ರಾಂಚಿ: ರಾಷ್ಟ್ರ ರಾಜಧಾನಿ ಆಡಳಿತಾತ್ಮಕ ನಿಯಂತ್ರಣದ ಮೇಲೆ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ವಿರೋಧಿಸುವ ಆಪ್ ಪ್ರಯತ್ನಕ್ಕೆ ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು ಬೆಂಬಲ ಶುಕ್ರವಾರ ಬೆಂಬಲ ಘೋಷಿಸಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಭೇಟಿಯಾದ ಬಳಿಕ ಈ ಬೆಳವಣಿಗೆ ನಡೆದಿದೆ. ಪತ್ರಿಕಾಗೋಷ್ಠಿಯ ಪ್ರಕಾರ, ಮುಂದಿನ ಸಂಸತ್ ಅಧಿವೇಶನದಲ್ಲಿ ಸುಗ್ರೀವಾಜ್ಞೆಯನ್ನು ಕಾನೂನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ. ಈ ವೇಳೆ ಆ ನಿರ್ಣಯವನ್ನು ಹಿಮ್ಮೆಟ್ಟಿಸುವಲ್ಲಿ ಸಾಮೂಹಿಕ ಐಕ್ಯತೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸೊರೇನ್ ಅವರ ಬೆಂಬಲ ಕೋರಿರುವುದಾಗಿ ಕೇಜ್ರಿವಾಲ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಆಪ್‌ಗೆ ಬೆಂಬಲ ಸೂಚಿಸಿರುವ ಜೆಎಂಎಂ ಮುಖ್ಯಸ್ಥ ಸೊರೇನ್, ಪ್ರಜಾಪ್ರಭುತ್ವದ ಮೇಲಿನ ಕೇಂದ್ರ ಸರ್ಕಾರದ ದಾಳಿ ಬಹಳ ಗಂಭೀರವಾದದ್ದು. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ವಿರೋಧಿಸಲು ಆಪ್‌ಗೆ ನಮ್ಮ ಬೆಂಬಲವಿದೆ ಎಂದಿದ್ದಾರೆ.