Advertisement

ರಾಜಕೀಯ ಮೇಲಾಟ; ಕೈ-ಕಮಲ ಹೋರಾಟ

09:32 AM Jul 10, 2019 | Team Udayavani |

ಧಾರವಾಡ: ನಗರದ ಡಿಸಿ ಕಚೇರಿ ಎದುರು ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರತ್ಯೇಕವಾಗಿ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಸಿಎಂ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಕೈಗೊಂಡು ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೆ, ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ಬಿಜೆಪಿಯು ಶಾಸಕರನ್ನು ಖರೀದಿ ಮಾಡುತ್ತಿರುವ ಕ್ರಮ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಡಿಸಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಎರಡೂ ಪಕ್ಷದ ಕಾರ್ಯಕರ್ತರು ಏಕ ಕಾಲದಲ್ಲಿ ಪ್ರತಿಭಟನೆ ಮೂಲಕ ಡಿಸಿ ಕಚೇರಿಯತ್ತ ಬಂದ ಕಾರಣ ಡಿಸಿ ಕಚೇರಿಯಿಂದ ದೂರದಲ್ಲಿಯೇ ಪೊಲೀಸರು ಅವರನ್ನು ತಡೆದರು. ಈ ವೇಳೆ ಡಿಸಿ ಕಚೇರಿಯತ್ತ ಬಿಡದ ಪೊಲೀಸರ ಕ್ರಮವನ್ನು ಆಕ್ಷೇಪಿಸಿದ ಬಿಜೆಪಿ ಕಾರ್ಯಕರ್ತರು ಕೆಲ ಹೊತ್ತು ಪೊಲೀಸರೊಂದಿಗೂ ವಾಗ್ವಾದ ನಡೆಸಿದರು. ಕೊನೆಗೆ ಬಿಜೆಪಿ ಕಾರ್ಯಕರ್ತರಿಗೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಅವಕಾಶ ನೀಡಲಾಯಿತು. ಬಿಜೆಪಿಯವರು ಪ್ರತಿಭಟನೆ ಕೈಗೊಂಡು ತೆರಳಿದ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

•ಬಿಜೆಪಿ ಆರೋಪ: ರಾಜ್ಯದಲ್ಲಿ ಅಲ್ಪಮತಕ್ಕೆ ಕುಸಿದ ಸಮ್ಮಿಶ್ರ ಸರಕಾರದ ಸಿಎಂ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ಜನವಿರೋಧಿ ಸಮ್ಮಿಶ್ರ ಸರಕಾರ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ಸಿಎಂ ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು. ರಾಜೀನಾಮೆ ನೀಡದಿದ್ದರೆ ಸರಕಾರವನ್ನೇ ವಜಾ ಮಾಡಬೇಕು ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.

ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ, ಸಂಜಯ ಕಪಟಕರ, ಶಿವು ಹೀರೆಮಠ, ವಿಜಯಾನಂದ ಶೆಟ್ಟಿ, ಈರೇಶ ಅಂಚಟಗೇರಿ, ಬಸವರಾಜ ಕುಂದಗೋಳಮಠ, ಪ್ರಕಾಶ ಗೋಡಬೋಲೆ, ದತ್ತ ಮೂರ್ತಿ ಕುಲಕರ್ಣಿ, ಯಲ್ಲಪ್ಪ ಅರವಾಳದ, ಶಂಕರ ಮುಗದ, ಸತೀಶ ಶೇಜವಾಡಕರ, ಈರಣ್ಣ ಹಪ್ಪಳಿ, ಮೋಹನ ರಾಮದುರ್ಗ ಇನ್ನಿತರರಿದ್ದರು.

Advertisement

•ಕಾಂಗ್ರೆಸ್‌ ಆರೋಪ: ಬಿಜೆಪಿ ನಾಯಕರು ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಜೆಡಿಎಸ್‌-ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ ಆಮಿಷಗಳನ್ನೊಡ್ಡಿದೆ. ಇನ್ನೊಂದೆಡೆ ಇಡಿ ಹಾಗೂ ಐಟಿಗಳ ಮೂಲಕ ಬೆದರಿಕೆ ಹಾಕಿ ಸರ್ಕಾರ ಉರುಳಿಸುತ್ತಿರುವುದು ಅಕ್ಷಮ್ಯ ಅಪರಾಧ. ಬಿಜೆಪಿಯು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಈ ಕೂಡಲೇ ಬಿಜೆಪಿಯ ಇಂತಹ ಪ್ರವೃತ್ತಿಯನ್ನು ನಿಯಂತ್ರಿಸಿ ಪ್ರಜಾಪ್ರಭುತ್ವ ಉಳಿಸಬೇಕು ಎಂದು ಡಿಸಿ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮಾಜಿ ಶಾಸಕ ಎ.ಎಂ. ಹಿಂಡಸಗೇರಿ ಮಾತನಾಡಿ, ಶಾಸಕರು ರಾಜೀನಾಮೆ ಹಿಫಪಡೆದು ಕಾಂಗ್ರೆಸ್‌ ಪಕ್ಷದಲ್ಲಿ ಉಳಿದು ಮರ್ಯಾದೆ ಉಳಿಸಿಕೊಳ್ಳಬೇಕು. ಕಾಂಗ್ರೆಸ್‌ ಪಕ್ಷದಿಂದ ಚುನಾಯಿತರಾಗಿರುವ ಸತ್ಯ ಅರಿತು ರಾಜೀನಾಮೆ ಹಿಂಪಡೆದು ಸಮ್ಮಿಶ್ರ ಸರಕಾರ ಬಲಪಡಿಸಬೇಕು ಎಂದರು.

ಹು-ಧಾ ಜಿಲ್ಲಾ ಕಾಂಗ್ರೇಸ್‌ ಅಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಬ್ಲಾಕ್‌ ಅಧ್ಯಕ್ಷರಾದ ಬಸವರಾಜ ಕಿತ್ತೂರ, ಬಸವರಾಜ ಮಲಕಾರಿ, ಮುಖಂಡರಾದ ರಾಬರ್ಟ ದದ್ದಾಪುರಿ, ಸದಾನಂದ ಡಂಗನವರ, ಆನಂದ ಜಾಧವ್‌, ನಾಗರಾಜ ಗುರಿಕಾರ, ಆನಂದ ಸಿಂಗನಾಥ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next