Advertisement

Politics: ಮೀಸಲು ಪರ ಮಹಿಳಾ ವಾದ- ಲೋಕಸಭೆಯಲ್ಲಿ ವಿವಿಧ ಪಕ್ಷಗಳ ನಾಯಕಿಯರ ಬಿರುಸಿನ ಚರ್ಚೆ

11:14 PM Sep 20, 2023 | Team Udayavani |

ಹೊಸದಿಲ್ಲಿ: ಬರೋಬ್ಬರಿ 27 ವರ್ಷಗಳ ಇತಿಹಾಸ ಇರುವ ಮಹಿಳಾ ಮೀಸಲು ಮಸೂದೆಯ ಪರ ವಾಗಿ ಹೊಸ ಸಂಸತ್‌ ಭವನದ ಲೋಕಸಭೆಯಲ್ಲಿ ಬುಧವಾರ ಪ್ರಮುಖವಾಗಿ ಮಹಿಳಾ ನಾಯಕಿ ಯರು ಪ್ರಬಲವಾಗಿ ತಮ್ಮ ವಾದ ಮಂಡಿಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಸೂದೆಗೆ ಪಕ್ಷದ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೆ, ತತ್‌ಕ್ಷಣದಿಂದಲೇ ಜಾರಿ ಯಾಗಬೇಕು ಮತ್ತು ಅದರಲ್ಲಿ ಇತರ ಹಿಂದುಳಿದ ವರ್ಗದವರಿಗೆ (ಒಬಿಸಿ) ಮೀಸಲು ನೀಡಬೇಕು ಎಂದು ವಾದಿಸಿದ್ದಾರೆ.

Advertisement

ಡಿಎಂಕೆ ಸಂಸದೆ ಕನಿಮೋಳಿ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು, ಹಾಲಿ ಕೇಂದ್ರ ಸರಕಾರ ಮಹಿಳೆಯರ ಗೌರವ ರಕ್ಷಿಸಲು ವಿಫ‌ಲವಾಗಿದೆ ಎಂದು ಆರೋಪಿಸಿದರು.  ಲೋಕಸಭೆಯಲ್ಲಿ ಚರ್ಚೆ ಆರಂಭಿಸಿದ್ದ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಸೂದೆಗೆ ಪಕ್ಷದ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಬಿಸಿ ಮೀಸಲು ಸಹಿತ ತತ್‌ಕ್ಷಣ ಮಸೂದೆ ಜಾರಿಗೆ ಬರಲೇಬೇಕು ಎಂದು ಹೇಳಿ ದ್ದಾರೆ. ಮಸೂದೆ ಜಾರಿಯಲ್ಲಿ ವಿಳಂಬ ಮಾಡು ವುದರಿಂದ ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.

13 ವರ್ಷಗಳಿಂದ: ರಾಜಕೀಯ ಜವಾಬ್ದಾರಿಗಾಗಿ ದೇಶದ ಮಹಿಳೆಯರು 13 ವರ್ಷಗಳಿಂದ ಕಾಯು ತ್ತಿದ್ದಾರೆ. ಈಗ ಪುನಃ ಅವರನ್ನು ಕಾಯುವಂತೆ ಹೇಳಲಾಗುತ್ತಿದೆ. ಇದು ಸರಿಯಲ್ಲ ಎಂದರು.ಅದರಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಮೀಸಲು ನೀಡಬೇಕು. ಅದಕ್ಕಾಗಿ ಜಾತಿ ಗಣತಿಯನ್ನೂ ನಡೆಸ ಬೇಕು ಎಂದು ಸೋನಿಯಾ ಆಗ್ರಹಿಸಿದ್ದಾರೆ.

ಹೊಗೆ ಹಿಡಿದಿರುವ ಅಡುಗೆ ಕೋಣೆಯಿಂದ ಶುಭ್ರ ಬೆಳಕು ಇರುವ ಕ್ರೀಡಾಂಗಣದ ವರೆಗೆ ನಮ್ಮ ಮಹಿಳಾ ಸಮುದಾಯದ ಪ್ರಯಾಣದ ಹಿಂದೆ ದೊಡ್ಡ ಇತಿಹಾಸ ಇದೆ. ಮಹಿಳೆ ಮಗುವಿಗೆ ಜನ್ಮ ನೀಡುತ್ತಾಳೆ, ಮನೆಯನ್ನು ನಿರ್ವಹಿಸುತ್ತಾಳೆ ಎಂದು ಹೇಳಿದ ಅವರು ಆಕೆಗೆ ಸಾಗರದಂತೆ ಹೃದಯದಲ್ಲಿ ತಾಳ್ಮೆ ಇದೆ. ಎಲ್ಲರ ಶ್ರೇಯೋಭಿವೃದ್ಧಿಗಾಗಿ ನದಿ ಯಂತೆ ಹರಿಯುತ್ತಾಳೆ ಎಂದರು ಸೋನಿಯಾ.

