಸ್ಥೆಗೆ ಮತ್ತು ಜನತೆಗೆ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ. ನನ್ನ ಸಾಧನೆಗೆ ನಾನು ಕಲಿತ ಶಿಕ್ಷಣ ಸಂಸ್ಥೆಯೇ ಕಾರಣವಾಗಿದೆ. ಮುಂದೆಯೂ ನಾನು ಕಲಿತ ಈ ಶಾಲೆಯ ಹೆಸರಿಗೆ ಧಕ್ಕೆ ಬಾರದ ರೀತಿಯಲ್ಲಿ ರಾಜಕಾರಣ ಮಾಡುತ್ತೇನೆ ಎಂದು ಹೇಳಿದರು.
ನಾನು ಕಲಿತ ಶಾಲೆಯಿಂದ ಸಮ್ಮಾನ ಸ್ವೀಕರಿಸುವ ಭಾಗ್ಯಕ್ಕಿಂತ ಶ್ರೇಷ್ಠವಾದ ಪುಣ್ಯ ಬೇರೊಂದಿಲ್ಲ. ರಾಜಕೀಯ ದಲ್ಲಿ ಫಲಾಪೇಕ್ಷೆಗಾಗಿ ಸಮ್ಮಾನ ನಡೆಯುತ್ತಿ ರುವುದು ಸಹಜ. ನನ್ನ ಜೀವನದಲ್ಲಿ ಅದೆಷ್ಟೋ ಸಮ್ಮಾನವಾಗಿದೆ. ಆದರೆ ನಾನು ಕಲಿತ ಶಾಲೆಯ ಮುಖ್ಯಸ್ಥರು ನನ್ನ ಮೇಲೆ ಪ್ರೀತಿ, ವಿಶ್ವಾಸದಿಂದ ಸಮ್ಮಾನ ಮಾಡಿರುವುದು ಖುಷಿ ನೀಡಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ದೇವರ ಅನುಗ್ರಹ
ಫಿಲೋಮಿನಾ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ನ್ಯಾಯವಾದಿ ಎನ್.ಕೆ. ಜಗನ್ನಿವಾಸ ರಾವ್ ಮಾತನಾಡಿ, ನಮ್ಮ ಗುರಿ ಯಶಸ್ಸಿನ ಕಡೆಗೆ ಸಾಗಲು ದೇವರ ಅನುಗ್ರಹ ಬೇಕು. ಈ ಶಾಲೆಯ ಹಿರಿಯ ವಿದ್ಯಾರ್ಥಿ ನಳಿನ್ ಕುಮಾರ್ ಕಟೀಲು ದೇವರ ಅನುಗ್ರಹದಿಂದ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಹಸನ್ಮುಖೀ ನಳಿನ್ ಕುಮಾರ್ ಮುಂದೆ ಕೇಂದ್ರ ಸರಕಾರದಲ್ಲಿ ಸಚಿವರಾಗಲಿ ಎಂದರು.