ಹೊಸದಿಲ್ಲಿ: ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿರುವಂತೆಯೇ ಇತ್ತ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.
ಟ್ರಂಪ್‌ರ ಭಾರತ ಪ್ರವಾಸವು ಕೇವಲ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವಿಸ್ತರಣೆಯಾಗಿ ಉಳಿಯದೇ, ಭಾರತಕ್ಕೆ ಅನುಕೂಲವಾಗುವಂಥ ಪರಿ ಣಾಮಗಳೇನಾದರೂ ಆಗಬೇಕು ಎಂದು ಕಾಂಗ್ರೆಸ್ ಹೇಳಿದೆ. ಜತೆಗೆ, ಇದು ಕೇವಲ ಫೋಟೋ ತೆಗೆಸಿಕೊಳ್ಳಲು ಸಿಗುವ ಅವಕಾಶ ದಂತೆ ಆಗಬಾರದು ಎಂದೂ ಹೇಳಿದೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಈ ಪ್ರವಾಸವು ಅಮೆರಿಕ-ಭಾರತ ಸಂಬಂಧದಲ್ಲಿ ಐತಿಹಾಸಿಕ ಮೈಲುಗಲ್ಲಾಗ ಲಿದ್ದು, ದೇಶದ ಈ ಸಾಧನೆಗಳ ಬಗ್ಗೆ ಪ್ರತಿಪಕ್ಷಗಳು ಹೆಮ್ಮೆ ಪಡಬೇಕು. ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಂದು ದೇಶವಾಗಿ ಯೋಚಿಸಬೇಕಾದಂಥ ಸಂದರ್ಭದಲ್ಲೂ ಕೊಳಕು ರಾಜಕೀಯ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ.
ಇನ್ನೊಂದೆಡೆ, ಟ್ರಂಪ್ ಅವರ ಅಹಮದಾಬಾದ್ ಭೇಟಿಯ ಸಿದ್ಧತೆಗಳ ಉಸ್ತುವಾರಿ ಹೊತ್ತಿರುವ ಸಮಿತಿಗೆ ಹಣಕಾಸು ಪೂರೈಕೆಗೆ ಸಂಬಂಧಿಸಿ ಪ್ರಶ್ನೆ ಎತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, “ಈ ಭೇಟಿಗಾಗಿ 100 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಸಮಿತಿಯ ಮೂಲಕ ಹಣವನ್ನು ವೆಚ್ಚ ಮಾಡಿಸಲಾಗುತ್ತಿದೆ. ಉಸ್ತುವಾರಿ ಸಮಿತಿಗೆ ಹಣಕಾಸನ್ನು ಯಾವ ಸಚಿವಾಲಯ ನೀಡುತ್ತಿದೆ ಎಂಬುದು ನಾಗರಿಕರಿಗೆ ಗೊತ್ತಾಗಬೇಕು, ಸರಕಾರ ಇದರಲ್ಲಿ ಮುಚ್ಚಿಡುವುದೇನಿದೆ’ ಎಂದು ಕೇಳಿದ್ದಾರೆ.
ತಾಜ್‌ಗೆ ಮೋದಿ ಭೇಟಿ ಇಲ್ಲ: ಇದೇ ವೇಳೆ, ಟ್ರಂಪ್ ದಂಪತಿಯ ತಾಜ್‌ಮಹಲ್ ಭೇಟಿ ವೇಳೆ ಪ್ರಧಾನಿ ಮೋದಿ ಸಾಥ್ ನೀಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ದೆಹಲಿಯ ಸರಕಾರಿ ಶಾಲೆಗೆ ಮೆಲಾನಿಯಾ ಟ್ರಂಪ್ ಭೇಟಿ ನೀಡಲಿದ್ದು, ಆ ಸಮಯದಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಡಿಸಿಎಂ ಸಿಸೋಡಿಯಾ ಉಪಸ್ಥಿತರಿರುವುದಿಲ್ಲ. ಮೊದಲಿಗೆ ಅದರಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ಇವರಿಬ್ಬರ ಹೆಸರೂ ಇತ್ತು. ಆದರೆ, ಶನಿವಾರ ಬೆಳಗ್ಗೆ ಸಿಎಂ ಮತ್ತು ಡಿಸಿಎಂ ಹೆಸರು ಕೈಬಿಟ್ಟಿರುವುದಾಗಿ ಮಾಹಿತಿ ಬಂತು ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳ್ಳಿಯ ಕೀಲಿಕೈ: ತಾಜ್‌ಮಹಲ್ ಭೇಟಿಯ ವೇಳೆ 600 ಗ್ರಾಂ ತೂಕದ ಬೆಳ್ಳಿಯ ಕೀಲಿಕೈವೊಂದನ್ನು ಟ್ರಂಪ್‌ಗೆ ಉಡುಗೊರೆಯಾಗಿ ನೀಡಲು ಆಗ್ರಾ ಸ್ಥಳೀಯಾಡಳಿತ ನಿರ್ಧರಿಸಿದೆ.