ಬೆಂಗಳೂರು: ದೇಶದ ರಾಜಕೀಯ ಇತಿಹಾಸ ದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬಿಜೆಪಿ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದ್ದು, ವಿಪಕ್ಷ ನಾಯಕರನ್ನು ಗುರಿ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಯಪುರದ ಎಐಸಿಸಿ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನನ್ನು ಬಿಜೆಪಿಯವರು ತಿಹಾರ್ ಜೈಲಿಗೆ ಹಾಕಿದ್ದರು. ತಾಯಿ ಸೋನಿಯಾ ಗಾಂಧಿ ಅವರು ಅಲ್ಲಿಗೆ ಬಂದು ನಮ್ಮನ್ನು ಭೇಟಿ ಮಾಡಿ ಶಕ್ತಿ ತುಂಬಿದರು. ಇದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಸದಾ ಗಾಂಧಿ ಕುಟುಂಬಕ್ಕೆ ಚಿರಋಣಿಯಾಗಿರುತ್ತೇನೆಂದು ತಿಳಿಸಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಲಬುರಗಿಯ ಬ್ಲಾಕ್ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಯೂತ್ ಕಾಂಗ್ರೆಸ್ ಸದಸ್ಯನಾಗಿದ್ದ ನನಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದು ಕಾಂಗ್ರೆಸ್ ಇತಿಹಾಸ ಎಂದರು.
ರಾಹುಲ್ ಗಾಂಧಿ ದೇಶದ ಉದ್ದಕ್ಕೂ ಪಾದಯಾತ್ರೆ ಮಾಡಿದ್ದಾರೆ. ಪಕ್ಷ ಸಂಕಷ್ಟದಲ್ಲಿ ಇರುವ ಸಮಯದಲ್ಲಿ ಅವರು ಭಾರತ ಜೋಡೋ ಯಾತ್ರೆ ಮಾಡಿದರು. ರಾಹುಲ್ ಈ ಪಾದಯಾತ್ರೆ ಮೂಲಕ ದೇಶದ ಜ್ವಲಂತ ಸಮಸ್ಯೆ ಗಳಾದ ಕೋಮು ಸಂಘರ್ಷ, ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಧ್ವನಿ ಎತ್ತಿ ದೇಶದ ಜನ ಕಾಂಗ್ರೆಸ್ ಮೇಲೆ ನಂಬಿಕೆ ಇಡುವಂತೆ ಮಾಡಿದ್ದಾರೆ ಎಂದರು.
ಕರ್ನಾಟಕ ಚುನಾವಣೆ ಎದುರಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ದೇಶಕ್ಕೆ ಸಂದೇಶ ರವಾನೆ ಮಾಡುತ್ತೇವೆ ಎಂದು ಖರ್ಗೆ ಅವರು ಹಾಗೂ ಸೋನಿಯಾ ಅವರಿಗೆ ಭರವಸೆ ನೀಡುತ್ತೇನೆ ಎಂದರು.