ವಿಶೇಷ ಅಧಿವೇಶನ ಏಕೆ?: ಮಸೂದೆ ಅಂಗೀಕಾ ರಕ್ಕಾಗಿ ವಿಶೇಷ ಅಧಿವೇಶನ ಆಯೋಜಿಸಿದ್ದೇ ಪ್ರಶ್ನಾರ್ಹ ಎಂದು ಎನ್‌ಪಿಸಿಯ ಸುಪ್ರಿಯಾ ಸುಳೆ ಟೀಕಿಸಿದ್ದಾರೆ. ಆದರೆ ಮಸೂದೆಯನ್ನು ಲೋಕಸಭೆ ಯಲ್ಲಿ ಮಂಡಿಸಿದನ್ನು ಸ್ವಾಗತಿಸಿದರು. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ಬಿಜೆಪಿ ವತಿಯಿಂದ ಇದೊಂದು “ಪೋಸ್ಟ್‌ ಡೇಟೆಡ್‌ ಚೆಕ್‌’ ಎಂದು ಲೇವಡಿ ಮಾಡಿದ್ದಾರೆ. ಜನಗಣತಿ ಮತ್ತು ಕ್ಷೇತ್ರ ಪುನರ್‌ ವಿಂಗಡಣೆ ವಿಚಾರ ಇನ್ನೂ ಇತ್ಯರ್ಥವಾಗದೇ ಇರುವುದರಿಂದ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬಹುದಿತ್ತು ಎಂದರು.

Advertisement

ಸಮಾನತೆ ಬೇಕು: ಮಹಿಳೆಯರಿಗೆ ಸಮಾನತೆ ಬೇಕು ಎಂದು ಮಸೂದೆಯ ಪರವಾಗಿ ಮಾತನಾಡಿದ ಡಿಎಂಕೆ ನಾಯಕಿ ಕನಿಮೋಳಿ ವಾದಿಸಿದರು. ಆಡಳಿತ ಪಕ್ಷದ ಸದಸ್ಯರ ಕೂಗಾಟದ ನಡುವೆ ಮಾತನಾಡಿದ ಅವರು, “ಈ ಮಸೂದೆ ಮಹಿಳೆಯರ ಬಗ್ಗೆ ಇರುವ ಅಪನಂಬಿಕೆ ಮತ್ತು ಅನ್ಯಾಯ ದೂರಗೊಳಿಸಲು ನೆರವಾಗಲಿ. ಜನರು ನಮ್ಮನ್ನು ಪತ್ನಿ, ಸಹೋದರಿ, ತಾಯಿ ಎಂದು ಗುರು ತಿಸುವುದು ಬೇಡ. ನಮಗೆ ಗೌರವ ಸೂಚಿಸುವುದು, ಪೂಜೆ ಮಾಡುವ ಪದ್ಧತಿಯೇ ಬೇಡ. ಮಹಿಳೆ ಯರಿಗೆ ಸಮಾನತೆ ನೀಡಿ ಎಂದು ಆಗ್ರಹಿಸಿದರು.

ಯಶಸ್ಸಿಗೆ ಹಲವರು: ಮಸೂದೆಯ ಯಶಸ್ಸಿಗೆ ಕಾಂಗ್ರೆಸ್‌ ಕಾರಣ ಎಂದು ಸೋನಿಯಾ ಗಾಂಧಿ ಹೇಳಿದ್ದಕ್ಕೆ ತಿರುಗೇಟು ನೀಡಿದ ಕೇಂದ್ರ ಸಚಿವೆ ಸ್ಮತಿ ಇರಾನಿ, “ಯಶಸ್ಸಿಗೆ ಹಲವು ಮಂದಿ ನಾವೇ ಕಾರಣ ಎನ್ನುತ್ತಾರೆ.  ವೈಫ‌ಲ್ಯಕ್ಕೆ ಯಾರೂ ಇಲ್ಲ.  ಧರ್ಮ ಆಧಾರಿತ ಮೀಸಲಿಗೆ ಆಗ್ರಹಿಸುವ ಮೂಲಕ ದೇಶವನ್ನು ಕಾಂಗ್ರೆಸ್‌ ತಪ್ಪು ದಾರಿಗೆ ಎಳೆಯುತ್ತಿದೆ’ ಎಂದು ದೂರಿದರು.

