Advertisement
ರಾಜಕೀಯ ಎಂದಾಕ್ಷಣ ನಮಗೆ ನೆನಪಾಗುವ ಒಂದು ಕ್ಲಾಸಿಕ್ ಜೋಕು ಹೀಗಿದೆ: ಭಾರತದ ಮಂತ್ರಿಯೊಬ್ಬರು ವಿದೇಶಕ್ಕೆ ಪ್ರವಾಸಕ್ಕೆ ತೆರಳಿದಾಗ ವಿದೇಶಿ ಮಂತ್ರಿಯ ಮನೆಯಲ್ಲಿ ವಾಸ್ತವ್ಯ ಹೂಡುತ್ತಾರೆ. ಅಲ್ಲಿನ ಸತ್ಕಾರ, ವಿಜೃಂಭಣೆ, ವೈಢೂರ್ಯ, ಶ್ರೀಮಂತಿಕೆ ಕಂಡು ಅಚ್ಚರಿಯೂ ಆಯಿತು. ಹಾಗೋ ಹೀಗೋ ಮನಸು ಮಾಡಿ ಈ ವಿಲಾಸೀ ಜೀವನದ ರಹಸ್ಯವೇನೆಂದು ಕೇಳಿಯೂಬಿಟ್ಟರು. ಅದಕ್ಕೇ ಆ ವಿದೇಶೀ ಮಂತ್ರಿ ತಮ್ಮ ಕೋಣೆಯ ಮೂಲೆಗೆ ಕರೆದೊಯ್ದು ಅಲ್ಲಿನ ಕಿಟಕಿಯ ಪರದೆಯನ್ನು ಸರಿಸಿ ದೂರದಲ್ಲಿ ಕಾಣುತ್ತಿದ್ದ ಸೇತುವೆಯೊಂದನ್ನು ತೋರಿಸಿ, “”ಆ ಕೆಲಸದಲ್ಲಿ ನನಗೆ ಐದು ಶೇಕಡ ಕಮಿಷನ್ ದೊರಕಿತು. ಹಾಗೇ ಅಲ್ಲಲ್ಲಿ ಇಂತಹ ಅಭಿವೃದ್ಧಿ ಕಾಮಗಾರಿಯಲ್ಲಿ ನನಗೊಂದು ಪುಟ್ಟ ಪಾಲಿರು ತ್ತದೆ. ಹಾಗೇ ಈ ಬಂಗಲೆ” ಎಂದೆಲ್ಲ ವಿವರಿಸಿದರು. ಸರಿ ಅಲ್ಲಿಂದ ನಮ್ಮ ಮಂತ್ರಿ ಹಿಂತಿರುಗುವಾಗ ಮುಂದೊಮ್ಮೆ ಭಾರತಕ್ಕೆ ಬಂದಾಗ ತಮ್ಮದೇ ಮನೆಯಲ್ಲಿ ತಂಗುವಂತೆ ವಿನಂತಿಸಿಕೊಂಡರು. ಕೆಲವೇ ತಿಂಗಳಲ್ಲಿ ಆ ವಿದೇಶಿ ಮಂತ್ರಿ ಭಾರತಕ್ಕೆ ಆಗಮಿಸಿ ಇದೇ ಮಂತ್ರಿಯ ಮನೆಗೆ ಭೇಟಿ ಕೊಟ್ಟು ಮೂಕವಿಸ್ಮಿತರಾದರು. ಇದೇನು ಮನೆಯೋ, ಮಹಲೋ! ಒಮ್ಮೆ ನೋಡಿದವರು ತೆರೆದ ಬಾಯಿ ಮುಚ್ಚಿ ಕೊಳ್ಳಲೂ ಸಾಧ್ಯವಾಗದ ಮಟ್ಟಿಗೆ ಅಲ್ಲಿ ಶ್ರೀಮಂತಿಕೆ ಎದ್ದು ಕಾಣುತ್ತಿತ್ತು. ವಿದೇಶಿ ಮಂತ್ರಿ ಇದರ ರಹಸ್ಯವೇನೆಂದು ಕೇಳಿದರು. ನಮ್ಮ ಮಂತ್ರಿ ಕೋಣೆಯ ಮೂಲೆಯೊಂದರ ಕಿಟಕಿಯ ಪರದೆ ಸರಿಸಿ ಹೊರತೋರಿಸುತ್ತ, “”ಅಲ್ಲೊಂದು ಸೇತುವೆ ಕಾಣುತ್ತಿದೆಯಾ?” ಎಂದು ಕೇಳಿದ. ವಿದೇಶಿ ಮಂತ್ರಿ ಒಮ್ಮೆ ಅಲ್ಲಿ ನೋಡಿ ತಿರುಗಿ ಆತನತ್ತ ನೋಡಿದ. ನಮ್ಮ ಮಂತ್ರಿ ಎಂದ, “”100 ಶೇಕಡ ಕಮಿಷನ್!”. ಅಲ್ಲಿ ಸೇತುವೆಯೇ ಇರಲಿಲ್ಲ!
