Advertisement

Politics: ಲೋಕಸಭಾ ಚುನಾವಣೆ: BJP ಸಕ್ರಿಯ ಸಭೆ

12:09 AM Jan 25, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರದ ಅಭಿವೃದ್ಧಿ ಹಾಗೂ ಸಾಧನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ವಿಕಸಿತ ಭಾರತ ಯಾತ್ರೆ, ಗ್ರಾಮ ಚಲೋ ಅಭಿಯಾನ ಸಹಿತ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿರುವ ಬಿಜೆಪಿ, ಬುಧವಾರ ಸರಣಿ ಸಭೆಗಳನ್ನು ನಡೆಸಿತು.

Advertisement

ಫೆಬ್ರವರಿ ತಿಂಗಳಲ್ಲಿ ಗ್ರಾಮ ಚಲೋ ಅಭಿಯಾನ ನಡೆಸುವ ಮೂಲಕ ಪೇಜ್‌ ಪ್ರಮುಖರಿಂದ ಹಿಡಿದು ಬೂತ್‌ ಹಾಗೂ ಗ್ರಾಮ ಮಟ್ಟದಲ್ಲಿ ಪ್ರತಿಯೊಬ್ಬರನ್ನು ತಲುಪುವ ಮೂಲಕ ಸಂಫ‌ಟನೆಯನ್ನು ಬಲಪಡಿಸಲು ನಿರ್ಧರಿಸಿದೆ. ವಿಕಸಿತ ಭಾರತ ಯಾತ್ರೆ ಮೂಲಕ ಕೇಂದ್ರದ ಯೋಜನೆಗಳ ಲಾಭಾರ್ಥಿಗಳನ್ನು ಸಂಪರ್ಕಿಸುವುದು, ಫ‌ಲಾನುಭವಿ ಆಗದವರನ್ನು ಕೇಂದ್ರ ಯೋಜನೆಯ ವ್ಯಾಪ್ತಿಗೆ ತರುವುದು, ಅವರಿಂದ ಪ್ರತಿಕ್ರಿಯೆಗಳನ್ನು ಪಡೆಯುವುದು ಸಹಿತ ವಿವಿಧ ಚಟುವಟಿಕೆಗಳನ್ನು ನಡೆಸುವ ಚರ್ಚೆ ನಡೆದಿದೆ.

ಗ್ರಾಮ ಚಲೋ ಅಭಿಯಾನದ ಮೂಲಕ ಹಳ್ಳಿ ಹಳ್ಳಿಗಳಲ್ಲೂ ಕೇಂದ್ರದ ಸಾಧನೆಯನ್ನು ಹೇಳುವುದರ ಜತೆಗೆ ರಾಜ್ಯ ಕಾಂಗ್ರೆಸ್‌ ಸರಕಾರದ ವೈಫ‌ಲ್ಯಗಳನ್ನೂ ಜನರಿಗೆ ತಿಳಿಸುವ ಕುರಿತೂ ಸಭೆಯಲ್ಲಿ ಚರ್ಚೆಗಳು ನಡೆದಿವೆ. ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯೂ ನಡೆದಿದ್ದು, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ ಅವರು ಕಾರ್ಯ ಕಾರಿಣಿ ಉದ್ಘಾಟಿಸಿದರೆ, ಪ್ರಧಾನ ಕಾರ್ಯದರ್ಶಿ ನಂದೀಶ್‌ ರೆಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ನಿಕಟಪೂರ್ವ ಅಧ್ಯಕ್ಷೆ ಗೀತಾ ವಿವೇಕಾನಂದ ಮತ್ತಿತರರು ಪಾಲ್ಗೊಂಡಿದ್ದರು.

ಇದರೊಂದಿಗೆ ಮಾಧ್ಯಮ ವಿಭಾಗದ ಸಭೆಯೂ ನಡೆದಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‌ ಕುಮಾರ್‌ ಮತ್ತಿತರರು ಪಾಲ್ಗೊಂಡಿದ್ದರು. ಜ.27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಹಿತ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.

ಕೆಇಎಸ್‌ ನಿವೃತ್ತ ಅಧಿಕಾರಿ ರುದ್ರಯ್ಯ ಬಿಜೆಪಿ ಸೇರ್ಪಡೆ

Advertisement

ಬೆಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶಾದ್ಯಂತ ಪ್ರಧಾನಿ ಮೋದಿ, ಬಿಜೆಪಿ ಅಲೆ ಇದೆ. ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಅಚ್ಚರಿಯ ಫ‌ಲಿತಾಂಶ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ನಿವೃತ್ತ ಕೆಇಎಸ್‌ ಅಧಿಕಾರಿ ಆರ್‌. ರುದ್ರಯ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಈ ಬಾರಿ ಕರ್ನಾಟಕ ಸಹಿತ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಹೆಚ್ಚು ಸ್ಥಾನ ಗಳಿಸಲಿದೆ ಎಂದರು.

ರುದ್ರಯ್ಯ ಅತ್ಯಂತ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ಅನೇಕ ನೀರಾವರಿ ಯೋಜನೆಗಳ ಜಾರಿಗೆ ಶ್ರಮಿಸಿದ್ದಾರೆ. ಅವರ ಶಕ್ತಿ ದೊಡ್ಡದಿದೆ. ಪಕ್ಷಕ್ಕೆ ಬಂದ ತತ್‌ಕ್ಷಣ ಅಧಿಕಾರ ಸಿಗುತ್ತದೆ ಎಂಬ ನಿರೀಕ್ಷಿಸಬಾರದು. ನಿರೀಕ್ಷೆ ಇಲ್ಲದೆ ಕೆಲಸ ಮಾಡಿದರೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ ಎಂದರು.

ಕಾರ್ಯಕರ್ತರನ್ನು ನಂಬಿರುವ ಪಕ್ಷ
ವಿಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಮಾಡಿರುವ ಅಭಿವೃದ್ಧಿ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಆಗ ಮಾತ್ರ ನಾವು ಗೆಲ್ಲಲು ಸಾಧ್ಯ. ಕುಟುಂಬವನ್ನೇ ನೆಚ್ಚಿಕೊಂಡು ಬಂದಿರುವ ಪಕ್ಷ ಕಾಂಗ್ರೆಸ್‌. ಕಾರ್ಯಕರ್ತರನ್ನು ನಂಬಿ, ಅವರಿಗೆ ಅವಕಾಶ ಮಾಡಿಕೊಡುತ್ತಿರುವುದು ಬಿಜೆಪಿ ಎಂದು ಹೇಳಿದರು. ಸಂಸದ ಎಸ್‌. ಮುನಿಸ್ವಾಮಿ, ರಾಯಚೂರು ಜಿಲ್ಲಾಧ್ಯಕ್ಷ ಡಾ| ಶಿವರಾಜ್‌ ಪಾಟೀಲ್‌, ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next