ರಾಮದುರ್ಗ: ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಸಲ್ಲ. ಸರಕಾರಿ ಸೌಲಭ್ಯಗಳನ್ನು ತಾಲೂಕಿನ ಎಲ್ಲ ಗ್ರಾಮಗಳಿಗೆ ಹಾಗೂ ಅರ್ಹ ಜನತೆಗೆ ಜನತೆಗೆ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಸುರೇಬಾನ ಕೆಇಬಿ ಸ್ಟೇಷನ್ ಹತ್ತಿರ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಉಪವಿಭಾಗದಿಂದ ಹಿರೇಮೂಲಂಗಿ ಗ್ರಾಮದ ಹತ್ತಿರದ ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಮುಖಾಂತರ ರೇವಡಿಕೊಪ್ಪ, ಹಂಪಿಹೊಳಿ, ಕಿತ್ತೂರ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 6 ಕೋಟಿ ಅನುದಾನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ನೀರಾವರಿ ವಂಚಿತ ಗ್ರಾಮಗಳಿಗೆ ತಮ್ಮ ಅವ ಧಿಯಲ್ಲಿ ಏತ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಭಾಗದ ಮನಿಹಾಳ ಗ್ರಾಮವನ್ನು ಬಿಡಲಾಗಿದೆ ಎಂಬ ಅಸಮಾಧಾನ ಜನರಲ್ಲಿ ಬೇಡ. ಅಧಿಕಾರಿಗಳೊಂದಿಗೆ ಚರ್ಚಿಸಿ ಮನಿಹಾಳ ಭಾಗಕ್ಕೂ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ:ಉತ್ತರ ಕರ್ನಾಟಕ ಕಲಾವಿದರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ
ತಾ.ಪಂ ಸದಸ್ಯ ಶಿವಪ್ಪ ಮೇಟಿ ಮಾತನಾಡಿ, ಅವರಾದಿ ಗ್ರಾಮದಲ್ಲಿ ನಿರ್ಮಿಸಿದ ಏತ ನೀರಾವರಿ ಯೋಜನೆ ಕಳಪೆಯಾಗಿದ್ದು, ಇದರಿಂದ ಎಲ್ಲೆಂದರಲ್ಲಿ ಪೈಪ್‌ಗ್ಳು ಒಡೆದು ಜಮೀನುಗಳಲ್ಲಿ ನೀರು ಹರಿದು ಬೆಳೆಗಳಿಗೆ ಸಮಸ್ಯೆಯಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆದರೆ ಈ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದರು.
ಮುಖಂಡ ಸಂಗನಗೌಡ ಪಾಟೀಲ, ನಿಂಗಪ್ಪ ಮೆಳ್ಳಿಕೇರಿ ಮಾತನಾಡಿದರು. ರೇವಡಿಕೊಪ್ಪ, ಹಂಪಿಹೊಳಿ ಹಾಗೂ ಕಿತ್ತೂರ ಗ್ರಾಮದ ರೈತರು ಶಾಸಕರನ್ನು ಸನ್ಮಾನಿಸಿದರು. ಜಿಪಂ ಸದಸ್ಯರಾದ ಶಿವಕ್ಕ ಬೆಳವಡಿ, ಮಾರುತಿ ತುಪ್ಪದ, ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಮುಖಂಡರಾದ ಗಿರಿಯಪ್ಪ ಹಣಸಿ, ಮಹಾದೇವಪ್ಪ ಮದಕಟ್ಟಿ, ಗುತ್ತಿಗೆದಾರ ವಿಜಯ ಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.