Advertisement

ವಿಜ್ಞಾನ ಸಂಸ್ಥೆಗಳ ತವರಲ್ಲಿ ರಾಜಕೀಯ ಜಿದ್ದಾಜಿದ್ದಿ

12:31 PM Apr 06, 2018 | |

ಚಳ್ಳಕೆರೆ: ದೇಶದ ಪ್ರತಿಷ್ಠಿತ ವಿಜ್ಞಾನ ಕೇಂದ್ರಗಳನ್ನು ಹೊಂದಿರುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರ, ಚಿತ್ರದುರ್ಗ ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರ ಎಂಬ ಖ್ಯಾತಿ ಪಡೆದಿದೆ.

Advertisement

ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿರುವ ಚಳ್ಳಕೆರೆ ತಾಲೂಕಿನಲ್ಲಿ ಕಡ್ಲೆಕಾಯಿ (ಶೇಂಗಾ) ಹೆಚ್ಚು ಬೆಳೆಯಲಾಗುತ್ತಿದೆ. ಇದನ್ನು “ಆಯಿಲ್‌ ಸಿಟಿ’, “ಕರ್ನಾಟಕದ ಮುಂಬಯಿ’ ಎಂದೂ ಕರೆಯಲಾಗುತ್ತಿದೆ. 70ಕ್ಕೂ ಹೆಚ್ಚು ಎಣ್ಣೆ ಮಿಲ್‌ಗ‌ಳು ಇಲ್ಲಿವೆ. ಕುರುಬ ಸಮುದಾಯದದರು ನೇಯುವ ಕಂಬಳಿಗೆ ರಾಜ್ಯಾದ್ಯಂತ ಬೇಡಿಕೆ ಇದೆ. ಮಲೆನಾಡಿನ ಮಾರುಕಟ್ಟೆಗೆ ಇಲ್ಲಿಂದಲೇ ಕಂಬಳಿ ರಫ್ತಾಗುತ್ತದೆ.

ಈಗ “ವಿಜ್ಞಾನ ನಗರ ಎಂಬ ಖ್ಯಾತಿ ಹೊಂದಿದ್ದು, ದೇಶದ ಪ್ರತಿಷ್ಠಿತ ಇಂಡಿಯನ್‌ ಇನ್ಸಟಿಟ್ಯೂಟ್‌ ಆಫ್‌ ಸೈನ್ಸ್‌ ಬೆಂಗಳೂರು ಬಿಟ್ಟರೆ ಚಳ್ಳಕೆರೆ ತಾಲೂಕಿನ ಕುದಾಪುರದ 1,500 ಎಕರೆ ಪ್ರದೇಶದಲ್ಲಿ ತಲೆ ಎತ್ತಿದೆ. ಇದರ ಜೊತೆಗೆ ಡಿಫೆನ್ಸ್‌ ರೀಸರ್ಚ್‌ ಡೆವಲಪ್‌ ಮೆಂಟ್‌ ಆರ್ಗನೈಜೇಷನ್‌ (ಡಿಆರ್‌ಡಿಒ), ಇಸ್ರೋ, ಬಾರ್ಕ್‌, ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಮತ್ತಿತರ ವಿಜ್ಞಾನ ಸಂಸ್ಥೆಗಳ ಆಗಮನದಿಂದ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ.

ರಾಜಕೀಯವಾಗಿ ಎ. ಭೀಮಪ್ಪ ನಾಯಕ, ಬಿ.ಎಲ್‌. ಗೌಡ, ವಿ. ಮಸಿಯಪ್ಪ, ಎನ್‌. ಜಯಣ್ಣ, ತಿಪ್ಪೇಸ್ವಾಮಿ ಅಂತಹ ನಾಯಕರನ್ನು ಕೊಡುಗೆಯಾಗಿ ನೀಡಿದ ಕ್ಷೇತ್ರ ಇದು. ಇದುವರೆಗೆ ನಡೆದಿರುವ 13 ಸಾರ್ವತ್ರಿಕ ಚುನಾವಣೆಗಳಲ್ಲಿ 7 ಸಲ ಕಾಂಗ್ರೆಸ್‌ ಗೆಲುವು ಸಾಧಿಸಿ ಭದ್ರಕೋಟೆಯಾಗಿಸಿ ಕೊಂಡಿದೆ. 3 ಸಲ ಜನತಾ ಪರಿವಾರ, 2 ಸಲ ಬಿಜೆಪಿ, ಒಮ್ಮೆ ಪಕ್ಷೇತರರು ಆಯ್ಕೆಯಾಗಿದ್ದಾರೆ.

