ಹೊಸದಿಲ್ಲಿ: ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಕುರಿತು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಆಡಿರುವ ಮಾತುಗಳು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಜಮ್ಮು – ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಮಾತಾಡುತ್ತಾ ದೀಕ್ಷಿತ್ ಅವರು, ಜ| ಬಿಪಿನ್ ರಾವತ್‌ರನ್ನು ‘ಬೀದಿ ಗೂಂಡಾ’ ಎಂದು ಹಳಿದಿದ್ದರು. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಅವಹೇಳನಕಾರಿ ಹೇಳಿಕೆಗಾಗಿ ಕಾಂಗ್ರೆಸ್ ದೇಶದ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ. ಮತ್ತೂಂದೆಡೆ, ವಿವಾದದಿಂದ ದೂರವುಳಿಯಲು ಯತ್ನಿಸಿದ್ದ ಕಾಂಗ್ರೆಸ್ ಕೂಡ ಸೋಮವಾರ ಪ್ರತಿಕ್ರಿಯಿಸಿದ್ದು, ಹೇಳಿಕೆಯನ್ನು ಸ್ವತಃ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರೇ ಖಂಡಿಸಿದ್ದಾರೆ.
ದೀಕ್ಷಿತ್ ಹೇಳಿಕೆ ಕುರಿತು ಸೋಮವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ‘ಸೇನೆಯು ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತದೆ. ಭಾರತವನ್ನು ಸುರಕ್ಷಿತವಾಗಿಡುವಲ್ಲಿ ಅವರ ಪಾತ್ರ ಮಹತ್ವದ್ದು. ದೇಶದ ಯಾವುದೇ ರಾಜಕಾರಣಿಯೂ ಸೇನಾ ಮುಖ್ಯಸ್ಥರ ಬಗ್ಗೆ ಇಂಥ ಹೇಳಿಕೆ ನೀಡಬಾರದು. ನಮ್ಮ ಪಕ್ಷದ ನಾಯಕರೊಬ್ಬರು ಸೇನಾ ಮುಖ್ಯಸ್ಥರ ಕುರಿತು ಆಡಿರುವ ಮಾತುಗಳು ಆಕ್ಷೇಪಾರ್ಹ. ಅದನ್ನು ನಾನು ಖಂಡಿಸುತ್ತೇನೆ,’ ಎಂದಿದ್ದಾರೆ.
ಸೋನಿಯಾ ಕ್ಷಮೆಗೆ ಪಟ್ಟು: ಇದೇ ವೇಳೆ, ದೀಕ್ಷಿತ್ ಹೇಳಿಕೆಗೆ ಸಂಬಂಧಿಸಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ. ಸೋಮವಾರ ಮಾತನಾಡಿದ ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್, ‘ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಹಳಿಯುವಂಥ ಕೆಲಸವನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಈಗ ಅದರ ನಾಯಕರೊಬ್ಬರು ಸೇನೆಯ ಬಗ್ಗೆಯೇ ಕೆಟ್ಟದಾಗಿ ಮಾತನಾಡಿರುವುದು ಆಘಾತಕಾರಿ ವಿಚಾರ. ದೀಕ್ಷಿತ್ ನೀಡಿರುವ ಸ್ಪಷ್ಟನಾ ಟ್ವೀಟ್‌ನಲ್ಲಿ ಕ್ಷಮೆ ಯಾಚನೆ ಕಂಡುಬಂದಿಲ್ಲ. ಅವರ ಹೇಳಿಕೆಯು ಸೇನೆಗೆ ಅವಮಾನ ಮಾಡುವ, ನೈತಿಕ ಸ್ಥೈರ್ಯ ಕುಂದಿಸುವ ಉದ್ದೇಶ ಹೊಂದಿದೆ. ಈಗ ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಈ ಹೇಳಿಕೆ ಕುರಿತು ಕ್ಷಮೆ ಯಾಚಿಸಬೇಕು,’ ಎಂದಿದ್ದಾರೆ. ಇದೇ ವೇಳೆ, ಕಳೆದ ವರ್ಷ ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ರಾಹುಲ್ ಅವರು ಆಡಿದ್ದ ‘ಹತ್ಯೆಯ ದಲ್ಲಾಳಿ’ ಎಂಬ ಮಾತುಗಳನ್ನೂ ಪ್ರಸ್ತಾವಿಸಿದ ಸೀತಾರಾಮನ್, ಕಾಂಗ್ರೆಸ್ ನಾಯಕತ್ವವು ತನ್ನ ನಾಯಕರಿಗೆ ಏನನ್ನು ಬೇಕಾದರೂ ಮಾತಾಡಬಹುದು ಎಂದು ಸಡಿಲಬಿಟ್ಟಂತಿದೆ ಎಂದು ಕಿಡಿಕಾರಿದ್ದಾರೆ. ಇನ್ನೊಂದೆಡೆ, ಕೇಂದ್ರ ಸಚಿವ ಕಿರಣ್ ರಿಜಿಜು ಅವರೂ ಈ ಕುರಿತು ಟ್ವೀಟ್ ಮಾಡಿ, ‘ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ? ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎಂದು ಕರೆಯಲು ಕಾಂಗ್ರೆಸ್ ನಾಯಕನಿಗೆ ಎಷ್ಟು ಧೈರ್ಯವಿರಬೇಕು,’ ಎಂದು ಪ್ರಶ್ನಿಸಿದ್ದಾರೆ.
ದೀಕ್ಷಿತ್ ಹೇಳಿದ್ದೇನು?
ಜಮ್ಮು – ಕಾಶ್ಮೀರದಲ್ಲಿ ಸೇನೆಯ ಜೀಪಿಗೆ ಯುವಕನನ್ನು ಮಾನವ ಗುರಾಣಿಯನ್ನಾಗಿಸಿದ ಘಟನೆ ಕುರಿತು ಸೇನಾ ಮುಖ್ಯಸ್ಥ ಜ. ರಾವತ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ರವಿವಾರ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಸುದ್ದಿವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ್ದರು. ಈ ವೇಳೆ ಜ.ರಾವತ್‌ರನ್ನು ಟೀಕಿಸಿದ್ದ ದೀಕ್ಷಿತ್, ‘ನಮ್ಮ ಸೇನೆಯು ಪಾಕಿಸ್ಥಾನಿ ಸೇನೆಯಂತೆ ಮಾಫಿಯಾ ಸೇನೆಯಲ್ಲ. ಪಾಕ್ ಸೇನೆಯ ಅಧಿಕಾರಿಗಳೂ ಆಗಾಗ್ಗೆ ಗೂಂಡಾಗಳಂತೆ ಹೇಳಿಕೆ ನೀಡುತ್ತಾರೆ. ಆದರೆ, ಈಗ ನಮ್ಮ ಸೇನಾ ಮುಖ್ಯಸ್ಥರೂ ‘ಬೀದಿ ಗೂಂಡಾ’ ರೀತಿ ಹೇಳಿಕೆ ನೀಡಿದ್ದಾರೆ,’ ಎಂದಿದ್ದರು. ಇದು ವಿವಾದ ಸೃಷ್ಟಿಸುತ್ತಿದ್ದಂತೆ ಟ್ವೀಟ್ ಮಾಡಿದ್ದ ದೀಕ್ಷಿತ್, ‘ಸೇನಾ ಮುಖ್ಯಸ್ಥರ ಬಗ್ಗೆ ಮಾತನಾಡುವಾಗ ನಾನು ಸೂಕ್ತ ಪದ ಬಳಕೆ ಮಾಡಿರಲಿಲ್ಲ. ಇದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ,’ ಎಂದು ಹೇಳಿದ್ದರು.