Advertisement

ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಹೆದರಲ್ಲ

04:03 PM Apr 15, 2022 | Team Udayavani |

ಅರಸೀಕೆರೆ: ದೇಶದ ಸಂವಿಧಾನದ ಆಶಯಂದತೆ ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮ ಬಾಳು ಎನ್ನುವ ತತ್ವ ಆದರ್ಶದಲ್ಲಿ ಕ್ಷೇತ್ರವನ್ನು ಸರ್ವ ಜನಾಂಗದ ಸುಂದರ ತೋಟವನ್ನಾಗಿ ಅಭಿವೃದ್ಧಿ ಪಡಿಸುವ ಸಂಕಲ್ಪ ತಮ್ಮದಾಗಿದೆ. ಇದಕ್ಕೆ ಯಾರೇ ರಾಜಕೀಯವಾಗಿ ಅಡ್ಡಿ ಆತಂಕ ಸೃಷ್ಟಿಸಿದರು ಅಂಜುವ ಜಾಯಮಾನ ತಮ್ಮದಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

Advertisement

ನಗರದ ಜಾಜೂರು ಸಮೀಪದ ಕೆಪಿಎಸ್‌ ಕಾಲೇಜು ಪಕ್ಕದಲ್ಲಿ ಕ್ಷೇತ್ರದ ದಲಿತಪರ ಸಂಘಟ ನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಡಾ.ಅಂಬೇಡ್ಕರ್‌ ಜಯಂತಿ ಹಾಗೂ ಬಾಬು ಜಗಜೀವನ್‌ ರಾಮ್‌ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕ್ಷೇತ್ರದ ದಲಿತ ಸಮಾಜದ ಬಂಧುಗಳ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಳೆದ 5 ವರ್ಷಗಳಿಂದ ಒಂದಲ್ಲ ಒಂದು ಕಾರಣಕ್ಕೆ ಈ ಎರಡು ಮಹನೀಯರ ಜಯಂತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲು ಸಾಧ್ಯವಾಗಿರಲ್ಲಿಲ್ಲ. ಈ ಬಾರಿ ದಲಿತಪರ ಸಂಘಟನೆಗಳು ಆಯೋಜಿಸಿದ ಅದ್ಧೂರಿ ಕಾರ್ಯಕ್ರಮದಲ್ಲಿ ಅವರ ಹಿತಾಸಕ್ತಿಗೆ ಸ್ಪಂದಿಸಿ ತಾವು ಕಾರ್ಯಕ್ರಮಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು.