ಅಬ್ಬಕ್ಕ, ಓಬವ್ವ, ಚೆನ್ನಮ್ಮರ ನಾಡಿನ ಮಹಿಳೆ

ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಸ್ವಾಗತಿಸಿದ್ದಾರೆ. ಅಲ್ಲದೇ ಧೈರ್ಯ ಮತ್ತು ಸಾಹಸಕ್ಕೆ ಹೆಸರಾದಂತ ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ರಾಣಿ, ಒನಕೆ ಓಬವ್ವರ ಜನ್ಮಭೂಮಿ  ಕರ್ನಾಟಕದಿಂದ ಬಂದಿರುವ ನಾನು, ಓರ್ವ ಮಹಿಳೆಯಾಗಿ, ನಮ್ಮ ದೇಶದ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ಸಶಕ್ತರಾಗಿರುವ ಹಾಗೂ ಅರ್ಹರಾಗಿರುವ ಕೋಟ್ಯಂತರ ಮಹಿಳೆಯರ ಆಕಾಂಕ್ಷೆಗಳನ್ನು ಅರ್ಥೈಸಿಕೊಳ್ಳಲು  ಸಹಕರಿಸಿರುವ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.   ಕರ್ನಾಟಕದ ಕೆಲವು ಭಾಗದಲ್ಲಿ ಅನುಸರಿಸುತ್ತಿರುವ  ಅಳಿಯ ಸಂತಾನ ಸಂಪ್ರದಾಯವನ್ನೂ ಸುಮಲತಾ ಅವರು ಉಲ್ಲೇಖೀಸಿದರು. ಮಹಿಳೆಯರನ್ನು ಶಕ್ತಿ ಸ್ವರೂಪಿಣಿ ಎಂದು ಕರೆಯುವ ಏಕೈಕ ರಾಷ್ಟ್ರ ಭಾರತ ಇದು ಸನಾತನ ಸಂಸ್ಕೃತಿಯ ಪ್ರತಿಬಿಂಬ ಎಂದು ಹೇಳಿದ್ದಾರೆ.

“ಕ್ಯಾಚ್‌ ಮೀ ಇಫ್ ಯು ಕ್ಯಾನ್‌”

“ಲೋಕಸಭೆ ಚುನಾವಣೆಗೆ ಈಗಾಗಲೇ ಮಮತಾ ಬ್ಯಾನರ್ಜಿ ಮತ್ತು ಆಲ್‌ ಇಂಡಿಯಾ ತೃಣಮೂಲ ಕಾಂಗ್ರೆಸ್‌(ಎಐಟಿಸಿ) ಪಕ್ಷವು ಮಹಿಳೆಯರಿಗೆ ಶೇ.40ರಷ್ಟು ಚುನಾವಣ ಟಿಕೆಟ್‌ಗಳನ್ನು ಮೀಸಲಿರಿಸಿದೆ. ಎಲ್ಲ ರಾಜಕೀಯ ಪಕ್ಷಗಳು ನಿಮಗೆ ಸಾಧ್ಯವಾದರೆ, ಮಹಿಳಾ ಮೀಸಲಾತಿಯನ್ನು ಈಗಿರುವ ಶೇ.33ರಿಂದ ಶೇ.40ರಷ್ಟು ಏರಿಕೆ ಮಾಡಿ’ ಎಂದು ಟಿಎಂಸಿ ಸಂಸದೆ ಕಾಕೋಲಿ ಘೋಷ್‌ ದಾಸ್ತಿದಾರ್‌ ಸವಾಲು ಎಸೆದಿದ್ದಾರೆ. ಇದೇ ವೇಳೆ ಅವರು ಖ್ಯಾತ ಬಾಕ್ಸರ್‌ ಮೊಹಮದ್‌ ಅಲಿ ಅವರಿಗೆ ಅರ್ಪಿಸಿರುವ “ಕ್ಯಾಚ್‌ ಮೀ ಇಫ್ ಯು ಕ್ಯಾನ್‌..’ ಹಾಡನ್ನು ಉಲ್ಲೇಖೀಸಿದ್ದಾರೆ.

ದೇವೇಗೌಡರ ಅವಧಿಯಲ್ಲೇ ಮೊದಲ ಪ್ರಯತ್ನ

ಮಹಿಳಾ ಮೀಸಲು ಮಸೂದೆಯನ್ನು ಸಂಸತ್‌ನಲ್ಲಿ ಮೊದಲ ಬಾರಿಗೆ ಮಂಡಿಸಿದ್ದು 1996ರಲ್ಲಿ ದೇವೇ ಗೌಡರು ಪ್ರಧಾನಿ ಯಾಗಿದ್ದಾಗ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿ ದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಅವಧಿ ಯಲ್ಲಿ ಮಸೂದೆಯನ್ನು ಮೊದಲ ಬಾರಿಗೆ ಮಂಡಿಸಲಾಯಿತು ಎಂಬ ಸೋನಿಯಾ ಗಾಂಧಿ ಹೇಳಿಕೆ ಸರಿಯಲ್ಲ ಎಂದು  ತಿರುಗೇಟು ನೀಡಿದ್ದಾರೆ.

ಅಟಲ್‌ ಬಿಹಾರಿ ವಾಜಪೇಯಿ ಅವರು ಎರಡನೇ ಬಾರಿ ಪ್ರಧಾನಿಯಾದ ಸಂದರ್ಭ ದಲ್ಲಿ 2ನೇ ಬಾರಿಗೆ ಮಹಿಳಾ ಮೀಸಲು ಮಸೂದೆ ಮಂಡಿಸಲಾಗಿತ್ತು. 2008ರಲ್ಲಿ ಯುಪಿಎ ಅವಧಿಯಲ್ಲಿ ಮಂಡಿಸಲಾ ಗಿತ್ತಾದರೂ, ಸದನ ವಿಸರ್ಜನೆಗೊಂಡಿದ್ದರಿಂದ  ಆ ಸಂದರ್ಭದಲ್ಲಿ ಪ್ರಯತ್ನ ಕೈಗೂಡಲಿಲ್ಲ ಎಂದರು. ಮಸೂದೆ ಅಂಗೀಕಾರವಾ

ಗುವ ನಿಟ್ಟಿನಲ್ಲಿ ಸದನದಲ್ಲಿ ನಾಲ್ಕು ಬಾರಿ ಪ್ರಯತ್ನ ನಡೆಸಲಾಗಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಕ್ತಾಯವಾದ ಅನಂತರವೇ ಹೊಸ ಜನಗಣತಿ, ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ಜಾರಿಯಾಗಲಿದೆ ಎಂದರು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡಲು ಹೊರಟಿರುವುದು ಲಿಂಗ ಸಮಾನತೆ ನಿಟ್ಟಿನಲ್ಲಿ ನಮ್ಮ ಜೀವಿತಾವಧಿಯಲ್ಲಿ ಆಗುತ್ತಿರುವ ಅತ್ಯಂತ ಪರಿವರ್ತಕ ಕ್ರಾಂತಿಯಾಗಿದೆ.

ದ್ರೌಪದಿ ಮುರ್ಮು, ರಾಷ್ಟ್ರಪತಿ

ಸರಕಾರ ಮತ್ತು ಸಮಾಜ ಮಹಿಳೆಯರನ್ನು ನಮಸ್ಕರಿಸುವುದು, ಪೂಜೆ ಮಾಡುವುದನ್ನು ನಿಲ್ಲಿಸಿ. ಬದಲಾಗಿ ಪುರುಷರಿಗೆ ಸರಿಸಮವಾಗಿ ನಡೆಯುವಂತೆ ಮಾಡಿ. ನಮಗೆ ತಾಯಿ, ಸಹೋದರಿ, ಪತ್ನಿ ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ. ನಮಗೆ ಸರಿಸಮಾನವಾದ ಗೌರವ ಬೇಕಿದೆ.

ಕನ್ನಿಮೋಳಿ, ಡಿಎಂಕೆ ಸಂಸದೆ

ಮಸೂದೆ ಕೂಡಲೇ ಕಾಯ್ದೆಯಾಗಿ ಜಾರಿಗೆ ಬರಲಿ.  ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಕಾಯದೇ ಈಗಲೇ ಜಾರಿಗೆ ತರಬೇಕು. ಇದರಿಂದ ರಾಜಕೀಯ ಲಾಭಕ್ಕೆ  ಬಿಜೆಪಿ, ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಮಹಿಳಾ ಮೀಸಲು ಕಾಯ್ದೆಯನ್ನು ಶೀಘ್ರವೇ ಜಾರಿಗೆ ತರಬೇಕು. ಅಲ್ಲದೇ ಇದರಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾಕ ಮಹಿಳೆಯರಿಗೆ ಒಳಮೀಸಲು ಕಲ್ಪಿಸಬೇಕು.

ಡಿಂಪಲ್‌ ಯಾದವ್‌,  ಎಸ್‌ಪಿ ಸಂಸದೆ

ಇದೊಂದು  “ಪೋಸ್ಟ್‌ ಡೇಟೆಡ್‌ ಚೆಕ್‌’ ಆಗಿದೆ. ಇದು ಜಾರಿಯಗುವ ದಿನಾಂಕವನ್ನು ಸರಕಾರ ಘೋಷಿಸಬೇಕು. ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯಾಗದ ಹೊರತು ಮಸೂದೆ ಜಾರಿಯಾಗದಿದ್ದರೆ, ಈಗ ಅದನ್ನೇಕೆ ಮಂಡಿಸಲಾಗಿದೆ?

 ಸುಪ್ರಿಯಾ ಸುಳೆ, ಎನ್‌ಸಿಪಿ ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next