ಬೆಂಗಳೂರು: ಬಿಜೆಪಿಯವರು ನನ್ನನ್ನು ಸಂಪರ್ಕಿಸುವ ಪ್ರಶ್ನೆಯೇ ಬರುವುದಿಲ್ಲ. ನಾನು ಒಂದು ಸಲ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದೇನೆ. ಇಲ್ಲಿಯೇ ಮುಂದುವರಿಯುತ್ತೇನೆ. ಕಾಂಗ್ರೆಸ್ ಬಿಡುವ ಪ್ರಶ್ನೆ ನನ್ನ ಮುಂದೆ ಬರುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು. ದಿಲ್ಲಿಯಲ್ಲಿ ಗುರುವಾರ ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಇತ್ತ ನಗರದಲ್ಲಿ ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸ್ವಲ್ಪಹೊತ್ತು ಚರ್ಚಿಸಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅವರ ನಿರ್ಧಾರದ ಪರವೂ ಅಲ್ಲ; ವಿರೋಧವೂ ಇಲ್ಲ. ಅದು ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಮತ್ತು ನಾನು ನಿತ್ಯ ಮಾತನಾಡುತ್ತೇವೆ. ಇಬ್ಬರ ನಡುವೆ ಮಾತುಗಳಿಗೇನೂ ಕೊರತೆ ಇಲ್ಲ. ನಾವಿಬ್ಬರೂ ಸ್ನೇಹಿತರಾಗಿರುವುದರಿಂದ ಹಲವಾರು ವಿಚಾರ ಮಾತಾಡುತ್ತಿರುತ್ತೇವೆ ಹಾಗೂ ಕೇಳುತ್ತಿರುತ್ತೇವೆ. ಆದರೆ ಅವರವರ ಇಚ್ಛಾನುಸಾರ ರಾಜಕಾರಣ ಮಾಡುತ್ತಿರುತ್ತಾರೆ ಎಂದರು.
ವಿಶ್ವಾಸದ್ರೋಹ ಹೇಳಿಕೆಗೆ ಪ್ರತಿಕ್ರಿಯಿಸಲಾರೆ
ಶೆಟ್ಟರ್ ವಿಶ್ವಾಸದ್ರೋಹ ಎಂದು ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ಇವತ್ತು ಈ ಬಗ್ಗೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಅವರವರ ವೈಯಕ್ತಿಕ ತೀರ್ಮಾನ ಆಗಿದೆ. ನಾನಂತೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.