Advertisement

ಸೋಂಕಿತನ ಶವ ಸುಟ್ಟ ಪ್ರಕರಣಕ್ಕೆ ರಾಜಕೀಯ ತಿರುವು

04:06 PM Jul 09, 2020 | mahesh |

ಕಾರವಾರ: ಕೋವಿಡ್‌ ಹೊಂದಿದ್ದ ವ್ಯಕ್ತಿ ಕಳೆದ ಸೋಮವಾರ ಮಧ್ಯಾಹ್ನ ಮೃತಪಟ್ಟ ನಂತರ ಆತನ ಶವ ಸಂಸ್ಕಾರಕ್ಕೆ ಕಾರವಾರ ಮತ್ತು ಪಕ್ಕದ ನಾಲ್ಕು ಹಳ್ಳಿಗಳ ಸ್ಮಶಾನದಲ್ಲಿ ಅವಕಾಶ ಸಿಗದೆ ಸೋಮವಾರ ತಡರಾತ್ರಿ ತನಕ ಅಧಿಕಾರಿಗಳು ಪೇಚಾಡಿದ ಘಟನೆಗೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಮಾಜಿ ಶಾಸಕ ಸತೀಶ್‌ ಸೈಲ್‌ ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ಸುರಕ್ಷಿತ ಸ್ಥಳದಲ್ಲಿ ಮಾಡಲು ಆಡಳಿತ ಪಕ್ಷದ ಶಾಸಕರು ಎಡವಿದ್ದಾರೆ ಎಂದು ಆರೋಪಿಸಿದರೆ, ಇದನ್ನು ಆಡಳಿತ ಪಕ್ಷದ ಹಾಲಿ ಶಾಸಕಿ ರೂಪಾಲಿ ನಾಯ್ಕ ಅಲ್ಲಗಳೆದಿದ್ದಾರೆ.  ಕೋವಿಡ್‌ ರೋಗಿಗಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೋವಿಡ್‌ನಿಂದಾದ ಮೃತರ ಅಂತ್ಯಕ್ರಿಯೆಗೆ ಪ್ರತ್ಯೇಕ ಸ್ಥಳ ಹುಡುಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

Advertisement

ಘಟನೆ ಹಿನ್ನೆಲೆ: ಬೆಂಗಳೂರಿನಲ್ಲಿ ನಿಮೋನಿಯದಿಂದ ಬಳಲುತ್ತಿದ್ದ 42 ವರ್ಷದ ಒಬ್ಬರು ಚಿಕಿತ್ಸೆಗೆ ಆಸ್ಪತ್ರೆ ಸಿಗದೇ ಸ್ವಂತ ಊರಾದ ಶಿರಸಿಗೆ ಮರಳಿದ್ದರು. ಅವರು ಕಳೆದ ರವಿವಾರ ಶಿರಸಿಗೆ ಬಂದು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಅವರಿಗೆ ಕೋವಿಡ್‌ ಇರುವುದು ಖಚಿತವಾಗುತ್ತಿದ್ದಂತೆ ಕಾರವಾರ ವೈದ್ಯಕೀಯ ಕಾಲೇಜು ಕೋವಿಡ್‌ ಘಟಕಕ್ಕೆ ಚಿಕಿತ್ಸೆಗೆ ಕರೆತರಲಾಯಿತು. ಆದರೆ ಅವರು ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದರು. ಶವವನ್ನು ಶಿರಸಿಗೆ ಕೊಂಡೊಯ್ಯಲು ಕುಟುಂಬದವರು ಆಸಕ್ತಿ ತೋರದ ಕಾರಣ, ಅಧಿಕಾರಿಗಳು ಕಾರವಾರದ ಹೈವೇ ಪಕ್ಕದ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಮುಂದಾದರು. ಅಲ್ಲಿನ ಜನತೆಯಿಂದ ವಿರೋಧ ವ್ಯಕ್ತವಾದ ಕಾರಣ ಹಬ್ಬುವಾಡ ಸ್ಮಶಾನದಲ್ಲಿ ಸಂಸ್ಕಾರಕ್ಕೆ ಯತ್ನಿಸಿದರೆ ಅಲ್ಲೂ ವಿರೋಧ ವ್ಯಕ್ತವಾಯಿತು. ಮಾಜಾಳಿ ಗ್ರಾಮದ ಸ್ಮಾಶನದಲ್ಲಿ ಮಾಜಿ ಶಾಸಕರಿಂದ ವಿರೋಧ ವ್ಯಕ್ತವಾಯಿತು ಎನ್ನಲಾಗಿದೆ. ಚೆಂಡಿಯಾ, ತೊಡೂರು ಗ್ರಾಪಂ ವ್ಯಾಪ್ತಿಯ ಸ್ಮಶಾನಗಳಲ್ಲಿ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತವಾದ ಕಾರಣ ಸೋಮವಾರ ತಡರಾತ್ರಿ ಹೆದ್ದರಿ ಪಕ್ಕದ ಸಂಕ್ರುಬಾಗ ಅರಣ್ಯ ಪ್ರದೇಶಕ್ಕೆ ಸೇರಿದ ಜಾಗದಲ್ಲಿ ಶವ ದಹನ ಮಾಡಲಾಯಿತು. ದಹನ ಕ್ರಿಯೆ ಸರಿಯಾಗಿಲ್ಲ ಎಂಬ ಆರೋಪ ಬರುತ್ತಿದ್ದಂತೆ ಮಂಗಳವಾರ ಶವ ದಹನ ಮಾಡಿದ ಜಾಗದಲ್ಲಿ ಟ್ರಕ್‌ನಲ್ಲಿ ಮಣ್ಣು ತಂದು ಸುರಿಯಲಾಯಿತು.