Related Articles
Advertisement
ರಾಜಕಾರಣ ಒಂದು ರೀತಿ ಎಲ್ಲ ಉದ್ಯೋಗಗಳ ಮಿಶ್ರಣ. ನಟನೆ, ವಕೀಲಿ ವೃತ್ತಿ, ದರೋಡೆ, ಸಮಾಜಸೇವೆ, ವ್ಯವಹಾರ, ಅವ್ಯವಹಾರ, ರಿಯಲ್ ಎಸ್ಟೇಟ್, ಗುತ್ತಿಗೆದಾರಿಕೆ, ಜ್ಯೋತಿಷಿ… ಎಲ್ಲಾ ಹುದ್ದೆಗಳೂ ರಾಜಕಾರಣದಡಿಯಲ್ಲೇ ಬರುತ್ತವೆ. ಆದ್ದರಿಂದ ಒಬ್ಬ ರಾಜಕಾರಣಿ ಸಕಲಕಲಾವಲ್ಲಭನೂ, ಸಕಲವಿದ್ಯಾಪಾರಂಗತನೂ ಆಗಿರಬಲ್ಲ. ಅಂತೆಯೇ ಜೀವನದುದ್ದಕ್ಕೂ ಜನಸಾಮಾನ್ಯರಿಂದ ಅತೀ ಹೆಚ್ಚು ಉಗಿಸಿಕೊಳ್ಳುವ ವೃತ್ತಿಯಿದ್ದರೂ ಅದು ರಾಜಕಾರಣವೇ ಎಂಬುದು ಕೂಡ ಅಷ್ಟೇ ಸತ್ಯ.
ಒಂದಂತೂ ಬಹಳ ಸ್ಪಷ್ಟ. ರಾಜಕಾರಣಿಗಳಿಗೂ ಹಾಸ್ಯಕ್ಕೂ ಅದೇನೋ ಅವಿನಾಭಾವ ಸಂಬಂಧ. ರಾಜಕಾರಣಿಗಳ ಒಂದು ಕಲ್ಪನೆ ಬಂದರೂ ಅಸಡ್ಡೆ, ಕುಚೋದ್ಯ, ವ್ಯಂಗ್ಯನಗೆ, ವಿಚಿತ್ರಭಾವ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ. “ರಾಜಕಾರಣಿ’ ಎಂಬುದಕ್ಕೆ ನಮ್ಮಲ್ಲಿ ಪೂರ್ವಾಗ್ರಹ ವ್ಯಾಖ್ಯಾನ ಇರುವುದಕ್ಕೋ ಏನೋ ಹೃದಯಪೂರ್ವಕವಾದ ಗೌರವಭಾವ ಮೂಡುವುದು ತೀರಾ ಕಮ್ಮಿ. ಯಾವ ಮಟ್ಟಿಗೆಂದರೆ ರಾಜಕಾರಣಿಯೊಬ್ಬ “ಪದವೀಧರ’ ಎಂದರೂ “ನಕಲಿ ಅಂಕಪಟ್ಟಿ’ ಎನ್ನುವ ಪದ ಕಣ್ಮುಂದೆ ಸುಳಿದು ಮಾಯವಾಗುತ್ತದೆ. ಹಾಗಂತ ಎಲ್ಲ ರಾಜಕಾರಣಿಗಳನ್ನು ರಾಜಕಾರಣಿಗಳೆಂಬ ವರ್ಗಕ್ಕೆ ಸೇರಿಸಲು ಮನಸೊÕಪ್ಪುವುದಿಲ್ಲ. “ವಾಜಪೇಯಿ, ಜಾರ್ಜ್ ಫೆರ್ನಾಂಡಿಸ್‌ರು ಇಷ್ಟು ಕಾಲ ರಾಜಕಾರಣದಲ್ಲಿದ್ದರು’ ಎಂದರೆ ವಾಕ್ಯದೋಷ ಎದ್ದು ಅದೇನೋ ಇರಿಸುಮುರಿಸುಂಟಾಗುತ್ತದೆ. ಅದೇ ದೇವೇಗೌಡರು, ಯಡಿಯೂರಪ್ಪನವರು ಎನ್ನುವಾಗ ರಾಜಕಾರಣವೆಂಬ ಪದವಿದ್ದರಷ್ಟೇ ವಾಕ್ಯ ಪರಿಪೂರ್ಣಗೊಳ್ಳುತ್ತದೆ. ಆದ್ದರಿಂದ ಆಯಾ ವ್ಯಕ್ತಿತ್ವಕ್ಕೂ ರಾಜಕಾರಣ ಎಂಬ ಪದದೊಂದಿಗೆ ಅಲಿಖೀತವಾದ ನಂಟು ಇದೆ.
