ಚಂಡೀಗಢ/ಲುಧಿಯಾನಾ: ಒಂದೊಂದೇ ರಾಜ್ಯಗಳಲ್ಲಿ ಐಎನ್‌ಡಿಐಎ ಒಕ್ಕೂಟದ ಮಿತ್ರಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸುವ ಮಾತನಾಡುತ್ತಿವೆ. ಇದರ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ಐಎನ್‌ಡಿಐಎ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯ ಇದೆ’ ಎಂದು ಒಪ್ಪಿಕೊಂಡಿದ್ದಾರೆ.
ಪಂಜಾಬ್‌ನ ಲುಧಿಯಾನಾದಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಖರ್ಗೆಯವರು ಐಎನ್‌ಡಿಐಎ ಒಕ್ಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಹೇಳಿದ್ದಾರೆ. ಸಹಮತ ಏರ್ಪಡದ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಹೋರಾಟ ಮಾಡಬೇಕಿದೆ ಎಂದು ಒಪ್ಪಿಕೊಂಡಿದ್ದಾರೆ.
ಕೆಲವು ರಾಜ್ಯಗಳಲ್ಲಿ ಇತರ ಪಕ್ಷಗಳ ಜತೆಗೆ ಚುನಾವಣ ಮೈತ್ರಿ ಮತ್ತು ಸಮನ್ವಯ ಏರ್ಪಟ್ಟಿಲ್ಲ ಎನ್ನುವುದು ನಿಜ. ಯಾರಾದರೂ ಮೈತ್ರಿ ಬಯಸಿ ಬಂದರೆ ಒಗ್ಗೂಡಿ ಮುಂದುವರಿಯೋಣ. ಇಲ್ಲದಿದ್ದರೂ ತೊಂದರೆ ಇಲ್ಲ. ಜಯ ಸಿಗುವವರೆಗೆ ಹೋರಾಟ ನಡೆಸಿಯೇ ಸಿದ್ಧ ಎಂದಿದ್ದಾರೆ.
ಇದು ಕೇವಲ ಪಂಜಾಬ್‌ಗ ಸಂಬಂಧಿಸಿದ ನಿರ್ಧಾರವಲ್ಲ. ದೇಶಕ್ಕೆ ಸಂಬಂಧಿಸಿದಂತೆ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದೂ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರು ಮತ್ತು ನಾಯಕರು ಜನರ ಬಳಿಗೆ ತೆರಳಿ ಅವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ನೆರವು ನೀಡಬೇಕು. ಆಗ ಮಾತ್ರ ಜಯ ಗಳಿಸಲು ಸಾಧ್ಯ ಎಂದು ಖರ್ಗೆ ಕಿವಿ ಮಾತು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಸ್‌ಪಿ 11 ಕ್ಷೇತ್ರಗಳನ್ನು ನೀಡುವ ಬಗ್ಗೆ ಹೇಳಿಕೆ ನೀಡಿದ್ದರೂ ಅದರ ಬಗ್ಗೆ ಕಾಂಗ್ರೆಸ್ ವರಿಷ್ಠರು ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಮಹಾರಾಷ್ಟ್ರದಲ್ಲಿ ಶಿವಸೇನೆ 23 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮಾತನಾಡಿದೆ. ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸುವ ಘೋಷಣೆ ಮಾಡಿದೆ. ಜೆಡಿಯು ಈಗಾಗಲೇ ಬಿಜೆಪಿ ಜತೆಗೆ ಮರು ಮೈತ್ರಿ ಮಾಡಿಕೊಂಡಿದೆ.