Advertisement
ತಮ್ಮ ಮೇಲಿನ ಮೊಟ್ಟೆ ದಾಳಿ ಘಟನೆ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ವಾಜಪೇಯಿ ಅವರ 100ನೇ ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿಕೊಂಡು ಹೋಗುವಾಗ ಮೊಟ್ಟೆ ಎಸೆದಿದ್ದಾರೆ. ಈಗಾಗಲೇ ಕೋರ್ಟ್‌ನಲ್ಲಿ ವಕೀಲರ ವೇಷದಲ್ಲಿ ಬಂದ ಇಬ್ಬರು ನೀನು ರಾಜೀನಾಮೆ ಕೊಡಬೇಕು. ಕೊಡಲಿಲ್ಲ ಅಂದರೆ ನಿನ್ನ ಕೊಲೆ ಆಗುತ್ತದೆ. ಕೊಲೆಯಾದರೆ ಡಿ.ಕೆ. ಸುರೇಶ್, ಕುಸುಮಾ ಅವರನ್ನು ಶಾಸಕರನ್ನಾಗಿ ಮಾಡಿ ಸಚಿವೆ ಮಾಡುತ್ತಾರೆ. ಅದರ ಬದಲು ನೀನೇ ರಾಜಿನಾಮೆ ಕೊಡು ಎಂದು ಬೆದರಿಸಿದ್ದರು. ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್, ಸಿಸಿಬಿಯಲ್ಲಿರುವ ಡಿವೈಎಸ್ಪಿ (ಎಸಿಪಿ) ಧರ್ಮೇಂದ್ರ ಅವರ ಮೂಲಕ, ನನ್ನ ವಿರುದ್ಧ ಯಾವ ರೀತಿ ಕೇಸ್ ಹಾಕಬೇಕೆಂದು ನಿರ್ಧರಿಸುತ್ತಾರೆ. ನನ್ನ ವಿರುದ್ಧ ಷಡ್ಯಂತ್ರದಲ್ಲಿ ಅವರ ಪಾತ್ರವೂ ಇದೆ ಎಂದು ಆರೋಪಿಸಿದರು.
Related Articles
ಗುಪ್ತಚರ ವರದಿ ಪ್ರಕಾರ ನಿಮ್ಮ ಮೇಲೆ ಕೊಲೆ ಯತ್ನ ನಡೆಯಲಿದೆ. ಕಾರಿನಲ್ಲಿ ಕುಳಿತುಕೊಳ್ಳಿ ಎಂದು ಪೊಲೀಸರು ಹೇಳಿದ್ದರು. ಕೆಲವೇ ಕ್ಷಣದಲ್ಲಿ ನನ್ನ ಮೇಲೆ ಮೊಟ್ಟೆ ಎಸೆಯಲಾಗಿದೆ. ಪೊಲೀಸರು ನನ್ನನ್ನು ಕಾಪಾಡಿದರು ಎಂದು ಮುನಿರತ್ನ ಹೇಳಿದರು. ಘಟನೆ ವೇಳೆ 100ಕ್ಕೂ ಹೆಚ್ಚು ಮಂದಿ ಪೊಲೀಸರು ಇದ್ದರು. 2-3 ಪೊಲೀಸ್ ವ್ಯಾನ್‌ಗಳನ್ನು ತರಿಸಿಕೊಂಡಿದ್ದಾರೆ. 100 ಜನ ಪೊಲೀಸರು ಬರಬೇಕೆಂದರೆ, ನನ್ನ ಕೊಲೆ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು ಎಂಬುದು ಗೊತ್ತಾಗುತ್ತಿದೆ. ಪೊಲೀಸರು ಇಲ್ಲದಿದ್ದರೆ, ನನ್ನ ಕೊಲೆ ನಡೆಯುತ್ತಿತ್ತು. ಸುಮಾರು 150 ಮಂದಿ ಒಟ್ಟಿಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ದೂರು ನೀಡಿದರೆ ಕಾನೂನು ಕ್ರಮ: ಡಿಸಿಪಿಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್, ಶಾಸಕ ಮುನಿರತ್ನ ಅವರು ಕಾರ್ಯಕ್ರಮ ಮುಗಿಸಿ ವಾಪಸ್ ಹೋಗುವಾಗ ಘಟನೆ ನಡೆದಿದೆ. ಸುಮಾರು 15 ಮೀಟರ್ ದೂರದಿಂದ ಮೊಟ್ಟೆ ಎಸೆತವಾಗಿದೆ. ಶಾಸಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕಡೆಯಿಂದ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕೃತ್ಯದಲ್ಲಿ ಭಾಗಿಯಾದ ಮೂವರನ್ನು ಮುಂಜಾಗ್ರತ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ಪೊಲೀಸರು ಕೂಡ ಶಾಸಕರಿಗೆ ಮೊದಲೇ ಕಾರ್‌ನಲ್ಲಿ ಹೋಗುವಂತೆ ಸೂಚಿಸಿದ್ದರು. ಮುಖ್ಯರಸ್ತೆ ಹತ್ತಿರವಿದ್ದ ಕಾರಣ ನಡೆದುಕೊಂಡು ಹೋದರು ಎಂದರು. ಮೊಟ್ಟೆ ಎಸೆತ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ?
ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ನಿವಾಸಿಗಳು ಎನ್ನಲಾದ ಕೃಷ್ಣಮೂರ್ತಿ, ಚಂದ್ರು ಹಾಗೂ ವಿಶ್ವನಾಥ್ ಅವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಮೂವರು ಕಾಂಗ್ರೆಸ್ ಮುಖಂಡರ ಆಪ್ತರಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಎಂಬುದು ಗೊತ್ತಾಗಿದೆ. ಆದರೆ, ಶಾಸಕರ ಮೇಲೆ ಮೊಟ್ಟೆ ಎಸೆಯಲು ಕಾರಣಗಳೇನು? ಎಂಬುದು ಗೊತ್ತಾಗಿಲ್ಲ. ಹೀಗಾಗಿ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮುನಿರತ್ನರಿಂದ ದೂರು ದಾಖಲು
ಪ್ರಕರಣ ಸಂಬಂಧ ಆಸ್ಪತ್ರೆಯಲ್ಲಿರುವ ಶಾಸಕ ಮುನಿರತ್ನ ಅವರಿಂದ ಹೇಳಿಕೆ ಪಡೆದು ದೂರು ಸ್ವೀಕರಿಸಲಾಗಿದೆ. ಎಫ್ಐಆರ್ ಕೂಡ ದಾಖಲಿಸಿಕೊಳ್ಳಲಾಗುತ್ತದೆ. ಸದ್ಯ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ವ್ಯಕ್ತಿಗಳ ಹಿನ್ನೆಲೆ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.