ಹೊಸದಿಲ್ಲಿ : ಸಾಕಷ್ಟು ಸುದ್ದಿ ಮತ್ತು ವಿವಾದಕ್ಕೆ ಕಾರಣವಾಗಿರುವ ಪ್ರಕರಣವೊಂದರಲ್ಲಿ ಅತ್ಯಾಚಾರಕ್ಕೆ ಗುರಿಯಾದ 19ರ ಹರೆಯದ ತರುಣಿಗೆ ನ್ಯಾಯ ಒದಗಿಸುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ಭರವಸೆ ನೀಡಿರುವ ನಡುವೆಯೇ ಮಾಜಿ ಸಿಎಂ ಭೂಪೀಂದರ್ ಸಿಂಗ್ ಹೂಡ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರವಾಗಿ ಹದಗೆಡುತ್ತಿದೆ ಎಂದು ಚಾಟಿ ಬೀಸಿದ್ದಾರೆ.
19ರ ಹರೆಯದ ತರುಣಿಯನ್ನು ಮೂವರು ಕಾಮಾಂಧರು ಹರಿಯಾಣದ ಮಹೇಂದ್ರಗಢದಲ್ಲಿ ಅತ್ಯಾಚಾರ ಎಸಗಿದ್ದರು.
ಅತ್ಯಾಚಾರಕ್ಕೆ ಗುರಿಯಾಗಿದ್ದ ತರುಣಿಯು ತನ್ನ ಎಫ್ಐಆರ್‌ನಲ್ಲಿ ಈ ರೀತಿಯಾಗಿ ಹೇಳಿದ್ದಾಳೆ :
ನಾನು ಕೋಚಿಂಗ್ ಸೆಂಟರ್ ಗೆ ಹೋಗುತ್ತಿದ್ದೆ; ಇಬ್ಬರು ವ್ಯಕ್ತಿಗಳು ನನ್ನ ಬಳಿ ಬಂದು ನನಗೆ ಕುಡಿಯಲು ನೀರು ಕೊಟ್ಟರು. ನಾನದನ್ನು ಕುಡಿದಾಗ ನನಗೆ ಪ್ರಜ್ಞೆ ತಪ್ಪಿತು. ಆವಾಗ ನನ್ನನ್ನು ಅವರು ಕಾರಿನಲ್ಲಿ ಹಾಕಿ ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ಅತ್ಯಾಚಾರ ನಡೆಸಿದರು. ಪ್ರಜ್ಞೆ ಬಂದಾಗ ನಾನು ನನ್ನ ಮೇಲೆ ಅತ್ಯಾಚಾರ ಎಸಗಿದ 3ನೇ ವ್ಯಕ್ತಿಯನ್ನು ಗುರುತಿಸಿದೆ; ಆದರೆ ನನಗೆ ಪುನಃ ಅಮಲು ಪದಾರ್ಥ ಉಣಿಸಲಾಯಿತು.
ಈ ಅತ್ಯಾಚಾರ ಪ್ರಕರಣವು ಹರಿಯಾಣದಲ್ಲೀಗ ಭಾರೀ ಸುದ್ದಿ ಮಾಡುತ್ತಿದ್ದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಪೊಲೀಸರು ಕೇಸು ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.