Advertisement
ದಲಿತ ಸಿಎಂ ಕೂಗು, ಡಿಸಿಎಂ ಹುದ್ದೆ ಸೃಷ್ಟಿ, ಸಚಿವರ ದಿಲ್ಲಿ ಭೇಟಿ, ವಿರೋಧಿ ಬಣದ ನಾಯಕರ ಭೇಟಿ, ದಲಿತ ಸಚಿವರ ಸಭೆ, ವಿಪಕ್ಷ ನಾಯಕರ ಭೇಟಿಯಲ್ಲೂ “ಸಾಹುಕಾರ್’ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಸಿಎಂ ಬಣದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಕೇಂದ್ರವಾಗಿಯೇ ನಡೆಯುತ್ತಿರುವ ಈ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.
ವಾರದಿಂದ ಈಚೆಗೆ ಭೇಟಿಗಳು ಚುರುಕುಗೊಂಡಿವೆ. ಮೊದಲು ಗೃಹ ಸಚಿವ ಡಾ| ಪರಮೇಶ್ವರ್ ಅವರು ಸತೀಶ್ ಜಾರಕಿಹೊಳಿ ಭೇಟಿ ಮಾಡಿದರು. ಮರುದಿನವೇ ಸಚಿವರಾದ ಎಚ್.ಸಿ. ಮಹದೇವಪ್ಪ, ಡಾ| ಪರಮೇಶ್ವರ ಮತ್ತು ಜಾರಕಿಹೊಳಿ ಪುನಃ ಸೇರಿದ್ದರು. ಅನಂತರ ಜಾರಕಿಹೊಳಿ ದಿಲ್ಲಿಗೆ ದೌಡಾಯಿಸಿ ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರು. ಅಲ್ಲಿಂದ ಬರುತ್ತಿದ್ದಂತೆ ತುಮಕೂರಿಗೆ ತೆರಳಿದ ಜಾರಕಿಹೊಳಿ ಅಲ್ಲಿ ಮತ್ತೆ ಡಾ| ಪರಮೇಶ್ವರ ಜತೆಗೆ ಮಾತುಕತೆ ನಡೆಸಿದರು. ಈ ನಡುವೆ ಸೋಮವಾರ ಡಿ.ಕೆ. ಸುರೇಶ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಸಿಎಂ ಕುರ್ಚಿ: ಇನ್ನೂ ಬಸ್ ಬಂದಿಲ್ಲ: ಸೋಮವಾರದ ಭೇಟಿಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ, “ಸಿಎಂ ಕುರ್ಚಿಯ ಮಾತುಗಳು ಒಂದು ವರ್ಷದಿಂದ ಕೇಳಿಬರುತ್ತಲೇ ಇವೆ. ಆದರೆ ಇನ್ನೂ ಬಸ್ ಬಂದಿಲ್ಲ. 224 ಜನರಿಗೂ ಸಿಎಂ ಆಗುವ ಆಸೆ ಇರುತ್ತದೆ. ಸಚಿವನಾದರೆ ಮೊದಲ ಮೆಟ್ಟಿಲು ಏರಿದಂತಾಗುತ್ತದೆ. ಸೀನಿಯರ್ ಆದಮೇಲೆ ಡಿಸಿಎಂ ಆಗಬಹುದು. ಅನಂತರ ಸಿಎಂ, ಆಮೇಲೆ ಕೇಂದ್ರ ಸಚಿವ ಸ್ಥಾನ ಇರುತ್ತದೆ. ಈಗ ಆ ಸನ್ನಿವೇಶ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದರು.
Related Articles
Advertisement
ಪದೇ ಪದೆ ದಲಿತ ಸಚಿವರ ಭೇಟಿಯ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ಹೋಗುತ್ತದೆಯೇ ಎಂದು ಕೇಳಿದಾಗ, ನಾವೇನೂ ಪಕ್ಷದ ವಿರುದ್ಧವಾಗಿ ನಡೆದುಕೊಳ್ಳುತ್ತಿಲ್ಲ. ಒಂದು ವೇಳೆ ಹಾಗಾಗಿದ್ದರೆ ಭಯಪಡಬೇಕು. ನಾವ್ಯಾಕೆ ಭಯ ಪಡಬೇಕು ಎಂದು ಕೇಳಿದರು.
ಸಚಿವ ಸತೀಶ್ ಜಾರಕಿಹೊಳಿ ಜತೆಗೆ ಕ್ಷೇತ್ರದ ವಿಷಯ ಮಾತನಾಡಿದ್ದೇನೆಯೇ ವಿನಾ ರಾಜಕೀಯವಾಗಿ ಯಾವ ಚರ್ಚೆಯನ್ನೂ ಮಾಡಿಲ್ಲ.– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