Advertisement

ಮುಸ್ಲಿಮರಿಗೆ ದ್ರೋಹವೆಸಗಿದ್ರೆ ರಾಜಕೀಯ ನಿವೃತ್ತಿ

04:28 PM May 01, 2022 | Team Udayavani |

ಬಳ್ಳಾರಿ: ಸಿಎಎ, ಎನ್‌ಆರ್‌ಸಿ ಕುರಿತು 2020ರಲ್ಲಿ ನಡೆದಿದ್ದ ಬಹಿರಂಗ ಸಮಾವೇಶದಲ್ಲಿ ಮುಸಲ್ಮಾನರ ವಿರುದ್ಧ ಹರಿಹಾಯ್ದಿದ್ದ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಸ್ಲಿಮರ ಮನವೊಲಿಕೆಗೆ ಮುಂದಾಗುತ್ತಿದ್ದಾರೆ.

Advertisement

ನಗರದ ಕಲ್ಯಾಣ ಮಂಟಪವೊಂದರಲ್ಲಿ ಪವಿತ್ರ ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ‘ಇಫ್ತಾರ್‌ ಕೂಟ’ದಲ್ಲಿ ಮುಸಲ್ಮಾನರನ್ನು ಓಲೈಸುವ ಮಾತುಗಳನ್ನಾಡಿರುವುದು ಕುತೂಹಲ ಮೂಡಿಸಿದೆ.

ನನ್ನ ಕೊನೆಯ ಉಸಿರು ಇರುವವರೆಗೂ ನಾನೇನಾದರೂ ಮುಸಲ್ಮಾನರಿಗೆ ದ್ರೋಹ ಬಗೆದರೆ ರಾಜಕೀಯ ನಿವೃತ್ತಿ ಹೊಂದುವೆ. ನಾನು ನೇರ ನಿಷ್ಠುರವಾದಿ, ಮನಸ್ಸಲ್ಲಿ ಇರುವುದನ್ನು ನೇರವಾಗಿ ಹೇಳಿಬಿಡುತ್ತೇನೆ. ಮತ್ತೆ ಅದನ್ನು ಮರೆತು ಬಿಡುತ್ತೇನೆ. ನಮಗೂ ನಿಮಗೂ ಇರುವ ಸಂಬಂಧವೇ ಬೇರೆ. ನನ್ನ ಮನಸ್ಸಿನಲ್ಲಿ ಏನೂ ಇರಲ್ಲ ಎಂದು ಮನವೊಲಿಸುವ ಮಾತುಗಳನ್ನಾಡಿದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಬಳ್ಳಾರಿ ಉಸ್ತುವಾರಿ ವಹಿಸಿಕೊಂಡ ಬಳಿಕ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಿದ್ದಾರೆ. ಮಾತೃ ಜಿಲ್ಲೆಗೆ ಏನಾದರೂ ಮಾಡಬೇಕು ಎನ್ನುವುದು ಅವರ ಮನಸ್ಸಾಗಿದೆ. ವಿಮಾನ ನಿಲ್ದಾಣ ಸೇರಿದಂತೆ ಜಿಲ್ಲೆಗೆ ಬೇಕಾಗುವ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಐಟಿಐ ಕಾಲೇಜು ಆರಂಭಿಸುವಂತೆ ಸಚಿವ ಶ್ರೀರಾಮಲು ಅವರ ಬಳಿ ಕೇಳಿಕೊಳ್ಳುವೆ. ಅಲ್ಲದೇ, ಮುಂದಿನ ದಿನಗಳಲ್ಲಿ ಇಂಜಿನೀಯರಿಂಗ್‌ ಕಾಲೇಜು ಸಹ ಮಂಜೂರು ಮಾಡಿಸುವ ಪ್ರಯತ್ನ ಮಾಡಲಾಗುವುದು ಎಂದವರು ಭರವಸೆ ನೀಡಿದ್ದಾರೆ.

ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಪವಿತ್ರ ರಂಜಾನ್‌ ದಿನಗಳಲ್ಲಿ ಉಪವಾಸ ಆಚರಿಸುತ್ತಿರುವ ನಿಮಗೆಲ್ಲರಿಗೂ ಭಗವಂತ ಒಳ್ಳೆಯದು ಮಾಡಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ. ಒಳ್ಳೆಯ ಯೋಚನೆ ಮಾಡಿ, ಒಳ್ಳೆಯ ಕೆಲಸ ಮಾಡಿ, ನಿಮಗೆಲ್ಲ ಭಗವಂತ ಒಳ್ಳೆಯದು ಮಾಡುತ್ತಾನೆ. ನಮ್ಮದು ಎಂತಹ ದೇಶವೆಂದರೆ ಇಲ್ಲಿ ಹಿಂದೂ ಇರಬಹುದು ಮುಸ್ಲಿಂ ಇರಬಹುದು, ಕ್ರೈಸ್ತರು ಇರಬಹುದು ಎಲ್ಲರೂ ಪ್ರೀತಿ ವಿಶ್ವಾಸದಿಂದ ಇದ್ದೇವೆ. ಎಲ್ಲ ಧರ್ಮದವರೂ ಅವರವರ ಧರ್ಮ ಆಚರಿಸಿಕೊಂಡು ಬಂದಿದ್ದಾರೆ, ಸಾವಿರಾರು ವರ್ಷಗಳಿಂದ ಎಲ್ಲರಿಗೂ ಸೇರಿದ ದೇಶವಾಗಿದೆ ಎಂದವರು ತಿಳಿಸಿದ್ದಾರೆ.

Advertisement

ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ, ಕ್ರೈಸ್ತ ಧರ್ಮಾಧ್ಯಕ್ಷ ಬಿಷಪ್‌ ಹೆನ್ರಿ ಡಿ.ಸೋಜಾ, ಖಾಜಿಸಾಬ್‌, ಖಾಜಿ ಖಾನ್‌ಸಾಬ್‌, ಕಲ್ಯಾಣ ಸ್ವಾಮಿ, ಬುಡಾ ಅಧ್ಯಕ್ಷ ಪಾಲಣ್ಣ, ