Advertisement

ಶಾಸಕ ಪಾಟೀಲ್‌ ಹೇಳಿಕೆಗೆ ರಾಜಕೀಯ ಧ್ವನಿ

01:06 PM Oct 18, 2021 | Team Udayavani |

ರಾಯಚೂರು: ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸುವಂತೆ ಬಿಜೆಪಿ ಶಾಸಕ ಡಾ| ಶಿವರಾಜ್‌ ಪಾಟೀಲ್‌ ನೀಡಿದ ಹೇಳಿಕೆ ದಿನೇದಿನೆ ವಿವಿಧ ಆಯಾಮ ಪಡೆಯುತ್ತಿದ್ದು, ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್‌ಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

Advertisement

ಉಪಚುನಾವಣೆ ಪ್ರಚಾರದಲ್ಲಿ ತೊಡಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ಧಾಳಿ ನಡೆಸಿದ್ದು, ಬಿಜೆಪಿಗೆ ಅಖಂಡ ಕರ್ನಾಟಕ ವಿರೋಧಿ ಪಟ್ಟ ಕಟ್ಟುವ ಮೂಲಕ ಪ್ರಕರಣವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಅಲ್ಲದೇ, ಶಾಸಕ ಶಿವರಾಜ್‌ ಪಾಟೀಲ್‌ ಅವರನ್ನು ವಜಾ ಮಾಡುವಂತೆ ಆಗ್ರಹಿಸಿದ್ದಾರೆ.

ಬಿಜೆಪಿಗೆ ಅಖಂಡ ಕರ್ನಾಟಕ ವಿರೋಧಿ ಪಟ್ಟ ಕಟ್ಟಿರುವ ಅವರು, “ಉಮೇಶ ಕತ್ತಿ ಪ್ರತ್ಯೇಕ ರಾಜ್ಯ ಕೇಳಿದರೆ, ಶಾಸಕ ಶಿವರಾಜ್‌ ಪಾಟೀಲ್‌ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ’ ಎನ್ನುತ್ತಿದ್ದಾರೆ. ಇದು ಬಿಜೆಪಿಯ ಮೂಲ ಸಂಸ್ಕೃತಿ ಎಂದು ಕುಟುಕಿದ್ದಾರೆ.

ಇದಕ್ಕೆ ಶಾಸಕ ಶಿವರಾಜ್‌ ಪಾಟೀಲ್‌ ಕೂಡ ಪ್ರತ್ಯುತ್ತರ ನೀಡಿದ್ದು, “ಡಿಕೆಶಿ ಇರುವವರೆಗೆ ಕಾಂಗ್ರೆಸ್‌ ಉದ್ಧಾರವಾಗುವುದಿಲ್ಲ. ಮೊದಲು ಅವರನ್ನು ಉಚ್ಛಾಟಿಸಲಿ’ ಎನ್ನುವ ಮೂಲಕ ವಾಕ್ಸಮರಕ್ಕೆ ನಾಂದಿ ಹಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆವೇಗದಲ್ಲಿ ನೀಡಿದ ಹೇಳಿಕೆ ಪ್ರತಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ.

ಈಗಾಗಲೇ ಸಾರ್ವಜನಿಕ ವಲಯದಲ್ಲಿ, ವಿವಿಧ ಸಂಘಟನೆಗಳು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದರೆ. ಈಗ ಕಾಂಗ್ರೆಸ್‌ ಕೂಡ ಈ ಅವಕಾಶ ಬಳಸಿಕೊಳ್ಳುವಲ್ಲಿ ಹಿಂದೆ ಬೀಳುತ್ತಿಲ್ಲ. ಶಾಸಕ ಶಿವರಾಜ್‌ ಪಾಟೀಲ್‌ ಈಗಾಗಲೇ ಈ ಬಗ್ಗೆ ಸಾಕಷ್ಟು ಕಡೆ ಸ್ಪಷ್ಟನೆ ನೀಡಿದ್ದು, ನಾನು ನಮ್ಮ ಜಿಲ್ಲೆಯ ಪರಿಸ್ಥಿತಿಯನ್ನು ವಿವರಿಸುವಾಗ ಆ ರೀತಿ ಹೇಳಿದ್ದೇನೆ. ಅದು ನೋವಿನ, ವೇದನೆ, ಆಕ್ರೋಶದ ಹೇಳಿಕೆಯೇ ವಿನಃ, ರಾಯಚೂರನ್ನು ಬಿಟ್ಟು ಕೊಡುವುದಾಗಿರಲಿಲ್ಲ ಎಂದಿದ್ದಾರೆ.

Advertisement

ಇದನ್ನೂ ಓದಿ: ಕಳೆದ ಬಾರಿ ಎಂ.ಸಿ.ಮನಗೂಳಿ ಗೆದ್ದಿದ್ದು ಕೊನೆಯ ಚುನಾವಣೆಯೆಂಬ ಅನುಕಂಪದಿಂದ: ಹಾಲಪ್ಪ ಆಚಾರ್

ತೆಲಂಗಾಣ ಸಚಿವ ಕೆಟಿಆರ್‌ ಟ್ವೀಟ್‌

ಶಾಸಕ ಪಾಟೀಲ್‌ ಹೇಳಿಕೆ ನೀಡಿದ ಮೂಲ ಸ್ವರೂಪವೇ ಬದಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರರಾವ್ ಮಗ ಹಾಗೂ ಅಲ್ಲಿನ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್‌ ಈ ಬಗ್ಗೆ ಟ್ವಿಟ್‌ ಮಾಡಿ “ತೆಲಂಗಾಣಕ್ಕೆ ಸೇರಲು ನೆರೆ ಹೊರೆಯ ಭಾಗದ ಜಿಲ್ಲೆಗಳು ಉತ್ಸುಕವಾಗಿವೆ. ಇದು ತೆಲಂಗಾಣ ಅಭಿವೃದ್ಧಿಯ ಧ್ಯೋತಕ ಎಂದು ಶಿವರಾಜ್‌ ಪಾಟೀಲ್‌ ಮಾತನಾಡಿದ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೇ ಮೊದಲಲ್ಲ ಈ ಹಿಂದೆ ಕೂಡ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಜನ ಬೇಸರಗೊಂಡಿದ್ದಾರೆ ಎಂದು ತಮ್ಮ ರಾಜ್ಯದಲ್ಲಿ ಪ್ರಚಾರದ ವೇಳೆ ಹೇಳಿಕೊಂಡು ಓಡಾಡಿದ್ದರು. ಈಗ ಅವರ ಪಕ್ಷದ ಗಡಿಭಾಗದ ಶಾಸಕರು ಕೂಡ ಇದೇ ವಿಚಾರವನ್ನೇ ರಾಜಕೀಯ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದು, ಹೋದಲೆಲ್ಲ ತಮ್ಮ ಸರ್ಕಾರದ ಸಾಧನೆ ಎನ್ನುವಂತೆ ಹೇಳಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಅಖಂಡ ಕರ್ನಾಟಕದ ಬಗ್ಗೆ ನಮಗೆ ನಂಬಿಕೆ ಇದೆ. ಉಮೇಶ ಕತ್ತಿಯವರು ಪ್ರತ್ಯೇಕ ರಚನೆ ಬಗ್ಗೆ ಹೇಳಿಕೆ ನೀಡುತ್ತಾರೆ. ಅಖಂಡ ಕರ್ನಾಟಕಕ್ಕೆ ಧಕ್ಕೆ ತರುವ ಹೇಳಿಕೆ ನೀಡಿರುವ ಶಾಸಕರನ್ನು ಬಿಜೆಪಿ ಮೊದಲು ಉಚ್ಛಾಟಿಸಲಿ. ಇದು ಬಿಜೆಪಿ ಮೂಲಭೂತ ಸಂಸ್ಕೃತಿ. ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಶಾಸಕರ ವಿಭಜನೆ ಹೇಳಿಕೆಗೆ ಬಿಜೆಪಿ ಸಮ್ಮತಿ ಇದೆ ಎಂದು ಒಪ್ಪಬೇಕಾಗುತ್ತದೆ. -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌

ಇರುವವರೆಗೂ ಕಾಂಗ್ರೆಸ್‌ ಉದ್ಧಾರವಾಗಲ್ಲ. ಮೊದಲು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ನಮ್ಮ ಪಕ್ಷದ ಆಂತರಿಕ ವಿಚಾರ ಅವರಿಗೆ ಅನಗತ್ಯ. ಕಾಂಗ್ರೆಸ್‌ನ ಸ್ಥಳೀಯ ನಾಯಕರು ಹೇಳಿದ ಮಾತು ಕೇಳಿಕೊಂಡು ಈ ರೀತಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಮೊದಲು ನಾನು ಏನು ಮಾತನಾಡಿದ್ದೇನೆ ಎಂಬ ಸಂಪೂರ್ಣ ವಿಡಿಯೋವನ್ನು ನೋಡಿ ಆಮೇಲೆ ಮಾತನಾಡಲಿ. -ಡಾ| ಶಿವರಾಜ್‌ ಪಾಟೀಲ್‌, ರಾಯಚೂರು ಶಾಸಕ

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next