Advertisement
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗಾಗಿ ಶುಕ್ರವಾರ ಚುನಾವಣೆ ನಡೆಯಲಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್‌ನ ಮೂವರು ಮತ್ತು ಬಿಜೆಪಿಯ ಒಬ್ಬರು ಆಯ್ಕೆಯಾಗುವುದು ಬಹುತೇಕ ಖಚಿತ. ಈ ಮಧ್ಯೆ ಅಡ್ಡಮತದಾನದ ನಿರೀಕ್ಷೆಯೊಂದಿಗೆ ಜೆಡಿಎಸ್ ಕೂಡ ಗೆಲ್ಲುವ ಆಸೆ ಹೊಂದಿದ್ದು, ಮ್ಯಾಜಿಕ್ ನಡೆದರೆ ಮಾತ್ರ ಅದು ಸಾಧ್ಯವಾಗಲಿದೆ.
ಜೆಡಿಎಸ್‌ನ ಏಳು ಬಂಡಾಯ ಶಾಸಕರು ಮತದಾನ ಮುಗಿದ ಮರುದಿನ ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾರ್ಚ್ 25 ರಂದು ಎಐ ಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸಮ್ಮುಖದಲ್ಲಿ ಮೈಸೂರಿನಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ಶಾಸಕರಾದ ಜೆಡಿಎಸ್‌ನ ಜಮೀರ್ ಅಹಮದ್, ಇಕ್ಬಾಲ್ ಅನ್ಸಾರಿ, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ರಮೇಶ್ ಬಂಡಿಸಿದ್ದೇಗೌಡ, ಭೀಮಾ ನಾಯ್ಕ, ಮಾಗಡಿ ಬಾಲಕೃಷ್ಣ ಅವರ ಸದ ಸ್ವತ್ವ ವಜಾಗೊಳಿಸುವ ಸಂಬಂಧದ ಪ್ರಕ ರಣ ಈಗಾಗಲೇ ಕೋರ್ಟಿ ನಲ್ಲಿದ್ದು, ಈ ನಡುವೆ ಮತ ಚಲಾಯಿಸಲು ಇವರು ಅರ್ಹರು ಎಂದು ವಿಧಾನ ಸಭಾಧ್ಯಕ್ಷ ಕೋಳಿವಾಡ ಹೇಳಿದ್ದಾರೆ. ಈ ನಡುವೆ, ರಾಹುಲ್ ಗಾಂಧಿ ಕಾರ್ಯಕ್ರಮದಲ್ಲೇ ಅದೇ ದಿನ ಜೆಡಿಎಸ್ ಹಿರಿಯ ಮುಖಂಡ ಎಂ.ಸಿ.ನಾಣಯ್ಯ ಕಾಂಗ್ರೆಸ್ ಸೇರಲಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್ ಗೆ
ಬಿಜೆಪಿಯ ಮಾಜಿ ಶಾಸಕ, ಮಾಜಿ ಸಚಿವ ರಾಚಯ್ಯ ಪುತ್ರ ಎ.ಆರ್.ಕೃಷ್ಣಮೂರ್ತಿ ಅವರು ಬಿಜೆಪಿ ತೊರೆದಿದ್ದು, ಮಾ. 25ರಂದು ಮೈಸೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
Related Articles
ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಸೇರ್ಪಡೆಯಾಗಲಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದ್ದು, ದಿನಾಂಕ ನಿಗದಿಯಾಗಬೇಕಿದೆ.
Advertisement
ಸಚಿವರಿಗೆ ಬಿಜೆಪಿ ಗಾಳಕಾಂಗ್ರೆಸ್ನ ಕೆಲವು ಹಾಲಿ ಶಾಸಕರು, ಸಚಿವರಿಗೆ ಬಿಜೆಪಿ ಗಾಳ ಹಾಕಿದ್ದು, ಅವರೆಲ್ಲರೂ ರಾಜ್ಯಸಭೆ ಚುನಾವಣೆ ಮುಗಿಯಲಿ ಎಂದು ಕಾಲಾವಕಾಶ ಕೇಳಿದ್ದಾರೆ. 6 ಕಾಂಗ್ರೆಸ್ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂಪರ್ಕದಲ್ಲಿದ್ದಾರೆ. ಮತ್ತೆ ಕೆಲವರು ನೇರವಾಗಿ ಬಿಜೆಪಿ ರಾಷ್ಟ್ರೀಯ ಆಧ್ಯಕ್ಷ ಅಮಿತ್ ಶಾ ಸಂಪರ್ಕದಲ್ಲೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾದು ನೋಡುತ್ತಿರುವ ಜೆಡಿಎಸ್