ರಾಜಕೀಯ ತಿರುವು: ಈ ಘಟನೆ ಕಾರವಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು. ಮಾಜಿ ಶಾಸಕರು, ಇದೊಂದು ಆಡಳಿತದ ವೈಫಲ್ಯ, ಶಾಸಕಿಗೆ ಮುಂದಾಲೋಚನೆಯಿಲ್ಲ. ಕೋವಿಡ್‌ ರೋಗಿ ಸತ್ತರೆ, ಪ್ರತ್ಯೇಕ ಸ್ಥಳದಲ್ಲಿ ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಜನರ ಆತಂಕ ನಿವಾರಿಸಲು, ಜನರ ಆಗ್ರಹದಂತೆ ಶವ ದಹನಕ್ಕೆ ಸ್ಥಳೀಯ ಸ್ಮಶಾನಗಳಲ್ಲಿ ಅವಕಾಶ ನೀಡಲಿಲ್ಲ ಎಂದಿದ್ದಾರೆ. ಇದಕ್ಕೆ ಹಾಲಿ ಶಾಸಕಿ ರೂಪಾಲಿ ನಾಯ್ಕ, ಸರ್ಕಾರದ ಪ್ರತಿ ಕೆಲಸದಲ್ಲೂ ಹುಳುಕು ಹುಡುಕಲಾಗುತ್ತಿದೆ ಎಂದು ಅಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ. ಬುಧವಾರ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೋವಿಡ್‌ ರೋಗಿಗಳು ಸಾವನ್ನಪ್ಪಿದರೆ, ಅವರ ಶವ ಸಂಸ್ಕಾರಕ್ಕೆ ಸುರಕ್ಷಿತ ಸ್ಥಳ ಹುಡುಕಲು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಸಹ ವಿವಿಧ ತಾಲೂಕುಗಳ
ತಹಶೀಲ್ದಾರರು, ಸಹಾಯಕ ಕಮಿಷನರ್‌ ಜೊತೆ ಸಭೆ ನಡೆಸಿ, ಶವ ಸಂಸ್ಕಾರಕ್ಕೆ ಅಡ್ಡಿ ಮಾಡುವವರ ವಿರುದ್ಧ ಕೇಸು ದಾಖಲಿಸಲು ಸೂಚಿಸಿದರು. ಈತನ್ಮಧ್ಯೆ ನಗರದಲ್ಲಿ ಎಲೆಕ್ಟ್ರಾನಿಕ್‌ ಚಿತಾಗಾರ ನಿರ್ಮಿಸುವಂತೆ ಬೇಡಿಕೆ ಸಹ ಕೇಳಿ ಬಂದಿದ್ದು, ಜಿಲ್ಲಾಧಿಕಾರಿಗೆಈ ಸಂಬಂಧ ಜನಶಕ್ತಿ ವೇದಿಕೆ ಲಿಖೀತ ಮನವಿಯೂ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next