ಕ್ಷೇತ್ರದಲ್ಲಿ ನಾಯಕ (ವಾಲ್ಮೀಕಿ) ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಕ್ಷೇತ್ರ ಪುನರ್‌ ವಿಂಗಡಣೆ ನಂತರ ಪರಿಶಿಷ್ಟ ವರ್ಗ(ಎಸ್ಟಿ) ಮೀಸಲು ಕ್ಷೇತ್ರವಾಗಿದೆ. ಲಿಂಗಾಯತ, ಗೊಲ್ಲ, ಕುಂಚಿಟಿಗರ ಮತಗಳು ಇಲ್ಲಿ ನಿರ್ಣಾಯಕ.

Advertisement

ಕ್ಷೇತ್ರದ ಬೆಸ್ಟ್‌ ಏನು?
2352.60 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ಹಿನ್ನೀರು ಯೋಜನೆ ಅನುಷ್ಠಾನವಾಗುತ್ತಿದೆ. ಇದರಿಂದ ಚಳ್ಳಕೆರೆ ತಾಲೂಕಿನ ಬಹುತೇಕ ಹಳ್ಳಿಗಳು, ಚಳ್ಳಕೆರೆ ಕ್ಷೇತ್ರಕ್ಕೆ ಸೇರಿದ ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ 59 ಜನವಸತಿ ಪ್ರದೇಶಗಳಿಗೆ ಈ ಯೋಜನೆಯಿಂದ ಕುಡಿಯುವ ನೀರು ಪೂರೈಕೆಯಾಗಲಿದೆ. ಚಳ್ಳಕೆರೆ ನಗರದಲ್ಲಿನ ರಸ್ತೆಗಳನ್ನು ಅಗಲೀಕರಣ ಮಾಡಿಸುವ ಮೂಲಕ ಜಿಲ್ಲಾ ಕೇಂದ್ರದಲ್ಲೂ ಆಗದ ಕೆಲಸವನ್ನು ಶಾಸಕರು ಚಳ್ಳಕೆರೆಯಲ್ಲಿ ಮಾಡಿರುವುದು ಚುನಾವಣೆಯಲ್ಲಿ ಅವರಿಗೆ ವರವಾದರೂ ಅಚ್ಚರಿ ಇಲ್ಲ. 

ಕ್ಷೇತ್ರದ ದೊಡ್ಡ ಸಮಸ್ಯೆ?
ಕ್ಷೇತ್ರ ಪುನರ್‌ ವಿಂಗಡಣೆ ನಂತರ ಚಳ್ಳಕೆರೆ ನಗರಕ್ಕೆ ಕೂಗಳತೆ ದೂರದಲ್ಲಿರುವ ತಳಕು ಮತ್ತು ನಾಯಕನಟ್ಟಿ ಹೋಬಳಿಯನ್ನು ಮೊಳಕಾಲ್ಮೂರು ಕ್ಷೇತ್ರಕ್ಕೆ ಸೇರಿಸಿ, ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯನ್ನು ಚಳ್ಳಕೆರೆ ಕ್ಷೇತ್ರಕ್ಕೆ ಸೇರಿಸಿರುವುದು ಅಭಿವೃದ್ಧಿಗೆ  ಹಿನ್ನಡೆಯಾಗಿದೆ. ಮಳೆ ಕೊರತೆ ಮತ್ತಿತರ ಕಾರಣಗಳಿಂದ ಆಯಿಲ್‌ ಮಿಲ್‌ಗ‌ಳು ಸ್ಥಗಿತಗೊಂಡ ನಂತರ ಕ್ಷೇತ್ರದಲ್ಲಿ
ಯಾವುದೇ ಕೈಗಾರಿಕೆಗಳು ಸ್ಥಾಪನೆಗೊಂಡಿಲ್ಲ. ಇದರಿಂದ ಜನರು ಬೆಂಗಳೂರಿಗೆ ಗುಳೆ ಹೋಗುತ್ತಿದ್ದಾರೆ. ಅಕ್ರಮ ಮರಳು ದಂಧೆಗೆ ಜನಪ್ರತಿನಿಧಿಗಳು ಕಡಿವಾಣ ಹಾಕಿಲ್ಲ ಎಂಬ ಆರೋಪವಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ.

ತತುರುವನೂರು ಹೋಬಳಿಯ ವಾಲ್ಮೀಕಿ ಸಮುದಾಯದವರ ಮೇಲೆ ಪ್ರಕರಣ ದಾಖಲಿಸಲು ಕುಮ್ಮಕ್ಕು ನೀಡಿದ್ದಾರೆ ಎಂಬ ಅಸಮಾಧಾನ ಜನರಲ್ಲಿದೆ.ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಕ್ಷೇತ್ರವನ್ನು ತೆಕ್ಕೆಗೆ
ಹಾಕಿಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ.