ರಾಜ್ಯಸಭೆ ಚುನಾವಣೆ ಮತದಾನ ಮುಗಿದ ತಕ್ಷಣ ವಿಧಾನಸಭೆ ಚುನಾವಣೆ ದಿನಾಂಕ ಯಾವುದೇ ಸಂದರ್ಭದಲ್ಲಿ ಪ್ರಕಟಗೊಳ್ಳಲಿದೆ. ಪಕ್ಷ ಬಿಡುವವರು, ಪಕ್ಷ ಸೇರುವವರು “ಮಹೂರ್ತ’ ನಿಗದಿಪಡಿಸಿಕೊಂಡಿದ್ದಾರೆ. ಜೆಡಿಎಸ್ ಸಹ ಆಯಾ ಪಕ್ಷಗಳಲ್ಲಿ ಟಿಕೆಟ್ ತಪ್ಪಬಹುದಾದ ಕೆಲವು ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದ್ದು, ಟಿಕೆಟ್‌ನ ಖಾತರಿಯೊಂದಿಗೆ ಪಕ್ಷಕ್ಕೆ ಆಹ್ವಾನಿಸಿದೆ. ಅನಿಲ್‌ಲಾಡ್, ಮಾಲೀಕಯ್ಯ ಗುತ್ತೇದಾರ್ ಅವರನ್ನು ಸೆಳೆಯಲು ಜೆಡಿಎಸ್ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಮತದಾನ: ಬೆಳಗ್ಗೆ 9ರಿಂದ ಸಂಜೆ 4ರವರೆಗೆ
ಮತ ಎಣಿಕೆ: ಸಂಜೆ 5 ಗಂಟೆಗೆ
ಫಲಿತಾಂಶ: ರಾತ್ರಿ ಅಂದಾಜು 8ಕ್ಕೆ
ಒಟ್ಟು ಸ್ಥಾನಗಳು– 4
ಕಣದಲ್ಲಿರುವ ಅಭ್ಯರ್ಥಿಗಳು– 5 ಕಾಂಗ್ರೆಸ್
1. ಸೈಯದ್ ನಾಸೀರ್ ಹುಸೇನ್
2. ಡಾ.ಎಲ್.ಹನುಮಂತಯ್ಯ
3. ಜಿ.ಸಿ.ಚಂದ್ರಶೇಖರ್ ಬಿಜೆಪಿ
4. ರಾಜೀವ್ ಚಂದ್ರಶೇಖರ್ ಜೆಡಿಎಸ್
5. ಬಿ.ಎಂ.ಫಾರೂಕ್
ಒಟ್ಟು 224 ಸದಸ್ಯಬಲದ ವಿಧಾನಸಭೆಯಲ್ಲಿ ಶಾಸಕರ ನಿಧನ, ರಾಜೀನಾಮೆಯಿಂದ ಬಲಾಬಲ 217ಕ್ಕೆ ಕುಸಿದಿದೆ. ಅಭ್ಯರ್ಥಿ ಗೆಲ್ಲಲು ತಲಾ 45 (44.4) ಮತಗಳ ಅಗತ್ಯವಿದ್ದು, ಪಕ್ಷಗಳು ಹೊಂದಿರುವ ಬಲಾಬಲ ಗಮನಿಸಿದಾಗ ಕಾಂಗ್ರೆಸ್‌ನ ಮೂವರು ಮತ್ತು ಬಿಜೆಪಿಯ ಒಬ್ಬರು ಗೆಲ್ಲುವುದು ಖಚಿತವಾಗಿದೆ. ವಿಧಾನಸಭೆ ಬಲಾಬಲ
ಒಟ್ಟು ಸ್ಥಾನಗಳು- 224
ಖಾಲಿ ಸ್ಥಾನಗಳು- 7
ಹಾಲಿ ಸದಸ್ಯಬಲ- 217
ಕಾಂಗ್ರೆಸ್- 123 (ಸ್ಪೀಕರ್ ಸೇರಿ)
ಬಿಜೆಪಿ- 43
ಜೆಡಿಎಸ್- 37
ಬಿಎಸ್‌ಆರ್ ಕಾಂಗ್ರೆಸ್- 3
ಕೆಜೆಪಿ- 2
ಕರ್ನಾಟಕ ಮಕ್ಕಳ ಪಕ್ಷ- 1
ಪಕ್ಷೇತರ- 8
ಅಭ್ಯರ್ಥಿ ಗೆಲುವಿಗೆ ಬೇಕಾದ ಮತ- 45 (44.4) ಕಾಂಗ್ರೆಸ್
ಸ್ಪೀಕರ್ ಸೇರಿ 123 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ನಲ್ಲಿ ಎ.ಎಸ್.ಪಾಟೀಲ್ ನಡಹಳ್ಳಿ ಬಿಜೆಪಿ ಸೇರಿದ್ದು, ಇದರಿಂದ ಸದಸ್ಯ ಬಲ 122ಕ್ಕೆ ಕುಸಿದಿದೆ. ಅಶೋಕ್ ಖೇಣಿ ಕಾಂಗ್ರೆಸ್ ಸೇರಿರುವುದರಿಂದ 123ಕ್ಕೆ ಏರಿದೆ. ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ಮತ ಹಂಚಿಕೆಯಾದ ಬಳಿಕ 33 ಮತ ಉಳಿಯಲಿದ್ದು, ಇದರೊಂದಿಗೆ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಏಳು ಶಾಸಕರು, ಕೆಜೆಪಿಯ ಬಿ.ಆರ್.ಪಾಟೀಲ್, ಪಕ್ಷೇತರರಾದ ವರ್ತೂರು ಪ್ರಕಾಶ್ ಮತ್ತು ಬಿ.ನಾಗೇಂದ್ರ ಬೆಂಬಲ ಸಿಗಲಿದೆ. ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಇನ್ನು ಎರಡು ಮತ ಮಾತ್ರ ಬೇಕಾಗಿದ್ದು, ಪಕ್ಷೇತರರ ಬೆಂಬಲ ಇಲ್ಲವೇ ಎರಡನೇ ಪ್ರಾಶಸ್ತ್ಯದ ಮತಗಳಿಂದ ಗುರಿ ತಲುಪುವುದು ಕಷ್ಟವೇನಲ್ಲ. ಬಿಜೆಪಿ