ಭಾರತೀಯರಾದ ನಾವು ರಾಜಕಾರಣವನ್ನು ಅದೆಷ್ಟು ಅಸಹ್ಯ ಭಾವದಿಂದ ತಾತ್ಸಾರವಾಗಿ ನೋಡುತ್ತೇವೆಯೋ ಅದಕ್ಕೂ ಮಿಗಿಲಾಗಿ ಅದನ್ನು ಅಭಿಮಾನದಿಂದ ಕಾಣುತ್ತೇವೆ. ರಾಜಕಾರಣಿಗಳ ಆರೋಪ-ಪ್ರತ್ಯಾರೋಪಗಳನ್ನು ಓದಿ ಓದಿ ಒಂದು ದಿನ ಅದು ಇಲ್ಲವೆಂದರೂ ಪತ್ರಿಕೆಯಲ್ಲೇನೋ “ಮಿಸ್’ ಆದ ಅನುಭವ ನಮ್ಮದಾಗುತ್ತದೆ.
ಕೊನೆಯದಾಗಿ, ಒಮ್ಮೆ ನಗರದ ಒಂದೆಡೆ ಭಾರಿ ಟ್ರಾಫಿಕ್ ಜಾಮ್ ಆಯಿತು. ಐದು, ಹತ್ತು, ಇಪ್ಪತ್ತು ನಿಮಿಷಗಳಾದರೂ ಒಂದು ಗಾಡಿಯೂ ಕದಲಲಿಲ್ಲ. ತೀರಾ ಅರ್ಜೆಂಟಿನಲ್ಲಿದ್ದ ಕಾರಿನ ಚಾಲಕನೊಬ್ಬ ರಸ್ತೆ ವಿಭಾಜಕದ ಪಕ್ಕದಲ್ಲೇ ನಿಂತಿದ್ದ ಪೊಲೀಸ್‌ನ ಬಳಿ “ಏನಾಗಿದೆ?’ ಎಂದು ಕೇಳಿದ.
ಅದಕ್ಕೆ ಆತ ಹೇಳಿದ್ದು ಹೀಗೆ, “”ನಗರದ ಪ್ರಮುಖ ರಾಜಕಾರಣಿಗಳನ್ನು ಉಗ್ರರು ಅಪಹರಿಸಿ ಒತ್ತೆಯಾಗಿಸಿಕೊಂಡಿದ್ದಾರೆ. ಬಿಡಿಸಬೇಕಾದರೆ ಐದು ಕೋಟಿ ರೂಪಾಯಿಯನ್ನು ಸಾಯಂಕಾಲದೊಳಗೆ ತಲುಪಿಸಬೇಕೆಂದು ಕೇಳುತ್ತಿದ್ದಾರೆ. ಒಂದೊಮ್ಮೆ ಸಂಜೆಯೊಳಗೆ ಹಣ ತಲುಪಿಸಲು ಸಾಧ್ಯವಾಗದೇ ಇದ್ದಲ್ಲಿ ಸುಮಾರು ಐನೂರು ಲೀಟರ್ ಪೆಟ್ರೋಲಿನಿಂದ ಎಲ್ಲ ರಾಜಕಾರಣಿಗಳನ್ನು ಸುಡುತ್ತಾರೆಂದೂ ಬೆದರಿಕೆ ಹಾಕಿದ್ದಾರೆ” ಎನ್ನುತ್ತ ಮುಂದುವರಿಸಿ ಹೇಳಿದ, “”ಅದಕ್ಕಾಗಿ ನಾವೆಲ್ಲ ಜನರ ಬಳಿ ಸಂಗ್ರಹ ಮಾಡುತ್ತಿದ್ದೇವೆ” ಕುತೂಹಲಭರಿತನಾಗಿ ಕಾರು ಚಾಲಕ ಕೇಳಿದ: “”ಪ್ರತಿಯೊಬ್ಬರೂ ಎಷ್ಟೆಷ್ಟು ನೀಡುತ್ತಿದ್ದಾರೆ?”ಅದಕ್ಕೆ ಪೊಲೀಸ್ ಹೇಳಿದ, “”ಐದು ಲೀಟರ್ ಪೆಟ್ರೋಲು!”A politician needs the ability to foretell what is going to happen tomorrow, next week, next month and next year. And to have the ability afterwards to explain why it didn’t happen ಎಂದು ರಾಜಕಾರಣಿಗಳ ಬಗ್ಗೆ ವಿನ್‌ಸ್ಟನ್ ಚರ್ಚಿಲ್ ಹೇಳಿದ್ದು ಅಪಹಾಸ್ಯವೇನೂ ಅನ್ನಿಸುವುದಿಲ್ಲ. ಮೇಲೆ-ಕೆಳಗಾದರೂ ನಾವು ಭಾರತೀಯರು ರಾಜಕಾರಣಿಗಳನ್ನು ನೋಡುವ ದೃಷ್ಟಿಕೋನ ಬದಲಾಗದು. – ಅರ್ಜುನ್ ಶೆಣೈ