ಶಾಸಕರು ಏನಂತಾರೆ?
1500 ಕೋಟಿ ರೂ.ಗಳ ಅನುದಾನದಲ್ಲಿ ಚಳ್ಳಕೆರೆ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿಯಾಗಿಸಿದ್ದೇನೆ. ಭದ್ರಾ ಮೇಲ್ದಂಡೆ
ಮತ್ತು ತುಂಗಭದ್ರಾ ಹಿನ್ನೀರು ಯೋಜನೆ ಕಾಮಗಾರಿ ಆರಂಭವಾಗಬೇಕಿದೆ. ತುರುವನೂರು ಹೋಬಳಿಯನ್ನು ಯೋಜನೆಗೆ ಸೇರ್ಪಡೆ ಮಾಡಿದ್ದೇನೆ. ನಗರದಲ್ಲಿ ರಸ್ತೆ ಅಗಲೀಕರಣ, ಚೆಕ್‌ಡ್ಯಾಂಗಳು, ಬ್ಯಾರೇಜ್‌, ಇಂಜಿನಿಯರಿಂಗ್‌ ಕಾಲೇಜು, ಬಸ್‌ ನಿಲ್ದಾಣ, ಆಸ್ಪತ್ರೆ, ಡಯಾಲಿಸಿಸ್‌ ಸೆಂಟರ್‌ ನಿರ್ಮಾಣ ಮಾಡಲಾಗಿದೆ.
ಟಿ. ರಘುಮೂರ್ತಿ, ಶಾಸಕರು. 

ಕ್ಷೇತ್ರ ಮಹಿಮೆ
ಮಧ್ಯ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಚಳ್ಳಕೆರೆ ತಾಲೂಕಿನಲ್ಲಿದೆ. ಚಳ್ಳಕೆರೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಚಳ್ಳಕೆರೆಯಮ್ಮ ಜಾತ್ರೆ ಗೌರಸಮುದ್ರ ಮಾರಮ್ಮನ ಜಾತ್ರೆ, ಕ್ಯಾತಪ್ಪನ ಪರಿಷೆ ವಿಶಿಷ್ಟವಾಗಿವೆ. ಹೆಗ್ಗೆರೆಯಲ್ಲಿ ಪ್ರಾಚೀನ ಕಾಲದ ಕುರುಹುಗಳಿದ್ದು. ಸಾಕಷ್ಟು ಸಂಶೋಧನೆಗಳೂ ನಡೆದಿವೆ

ಶಾಸಕ ಟಿ. ರಘುಮೂರ್ತಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಹೆಚ್ಚು ಪ್ರಯತ್ನಿಸಲಿಲ್ಲ. ನಗರದಲ್ಲಿ ವಿಶಾಲವಾದ ರಸ್ತೆ ನಿರ್ಮಾಣ, ಮಾಡಿರುವುದು ಮೆಚ್ಚುಗೆಗೆ ಅರ್ಹವಾಗಿದೆ. 
ಆಶಾ ಮಧು, ಗೃಹಿಣಿ.

ಶಾಸಕ ಟಿ. ರಘುಮೂರ್ತಿ ಹಲವಾರು ಅಭಿವೃದ್ಧಿ ಯೋಜನೆಗಳ ರೂವಾರಿ. ಆದರೆ ನಗರದ ವಿವಿಧ ಬಡಾವಣೆಗಳಲ್ಲಿ ಅಕ್ರಮ-ಸಕ್ರಮ ಯೋಜನೆ ಅಡಿ ನೂರಾರು ಫಲಾನುಭವಿಗಳಿಗೆ ಹಕ್ಕುಪತ್ರ ದೊರಕಿಲ್ಲ. ರೈತರಿಗೆ ನೆರವು ನೀಡದಿರುವುದು ನೋವು ತಂದಿದೆ.
ಪಿ. ರುದ್ರಮೂರ್ತಿ, ಚಳ್ಳಕೆರೆ

ಶಾಸಕರುನಗರ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಬಹುದಿತ್ತು. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೈಗಾರಿಕೆ ಪ್ರಾರಂಭಿಸ ಬಹುದಿತ್ತು. ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಮಂಜೂರು ಮಾಡಿಸಿರುವುದು ಶಾಸಕರ ಹೆಗ್ಗಳಿಕೆ. 
ಮಮತಾ, ಖಾಸಗಿ ಕಂಪನಿ ಉದ್ಯೋಗಿ.

ಕಾಂಗ್ರೆಸ್‌ ಸರ್ಕಾರದ ಆಡಳಿತ ಜನಸಾಮಾನ್ಯರ ಮೇಲೆ ಉತ್ತಮ ಪರಿಣಾಮ ಬೀರುವಲ್ಲಿ ವಿಫಲವಾಗಿದೆ. ನಿರೀಕ್ಷೆಗೂ ಮೀರಿ ಉತ್ತಮ ಕಾರ್ಯಗಳು ನಡೆದಿದ್ದರೂ ಜನರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.
ರಂಗಸ್ವಾಮಿ, ವಿಮಾ ಕಂಪನಿ ಉದ್ಯೋಗಿ

 ಕೆ.ಎಸ್‌. ರಾಘವೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next