ಹಂಪನಕಟ್ಟೆ: ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಶೇ. 67ರಷ್ಟು ಪ್ರಶ್ನೆಗಳು ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿಯೇ ಬರುತ್ತವೆ. ಆದರೂ ರಾಜ್ಯಶಾಸ್ತ್ರ ವಿಷಯಕ್ಕೆ ವಿದ್ಯಾರ್ಥಿಗಳ ಒಲವು ಕಡಿಮೆಯಾಗುತ್ತಿದೆ ಎಂಬ ಆರೋಪಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುವ ಹೊಣೆ ಶಿಕ್ಷಕರ ಮೇಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ| ಪಿ.ಎಲ್. ಧರ್ಮ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಾಪಕರ ಅಸೋಸಿ ಯೇಶನ್ ಮತ್ತು ವಿವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶನಿವಾರ ವಿವಿ ಕಾಲೇಜು ಸಭಾಂಗಣದಲ್ಲಿ ನಡೆದ ಅಂತಿಮ ಬಿಎ ಪದವಿಯ ಹೊಸ ಪಠ್ಯಕ್ರಮ ಕುರಿತ ಕಾರ್ಯಾ ಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಈ ವಿಚಾರಗಳನ್ನು ವಿದ್ಯಾರ್ಥಿ ಗಳಿಗೆ ಮನದಟ್ಟು ಮಾಡುವ ಕೆಲಸ ಶಿಕ್ಷಕರಿಂದಾಗಬೇಕಾಗಿದೆ. ತರಗತಿಗಳಲ್ಲಿ ಮಕ್ಕಳಿಗೆ ಮಾತನಾಡಲು ಅವಕಾಶ ನೀಡಿ. ಅವರ ಅನುಭವ, ಯೋಚನೆಗಳಿಗೆ ಮಹತ್ವ ನೀಡಿದಾಗ ಪಠ್ಯಪುಸ್ತಕದ ವಿಚಾರಗಳನ್ನು ಆವರಿಗೆ ತಿಳಿಹೇಳಲು ಸಹಾಯವಾಗುತ್ತದೆ ಎಂದರು.
ಹೊಸ ಪಠ್ಯಕ್ರಮ ರಾಜ್ಯಶಾಸ್ತ್ರದ ಬಗ್ಗೆ ಕಳೆದ 20 ವರ್ಷಗಳಿಂದ ಇದ್ದ ಕಲ್ಪನೆಗಳನ್ನು ಬದಲಾಯಿಸಲು ಪ್ರಯ ತ್ನಿಸಿದೆ. ಒಂದು ಬೋರ್ಡ್ ಪಠ್ಯಕ್ರಮ ತಯಾರಿಸಿರಬಹುದು ಆದರೆ ಅದಕ್ಕೆ ಜೀವ ತುಂಬುವ ಕೆಲಸ ಶಿಕ್ಷಕರದು ಎಂದು ಹೇಳಿದರು.
ವಿವಿ ಕಾಲೇಜಿನ ಪ್ರಾಂಶುಪಾಲ ಡಾ| ಉದಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಅಸೋಸಿಯೇಶನ್‌ನ ಕಾರ್ಯದರ್ಶಿ ಕೃಷ್ಣಾನಂದ ಶೆಣೈ ಉಪಸ್ಥಿತರಿದ್ದರು.ಅಸೋಸಿಯೇಶನ್ ಅಧ್ಯಕ್ಷ ಡಾ| ಲತಾ ಎ. ಪಂಡಿತ್ ಸ್ವಾಗತಿಸಿದರು.