Advertisement

ದಿಕ್ಕು ತಪ್ಪಿಸುತ್ತಿದೆ ಅಧಿವೇಶನ

12:42 PM Dec 20, 2021 | Team Udayavani |

ಆಳಂದ: ಸಂಕಷ್ಟದಲ್ಲಿರುವ ನಾಡಿನ ಜನರು, ರೈತರು, ಕಾರ್ಮಿಕರ ಅಭಿವೃದ್ಧಿ ಕುರಿತು ಚರ್ಚಿಸಿ ನೀತಿ ನಿರೂಪಣೆ ಜಾರಿಗೆ ತರದೇ ಕಾಮಗಾರಿಗಳ ಪರ್ಸಂಟೇಜ್‌ ಹಂಚಿಕೊಂಡ ಬಗ್ಗೆ ಸದನದಲ್ಲಿ ಶಾಸಕರು, ಸಚಿವರು ಚರ್ಚಿಸುವ ಮೂಲಕ ಜನರ ದಿಕ್ಕು ತಪ್ಪಿಸಲು ಕಾಲಹರಣ ಮಾಡುತ್ತಿದ್ದಾರೆ ಎಂದು ಸಿಪಿಐ ರಾಜ್ಯ ಕಾರ್ಯಕಾರಣಿ ಮಂಡಳಿ ಸದಸ್ಯ ಹಾಗೂ ಜಿಲ್ಲಾ ಕಿಸಾನ ಸಭಾ ಅಧ್ಯಕ್ಷ ಮೌಲಾ ಮುಲ್ಲಾ ಕಿಡಿಕಾರಿದ್ದಾರೆ.

Advertisement

ತಾಪಂ ಕಚೇರಿ ಬಳಿ ಕಾರ್ಮಿಕರ ಬೇಡಿಕೆ ಮತ್ತು ಪಂಪಸೆಟ್‌ಗಳಿಗೆ ನಿರಂತರ ವಿದ್ಯುತ್‌ ಒದಗಿಸಲು ಒತ್ತಾಯಿಸಿ ಅಖೀಲ ಭಾರತ ಕಿಸಾನಸಭಾ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ನಡುವೆಯೂ ಬೆಳಗಾವಿಗೆ ನಿಯೋಗದೊಂದಿಗೆ ತೆರಳಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಶಾಸಕರು, ಸಚಿವರಿಗೆ ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿ ಹಿಂದುರುಗಿದ ಬಳಿಕ ರವಿವಾರ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಮಗಾರಿಗೆ ಶಾಸಕರುಗಳು ಶೇ. 40ರಷ್ಟು ಪ್ರತಿಶತ ಪರ್ಸಂಟೇಜ್‌ ಅಷ್ಟೇ ಅಲ್ಲ. ಈ ವಿಷಯಕ್ಕೆ ವಿರೋಧಿಸಲು ಯಾರಿಗೂ ನೈತಿಕತೆಯಿಲ್ಲ. ಶೇ. 10 ಆಗಿರಲಿ ಅಥವಾ ಶೇ. 40ರಷ್ಟಿರಲಿ ಪರ್ಸಂಟೇಜ್‌ ವಿಷಯದಲ್ಲಿ ಕಳ್ಳತನವೇ ಆಗಿದೆ. ರಾಜ್ಯದ ಜನರ ಚಿಂತೆಯಿಲ್ಲದ ಶಾಸನ ಸಭೆ ಇದಾಗಿದೆ ಎಂದು ಆರೋಪಿಸಿದರು.

