ಬೆಂಗಳೂರು: “ರಾಜಕಾರಣಿಗಳಿಗೂ ವೈಯಕ್ತಿಕ ಬದುಕು ಇರುತ್ತದೆ. ಯಡಿಯೂರಪ್ಪನವರಿಗೂ ಇದೆ, ಶೋಭಾ ಕರಂದ್ಲಾಜೆಯವರಿಗೂ ಇದೆ. ಅದೇ ರೀತಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಇದೆ’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕಂದಾಯ ಅದಾಲತ್ ಪ್ರಯುಕ್ತ ಕಡತ ವಿಲೇವಾರಿ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಮಾರಸ್ವಾಮಿ ಸ್ವಂತ ಕೆಲಸಕ್ಕೆ ಅಮೆರಿಕಕ್ಕೆ ಹೋಗಿಲ್ಲ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ. ಅದಕ್ಕೆ ಟೀಕೆಗಳನ್ನು ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿದೆ. ಬಿಜೆಪಿಯವರು ರಾಜ್ಯ ಪ್ರವಾಸ ಮಾಡಲಿ, ಬರ ಪೀಡಿತ ಪ್ರದೇಶಗಳಿಗೂ ಹೋಗಲಿ. ಏನಾದರೂ ಸಲಹೆ ಇದ್ದರೆ ಕೊಡಲಿ ಎಂದು ತಿಳಿಸಿದರು.
ಶೋಭಾ ಕರಂದ್ಲಾಜೆ ಅವರು ಸರ್ಕಾರ ಬದುಕಿದೆಯಾ ಎಂದು ಕೇಳುತ್ತಾರೆ. ಹೀಗೆಂದರೆ ಏನು ಅರ್ಥ? ಅವರೂ ಸಹ ಮಂತ್ರಿಯಾಗಿ ಕೆಲಸ ಮಾಡಿದವರು. ಸರ್ಕಾರದ ಆಡಳಿತ ಹೇಗೆ ಎಂಬುದು ಅವರಿಗೂ ಗೊತ್ತಿದೆ. ಟೀಕೆ ಮಾಡಲು ಮಾತನಾಡುವುದು ಬೇಡ ಎಂದರು.
ನಾನು ಯಾವುದೇ ಇಲಾಖೆಯಲ್ಲಿದ್ದರೂ ಕಡತ ವಿಲೇವಾರಿ ಸಪ್ತಾಹ ಮಾಡ್ತೇನೆ. ಈಗಲೂ ಕಂದಾಯ ಇಲಾಖೆಯಲ್ಲಿ ಮಾಡುತ್ತಿದ್ದೇನೆ. ಜನರ ಕೆಲಸಗಳು ಬೇಗ ಇತ್ಯರ್ಥ ಆಗಬೇಕು. ಇಲಾಖೆಗಳಲ್ಲಿ ಬಹಳಷ್ಟು ಫೈಲ್‌ಗಳು ವಿಲೇವಾರಿಗೆ ಬಾಕಿ ಇವೆ. ಹೀಗಾಗಿ, ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.