43 ಸ್ಥಾನ ಹೊಂದಿರುವ ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಇನ್ನೂ 2 ಮತ ಬೇಕು. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಎ.ಎಸ್.ಪಾಟೀಲ್ ನಡಹಳ್ಳಿ ಬಿಜೆಪಿ ಸೇರಿರುವುದರಿಂದ ಸದಸ್ಯ ಬಲ 44ಕ್ಕೆ ಏರಿದೆ. ಜತೆಗೆ ಬಿಎಸ್‌ಆರ್ ಕಾಂಗ್ರೆಸ್‌ನ ಮೂರು ಮತ್ತು ಕೆಜೆಪಿಯ ಒಬ್ಬ ಸದಸ್ಯರ ಬೆಂಬಲವೂ ಇರುವುದರಿಂದ ಒಟ್ಟು ಬಲ 47ಕ್ಕೆ ಏರಿಕೆಯಾಗಿದ್ದು, ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದು ಸುಲಭ. ಜೆಡಿಎಸ್
ಒಟ್ಟು 37 ಸದಸ್ಯರಿರುವ ಜೆಡಿಎಸ್‌ನಲ್ಲಿ ಅಮಾನತುಗೊಂಡಿರುವ 7 ಶಾಸಕರು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ಅದರ ಬಲ 30ಕ್ಕೆ ಕುಸಿದಿದೆ. ಹೀಗಾಗಿ ಗೆಲ್ಲಲು ಇನ್ನೂ 15 ಸದಸ್ಯರ ಬೆಂಬಲ ಬೇಕಾಗುತ್ತದೆ. ಹೀಗಾಗಿ ಪಕ್ಷದ ಅಭ್ಯರ್ಥಿ ಗೆಲ್ಲುವುದು ಸಾಧ್ಯವಾಗದ ಮಾತು. ಅನರ್ಹತೆ ವಿಚಾರಣೆ ಏಪ್ರಿಲ್ 2ಕ್ಕೆ
ಜೆಡಿಎಸ್‌ನ ಏಳು ಬಂಡಾಯ ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್ 2ಕ್ಕೆ ಮುಂದೂಡಿದೆ. ಜೆಡಿಎಸ್ ಶಾಸಕರಾದ ಬಿ.ಬಿ. ನಿಂಗಯ್ಯ ಹಾಗೂ ಸಿ.ಎನ್. ಬಾಲಕೃಷ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ರಾಘವೇಂದ್ರ ಎಸ್ ಚೌಹಾಣ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು. ವಿಚಾರಣೆ ವೇಳೆ ಕೆ.ಬಿ ಕೋಳಿವಾಡ ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್, ರಿಟ್ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಹಾಗೂ ಶಾಸಕರ ಅನರ್ಹತೆ ಕುರಿತ ತೀರ್ಪು ಪ್ರಕಟಿಸುವ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿ ಅಭಿಪ್ರಾಯ ತಿಳಿಸಲು ಕಾಲವಕಾಶ ನೀಡಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು. ಈ ಮನವಿಯನ್ನು ಮಾನ್ಯಮಾಡಿದ ನ್ಯಾಯಪೀಠ, ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಪಟ್ಟಂತೆ ನಿರ್ದಿಷ್ಟ ಕಾಲಮಿತಿಯಲ್ಲಿ ಸ್ಪೀಕರ್ ತೀರ್ಪು ಪ್ರಕಟಿಸದಿದ್ದರೆ, ಹೈಕೋರ್ಟ್ ಕೂಡ ಸಂವಿಧಾನದ 226 ಅಧಿಕಾರ ಬಳಸಿ ನಿರ್ದೇಶನ ನೀಡಬಹುದು ಎಂದು ತಿಳಿಸಿ, ವಿಚಾರಣೆಯನ್ನು ಏಪ್ರಿಲ್2ಕ್ಕೆ ಮುಂದೂಡಿತು.