ಮಂಗಳೂರು: ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ನಮ್ಮ ರಾಜಕೀಯ ವ್ಯವಸ್ಥೆ ಸಮಾಜವನ್ನು ಜಾತಿ, ಧರ್ಮ, ದ್ವೇಷ ಮತ್ತು ಮೂಲಭೂತವಾದದ ಮೂಲಕ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದೆ. ಇದು ದೇಶ ದ್ರೋಹಿ ಮನಸ್ಥಿತಿಯಾಗಿದೆ ಎಂದು ಮಹಾತ್ಮ ಗಾಂಧೀಜಿಯವರ ಮರಿಮಗ ಮತ್ತು ಸಾಮಾಜಿಕ ಚಿಂತಕ ತುಷಾರ್ ಗಾಂಧಿ ಅಭಿಪ್ರಾಯ ಪಟ್ಟರು.
ಶುಕ್ರವಾರ(ಸೆ20) ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಬಡತನವಿದ್ದರೂ ಒಗ್ಗಟ್ಟಿದ್ದ ಕಾರಣ ಬ್ರಿಟಿಷರಿಂದ ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಯಿತು. ಆದರೆ ಇಂದು ರಾಜಕೀಯ ನಾಯಕರು ಅಧಿಕಾರಕ್ಕಾಗಿ ಬ್ರಿಟಿಷರ ವಿಭಜಿಸಿ ಆಳುವ ತಂತ್ರವನ್ನು ಅನುಸರಿಸಿ ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ ಎಂದು ಅರೋಪಿಸಿದರು.
ಮಹಾತ್ಮ ಗಾಂಧೀಜಿಯವರು ಮೂರು ಬಾರಿ ಭೇಟಿ ನೀಡಿದ ಮಂಗಳೂರಿನಲ್ಲಿಯೂ ಇಂದು ಮೂಲಭೂತವಾದ ವಿಜ್ರಂಭಿಸುತ್ತಿದೆ. ಗಾಂಧೀಜಿಯವರನ್ನು ಹತ್ಯೆ ಮಾಡಿದವರ ಸಿದ್ಧಾಂತಗಳು ಇಲ್ಲಿ ಮರೆಯುವ ಮೂಲಕ ಗಾಂಧಿ ಸಂದೇಶಗಳು ಮರೆಯಾಗಿರುವುದು ನಾಚಿಕೆಗೇಡಿನ ವಿಚಾರ ಎಂದು ತುಷಾರ್ ಗಾಂಧಿ ಖೇದ ವ್ಯಕ್ತ ಪಡಿಸಿದರು.
ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಲ್. ಧರ್ಮ, ಪ್ರಮುಖರಾದ, ಡಾ. ಶಾಂತರಾಮ ಶೆಟ್ಟಿ, ಡಾ| ವೂಡೇ ಪಿ ಕೃಷ್ಣ, ಪ್ರಮೋದ್ ಕುಮಾರ್ ರೈ, ಡಾ ಶೇಷಪ್ಪ ಕೆ. ಮೊದಲಾದವರಿದ್ದರು.