ಶಿವಮೊಗ್ಗ: ಕಾಂಗ್ರೆಸ್ಸಿಗರಿಗೆ ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ ಏನೇನೋ ಆರೋಪ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಎಲ್ಲ ರಾಜಕಾರಣಿಗಳು ನಾವು ರಾಜ್ಯದ ಜನರ ಪ್ರತಿನಿಧಿಗಳು ಎಂದು ನೆನಪಿಟ್ಟುಕೊಳ್ಳಬೇಕಿತ್ತು. ರಾಜ್ಯದ ಜನರ ಎದುರು ನಾವು ದಿನೇ ದಿನೇ ಚಿಕ್ಕವರಾಗುತ್ತಿದ್ದೇವೆ. ಇದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿ ಮತ ಕೇಳಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆ ಸರಿಯಲ್ಲ. ಅಶ್ಲೀಲ ಪದಗಳ ಬಳಕೆಯೂ ಹೆಚ್ಚಾಗಿದೆ. ಇದರಿಂದ ನಾನು ನೊಂದಿದ್ದೇನೆ. ನಾನು ಸೇರಿದಂತೆ ಎಲ್ಲರೂ ವೈಯಕ್ತಿಕ ಟೀಕೆ ಮಾಡುವುದನ್ನು ಬಿಡಬೇಕಿದೆ. ವೈಯಕ್ತಿಕ ಟೀಕೆ ಮಾಡದಂತೆ ತಡೆಯಲು ಕಾನೂನು ರೂಪಿಸಲು ಸಾಧ್ಯವಿಲ್ಲ. ಆದರೆ ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಅವರೇ ಉತ್ತರ ನೀಡುತ್ತಾರೆ ಎಂದರು.
ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಲು ಸಿದ್ಧತೆ ನಡೆದಿದೆ. ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ನಾವೇ ಗೆಲುವು ಸಾಧಿಸುತ್ತೇವೆ. ಎರಡು ಕ್ಷೇತ್ರದಲ್ಲೂ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದ ಸಚಿವರು, ಕಾಂಗ್ರೆಸ್ ಜಾತಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ನಮಗೆ ದುಡ್ಡು ಹಂಚುತ್ತಿದ್ದಾರೆ ಎನ್ನುತ್ತಾರೆ. ಆದರೆ ಅವರೆ ಹೆಚ್ಚು ದುಡ್ಡು ಹಂಚುತ್ತಿದ್ದಾರೆ ಎಂದರು.
ಇದನ್ನೂ ಓದಿ:ಸುಮ್ಮನೆ ಗೋವಿನ ಹೆಸರಲ್ಲಿ ನಾಟಕವೇಕೆ? : ಸರಕಾರಕ್ಕೆ ಡಾ. ಎಚ್.ಸಿ.ಮಹಾದೇವಪ್ಪ ಪ್ರಶ್ನೆ
ಜಗಜೀವನ್ ರಾಮ್ ಮಿಷನ್ ಅಡಿ ನೀರು ಬಳಕೆಗೆ ಮೀಟರ್ ಹಾಕಲಾಗುತ್ತದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಎಷ್ಟು ನೀರು ಖರ್ಚಾಗಿದೆ ಎಂದು ತಿಳಿಯಲು ಮೀಟರ್ ಅಳವಡಿಸಲು ತೀರ್ಮಾನಿಸಿದ್ದೇವೆ. ಮನೆಮನೆಗೆ ಗಂಗೆ ಯೋಜನೆಯಡಿ ಪ್ರತಿ ಮನೆಗೂ ನೀರು ಕೊಡುತ್ತೇವೆ. ಕಾಂಗ್ರೆಸ್ ಸರ್ಕಾರವಿದ್ದಾಗಲೂ ಪೆಟ್ರೋಲ್ ಬೆಲೆ ಹೆಚ್ಚಾಗಿತ್ತು. ಈಗಲೂ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದೆ. ಪೆಟ್ರೋಲ್ ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಇಂದು ಐದು ಲಕ್ಷಕ್ಕೂ ಹೆಚ್ಚು ಜನ ಸೇರಿ ಮೂರು ವಿಶೇಷ ಕನ್ನಡದ ಹಾಡುಗಳನ್ನು ಸಾಮೂಹಿಕವಾಗಿ ಹಾಡಿದ್ದಾರೆ. ಇದು ಕರ್ನಾಟಕದಲ್ಲೇ ಐತಿಹಾಸಿಕ ದಿನ. ಇದಕ್ಕಾಗಿ ಸಚಿವ ಸುನೀಲ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.