ಶ್ರೀನಗರ: ಇಂಡಿಯಾ ಒಕ್ಕೂಟದಿಂದ ಈಗ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಪಿಡಿಪಿ (ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ) ಕೂಡ ಹೊರಬರುತ್ತಿದೆಯೇ? ಪಿಡಿಪಿ ಕೂಡ ಏಕಾಂಗಿ ಸ್ಪರ್ಧೆ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಪಿಡಿಪಿ ನಾಯಕ ಸುಹೈಲ್ ಬುಖಾರಿ ಸೋಮವಾರ ಹೇಳಿದ್ದಾರೆ. ಆದರೆ ಬುಖಾರಿ ಹೇಳಿಕೆ ಸದ್ದು ಮಾಡುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಪಿಡಿಪಿ, “ಇಂಡಿಯಾ ಒಕ್ಕೂಟದ ಮೈತ್ರಿ ಮುರಿ ಯುವ ಮಾತಿಲ್ಲ. ಒಕ್ಕೂಟದ ಏಕತೆಗೆ ನಾವು ಬದ್ಧ ರಾಗಿದ್ದೇವೆ’ ಎಂದು ಹೇಳಿದೆ.
ಮೋದಿ ಜತೆ ಅಬ್ದುಲ್ಲಾ ರಾತ್ರಿ ಮಾತುಕತೆ: ಗುಲಾಂ ನಬಿ ಆರೋಪ
ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಒಮರ್ ಅಬ್ದುಲ್ಲಾ ಹಾಗೂ ಫಾರೂಕ್ ಅಬ್ದುಲ್ಲಾ ಅವರು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು, ಜನರ ಕಣ್ತಪ್ಪಿಸಲು ತಡರಾತ್ರಿಯ ವೇಳೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಜತೆಗೆ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ಡೆಮಾಕ್ರೆಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ. ತಂದೆ ಮಗ “ಡಬಲ್ ಗೇಮ್’ ಆಡುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಉದ್ದೇಶದಿಂದಲೇ ವಿಪಕ್ಷಗಳ ಇಂಡಿಯಾ ಒಕ್ಕೂಟವನ್ನು ನ್ಯಾಷನಲ್ ಕಾನ್ಫರೆನ್ಸ್ ತೊರೆದಿದೆ ಎಂದು ಆಜಾದ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಫಾರೂಕ್, “ಪ್ರಧಾನಿ ಹಾಗೂ ಸಚಿವರನ್ನು ಭೇಟಿಯಾಗಬೇಕೆಂದರೆ ಹಗಲಿನಲ್ಲಿಯೇ ಭೇಟಿಯಾಗುತ್ತೇನೆ. ರಾತ್ರಿಯ ವೇಳೆ ಏಕೆ ಭೇಟಿಯಾಗಲಿ? ಸುಖಾಸುಮ್ಮನೆ ನಮ್ಮ ಮೇಲೆ ಕಳಂಕ ಹೊರಿಸುತ್ತಿರುವ ಉದ್ದೇಶವಾದರೂ ಏನು? ಸಂವಿಧಾನದ 370ನೇ ವಿಧಿ ರದ್ದತಿ ಹಿಂದಿನ ನಿಮ್ಮ ಪಾತ್ರವನ್ನು ಬಹಿರಂಗಪಡಿಸಿ’ ಎಂದು ಕಿಡಿಕಾರಿದ್ದಾರೆ.