Advertisement

ನ್ಯಾಯಾಂಗದಲ್ಲಿ ರಾಜಕೀಯ ಸಿದ್ಧಾಂತ ಸಲ್ಲ

01:16 AM Aug 03, 2019 | Lakshmi GovindaRaj |

ಬೆಂಗಳೂರು: “ರಾಜಕೀಯ ಸಿದ್ಧಾಂತಗಳನ್ನು ನ್ಯಾಯಾಂಗದಲ್ಲಿ ತರಕೂಡದು’. ಹೀಗೆಂದು ಶುಕ್ರವಾರ ನಿವೃತ್ತಿ ಹೊಂದಿದ ಹೈಕೋರ್ಟ್‌ ನ್ಯಾಯಮೂರ್ತಿ ಎ.ಎಸ್‌.ಬೆಳ್ಳುಂಕೆ ಅಭಿಪ್ರಾಯಪಟ್ಟಿದ್ದಾರೆ.

Advertisement

ಬೆಂಗಳೂರು ವಕೀಲರ ಸಂಘ ಶುಕ್ರವಾರ ಹೈಕೋರ್ಟ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಕೀಲರು ತಮ್ಮ ರಾಜಕೀಯ ಸಿದ್ಧಾಂತಗಳನ್ನು ನ್ಯಾಯಾಂಗಕ್ಕೆ ತರಬಾರದು. ಕಕ್ಷಿದಾರರ ಪರ ವಾದ ಮಾಡುವಾಗ ರಾಜಕೀಯ ಆಲೋಚನೆಗಳ ಹಿನ್ನೆಲೆ ಇಟ್ಟುಕೊಳ್ಳಬಾರದು. ಇಲ್ಲದಿದ್ದರೆ ಕಕ್ಷಿದಾರರಿಗೆ ಹಾಗೂ ವಕೀಲ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ವಕೀಲರು ನ್ಯಾಯಮೂರ್ತಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡಿದರೆ, ಉತ್ತಮ ತೀರ್ಪುಗಳು ಬರಲು ಸಾಧ್ಯ. ವಿಚಾರಣೆ ಮುಂದೂಡಿಕೆಗೆ 30 ವರ್ಷಗಳ ಹಿಂದೆ ಕೇಳುತ್ತಿದ್ದ ಕಾರಣಗಳನ್ನು ಈಗಲೂ ಕೇಳುತ್ತಿರುವುದು ಬೇಸರದ ಸಂಗತಿ ಎಂದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಮಾತನಾಡಿ, ನ್ಯಾ.ಬೆಳ್ಳುಂಕೆಯವರು ಮುನ್ಸಿಫ್ ಹುದ್ದೆಯಿಂದ ಹೈಕೋರ್ಟ್‌ ನ್ಯಾಯಮೂರ್ತಿಯವರೆಗೆ ಸುದೀರ್ಘ‌ 30 ವರ್ಷಗಳ ಕಾಲ ನ್ಯಾಯಾಂಗ ಸೇವೆ ಸಲ್ಲಿಸಿದ್ದು, ಅವರಿಗಿರುವ ತಾಳ್ಮೆ ಹಾಗೂ ಬದ್ಧತೆ ತೋರಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ಸಂಘದ ಪದಾಧಿಕಾರಿಗಳು ಸೇರಿದಂತೆ ಹೈಕೋರ್ಟ್‌ನ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಉಪಸ್ಥಿತರಿದ್ದರು.

Advertisement

ಟ್ರಾಫಿಕ್‌ನಿಂದಾಗಿ ಬೆಂಗಳೂರಿಗೆ ಬಂದಿಲ್ಲ: ನ್ಯಾ.ಬೆಳ್ಳುಂಕೆಯವರು ಒಂಬತ್ತು ತಿಂಗಳ ಕಾಲ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದರೂ ಕೆಲವೇ ದಿನ ಮಾತ್ರ ಬೆಂಗಳೂರು ನ್ಯಾಯಪೀಠದಲ್ಲಿ ಕೆಲಸ ಮಾಡಿದರು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಬೆಳ್ಳುಂಕೆ, “ನಾನು ಬೆಂಗಳೂರಿನ ನ್ಯಾಯಪೀಠದಲ್ಲಿ ಕೆಲಸ ಮಾಡದೇ ಇರುವುದಕ್ಕೆ ಮುಖ್ಯ ಕಾರಣ ಇಲ್ಲಿನ ಟ್ರಾಫಿಕ್‌. ನನ್ನ ಮನೆ ಇರುವುದು ಜೆ.ಪಿ.ನಗರದಲ್ಲಿ. ಅಲ್ಲಿಂದ ಹೈಕೋರ್ಟ್‌ಗೆ ಬರಬೇಕೆಂದರೆ ಕನಿಷ್ಠ ಒಂದೂವರೆ ತಾಸು ಬೇಕು. ಟ್ರಾಫಿಕ್‌ನಲ್ಲಿ ಬಂದು ಫೈಲ್‌ಗ‌ಳನ್ನು ಓದಿ, ವಿಚಾರಣೆ ನಡೆಸುವ ಉತ್ಸಾಹವಾದರೂ ಎಲ್ಲಿರುತ್ತದೆ.

ಅಲ್ಲದೇ ಧಾರವಾಡ ನನ್ನ ಸ್ವಂತ ಊರು. ಅಲ್ಲಿದ್ದರೆ ನನ್ನ ತಂದೆ-ತಾಯಿ ಜೊತೆ ಕಾಲ ಕಳೆಯಬಹುದು ಎಂಬ ಕಾರಣಕ್ಕೆ ಧಾರವಾಡ ನ್ಯಾಯಪೀಠದಲ್ಲೇ ಕಾರ್ಯ ನಿರ್ವಹಿಸಿದೆ. ಹಾಗಂತ, ಬೆಂಗಳೂರು-ಧಾರವಾಡ ನಡುವೆ ತಾರತಮ್ಯ ಮಾಡಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next