ಪಂಪಸೆಟ್‌ಗಳಿಗೆ ಸಮರ್ಪಕ ಹಾಗೂ ಸಕಾಲಕ್ಕೆ ವಿದ್ಯುತ್‌ ಪೂರೈಕೆ, ಉದ್ಯೋಗ ಖಾತ್ರಿ ಸಮಪರ್ಕ ಅನುಷ್ಠಾನ, ಗ್ರಾಪಂಗಳಲ್ಲಾದ ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆಯೊಂದಿಗೆ ತಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ನಮ್ಮ ಬೇಡಿಕೆಗಳು ಸದನದಲ್ಲಿ ಚರ್ಚೆಯಾಗಲಿ ಎಂದು ಬೆಳಗಾವಿಯಲ್ಲಿ ಅಧಿವೇಶನ ಜಾಗಕ್ಕೆ ತರಳಿ 50ಕ್ಕೂ ಹೆಚ್ಚು ಶಾಸಕರಿಗೆ ಮನವಿ ಸಲ್ಲಿಸಿ, ಮನವರಿಕೆ ಮಾಡಿ ಹಿಂದಿರುಗಿದ್ದೇವೆ. ಆದರೂ ಬೇಡಿಕೆ ಈಡೇರುವ ವರೆಗೆ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಪಂಪಸೆಟ್‌ಗಳಿಗೆ ವಿದ್ಯುತ್‌ ಬೇಡಿಕೆ ಪೂರೈಸುತ್ತಿಲ್ಲ. ರೈತರು ತಪ್ಪು ಮಾಡುವಂತ ಅನಿವಾರ್ಯತೆ ಸೃಷ್ಟಿಸಿ ದಂಡ ವಿಧಿಸುವುದು ಸರಿಯಲ್ಲ. ಟ್ರಾನ್ಸಫಾರ್ಂಗಳು ಸುಟ್ಟ ಮೇಲೆ ಅಳವಡಿಸುವಂತೆ ಶಾಸಕರುಗಳು ಅಧಿಕಾರಿಗಳಿಗೆ ಗದರಿಸುತ್ತಾರೆ. ಆದರೆ ಹೆಚ್ಚಿನ ಒತ್ತಡ ಸಹಿಸದೇ ಪದೇ ಪದೇ ಹಾಳಾಗುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ. ಸದನದಲ್ಲಿ ಈ ಕುರಿತು ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದರು.

Advertisement

ಜೆಡಿಎಸ್‌ ಶಾಸಕ ಬಂಡೆಪ್ಪ ಕಾಂಶೆಪೂರೆ, ಕಾಂಗ್ರೆಸ್‌ನ ಈಶ್ವರ ಖಂಡ್ರೆ, ಪ್ರಿಯಾಂಕ್‌ ಖರ್ಗೆ, ಡಾ| ಅಜಯಸಿಂಗ್‌, ಎಂ.ವೈ. ಪಾಟೀಲ, ಬಿಜೆಪಿಯ ಶಾಸಕ ಸುಭಾಷ ಗುತ್ತೇದಾರ, ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ದತ್ತಾತ್ರೆಯ ಪಾಟೀಲ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳ 50ಕ್ಕೂ ಹೆಚ್ಚು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಈ ಪೈಕಿ ಶಶೀಲ ಜಿ. ನಮೋಶಿ ಅವರು ಶೀಘ್ರವೇ ರೈತರ ಸಂಘಟನೆಗಳನ್ನು ಒಳಗೊಂಡು ಜೆಸ್ಕಾಂ ಅಧಿಕಾರಿಗಳ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳೋಣ ಎಂದಿದ್ದಾರೆ. ಇನ್ನುಳಿದವರಿಗೆ ರೈತರ ಸಮಸ್ಯೆ ಕೇಳಲು ಪುರಸೊತ್ತು ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಿಸಾನಸಭಾ ಕಾರ್ಯಾಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ, ತಂಜುಮೆ ಇನ್ಸಾಫ್‌ನ ಮುಖಂಡ ದಸ್ತಗೀರ ಭೂಸನೂರ, ರೈತ ಮೈನೋದ್ದೀನ್‌ ಜವಳಿ ಇತರರು ನಿಯೋಗದಲ್ಲಿದ್ದರು. ಧರಣಿಯಲ್ಲಿ ಕಿಸಾನಸಭೆ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ತಂಜುಮೆ ಇನ್ಸಾಫ್‌ ಸಂಚಾಲಕ ಖಲೀಲ ಅನ್ಸಾರಿ, ಫಕ್ರೋದ್ದೀನ್‌ ಗೊಳಾ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ ಮತ್ತಿತರರು ಪಾಲ್ಗೊಂಡಿದ್ದರು. ತಾಪಂ ಎದುರು ನಡೆದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ 10ನೇ ದಿನಕ್ಕೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next