ಹುಬ್ಬಳ್ಳಿ : ಯಡಿಯೂರಪ್ಪ ಸೈನಿಕರ ರಕ್ತದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಯಡಿಯೂರಪ್ಪ ಹೇಳಿಕೆಯಲ್ಲಿ ಸ್ವಾರ್ಥ ಎದ್ದು ಕಾಣುತ್ತಿದ್ದು, ದೇಶಕ್ಕಾಗಿ ಸೈನಿಕರು ಪ್ರಾಣ ತ್ಯಾಗ , ಹೋರಾಟದ ಮಾಡುತ್ತಿದ್ದಾರೆ, ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶದ ನುಡಿಗಳನ್ನಾಡಿದರು.
ಬಿಜೆಪಿ ಸೈನಿಕರ ತ್ಯಾಗವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ. ಅಮಿತ್ ಶಾ ಎಲ್ಲೇ ಭಾಷಣ ಮಾಡಿದರೂ ಸೈನಿಕರ ಹೋರಾಟವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಮಾತುಗಳನ್ನಾಡುತ್ತಿದ್ದಾರೆ ಎಂದರು.
ಗಡಿಯಲ್ಲಿ ಬಿಜೆಪಿಯಾಗಲಿ, ಆರ್‌ಎಸ್‌ಎಸ್ ಆಗಲಿ ಹೋರಾಟ ಮಾಡುತ್ತಿಲ್ಲ. ಯಡಿಯೂರಪ್ಪ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆ ಯಾಚಿಸಬೇಕು ಎಂದು ದಿನೇಶ್ ಆಗ್ರಹಿಸಿದರು.
ನಾವೆಲ್ಲರೂ ದೇಶ ಭಕ್ತರೇ , ನಾವು ಸರ್ಕಾರ ಮತ್ತು ಯೋಧರ ಬೆಂಬಲಕ್ಕೆ ನಿಲ್ಲುತ್ತೇವೆ. ರಾಹುಲ್ ಗಾಂಧಿ ಸೇರಿ ನಾವೆಲ್ಲರೂ ದೇಶ ಭಕ್ತರೇ ಆಗಿದ್ದೇವೆ. ದೇಶ ಭಕ್ತ ನಮ್ಮ ಗುತ್ತಿಗೆಯಲ್ಲಿ ಇದೆ ಎನ್ನುವಂತೆ ಮಾತನಾಡುವುದು ಸರಿಯಲ್ಲ ಎಂದರು.
ವಾಯು ದಾಳಿ ಮಾಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲುತ್ತದೆ ಎನ್ನುವ ಹೇಳಿಕೆ ನೀಡುವ ಮೂಲಕ ಯಡಿಯೂರಪ್ಪ ಅವರು ಪಕ್ಷದೊಳಗೆ ಸೇರಿದಂತೆ ವ್ಯಾಪಕ ವಿರೋಧ ಎದುರಿಸಿದ್ದರು.