ನಿಮ್ಮ ಹಕ್ಕುಗಳಿಗಾಗಿ ಹೋರಾಡಿ: ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಕೇಂದ್ರದ ಸಚಿವರಾಗಿದ್ದವರು ಸಂವಿಧಾನವನ್ನೇ ಬದಲಾಯಿಸಿ ಮೀಸಲಾತಿ ತೆಗೆಯುತ್ತೇವೆ ಎಂಬ ಹೇಳಿಕೆ ಮಾಧ್ಯಮಗಳ ಮೂಲಕ ನೀಡುತ್ತಾರೆ. ಅಲ್ಲದೆ ದಲಿತ ಸಮಾಜ ಒಡೆದು ಪ್ರತಿ ಜಾತಿಗೊಂದು ನಿಗಮ ಸ್ಥಾಪಿಸಿದ್ದಾರೆ. ಶೋಷಿತ ಸಮಾಜಗಳ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ನಿಗಮದ ಅಧ್ಯಕ್ಷರು ಹಾಗೂ ಕಚೇರಿಗಳ ಆಡಳಿತಾತ್ಮಕ ವೆಚ್ಚಗಳಿಗೆ ವಿನಿಯೋಗಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಸುದೀರ್ಘ‌ ವಾಗಿ ಚರ್ಚಿಸಿದ್ದೇನೆ. ಈ ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಬೇರೆ ಕಾರ್ಯಗಳಿಗೆ ಬಳಸಿಕೊಂಡಿರುವುದನ್ನು ವಿರೋಧಿಸಿದ್ದೇನೆ. ಇಂತಹ ಅನ್ಯಾಯಗಳ ವಿರುದ್ಧ ದಲಿತಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಬೇಕು. ಇಲ್ಲದಿದ್ದರೇ ಸಂವಿಧಾನ ಬದ್ಧ ಹಕ್ಕುಗಳನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘಟಿತರಾಗಿ ಬೆಳೆಯಬೇಕು: ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಜಿ.ಎಸ್‌.ಹನುಮಪ್ಪ ಮಾತನಾಡಿ, ಅನೇಕ ಶತಮಾನಗಳಿಂದ ತುಳಿತಕ್ಕೆ ಒಳಗಾದ ದಲಿತ ಸಮಾಜಕ್ಕೆ ಯಾವುದೇ ದೇವರು ಬಂದು ಕಾಪಾಡಲಿಲ್ಲ. ಆದರೆ ಡಾ. ಅಂಬೇಡ್ಕರ್‌ ದೇಶದ ಸಂವಿಧಾನದ ರಚನೆ ಮೂಲಕ ಮೀಸಲಾತಿ ನಮ್ಮ ಸಮುದಾಯಗಳಿಗೆ ನೀಡುವ ಮೂಲಕ ವರವನ್ನು ಕರುಣಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾವೆಲ್ಲ ಜಾಗೃತರಾಗಿ ಸಂಘಟಿತ ಶಕ್ತಿಯಾಗಿ ಬೆಳೆಯದ್ದಿದ್ದರೇ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ ಕಾರಣ ನಾವುಗಳು ರಾಜಕೀಯವಾಗಿ ಸಂಘಟಿತ ಶಕ್ತಿಯಾಗಿ ಬೆಳೆಯುವ ಮೂಲಕ ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕೆಂದರು.

Advertisement

ದಲಿತ ಸಂಘಟನೆ ಮುಖಂಡರಾದ ಹರತನಹಳ್ಳಿ ಜಯಣ್ಣ, ಮರಟಗೆರೆ ನಾಗಾರಾಜ್‌ ಬೋವಿ, ಬಾಣಾ ವರ ವೆಂಕಟೇಶ್‌, ಹಾರನಹಳ್ಳಿ ಎಚ್‌.ಟಿ. ಶಿವಮೂರ್ತಿ ಹಾಗೂ ಇನ್ನಿತರರು ಮಾತನಾಡಿ ತಾಲೂಕು ಆಡಳಿತದ ದಲಿತ ವಿರೋಧಿ ನೀತಿ ಖಂಡಿಸಿದರು.

ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷ ಕಾಂತೇಶ್‌, ದಲಿತ ಸಮಾಜದ ಮುಖಂಡರಾದ ಶೇಖರಪ್ಪ, ಸಿದ್ದನಾಯ್ಕ, ರಂಗಸ್ವಾಮಿ, ಗಂಗಾಧರ್‌ ನಾಯ್ಕ, ಈರಯ್ಯ, ಎ.ಪಿ.ಚಂದ್ರಯ್ಯ, ನಾರಾಯಣಸ್ವಾಮಿ, ನಾಗರಾಜ್‌ ನಾಯ್ಕ, ಮಂಜುಳಾ ಬಾಯಿ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನಾ ನಗರದ ಪ್ರವಾಸಿ ಮಂದಿರದ ಮುಂಭಾಗದಿಂದ ವೇದಿಕೆಯವರಗೂ ಜನಪದ ಕಲಾತಂಡಗಳೊಂದಿಗೆ ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಬಾಬು ಜಗಜೀವನ್‌ ರಾಮ್‌ ಭಾವಚಿತ್ರದ ಬೆಳ್ಳಿರಥದ ಮೆರವಣಿಗೆಯನ್ನು ರಾಷ್ಟ್ರೀಯ ಹೆದ್ದಾರಿ ಬಿ.ಎಚ್‌.ರಸ್ತೆಯಲ್ಲಿ ದಲಿತ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿಯಾಗಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next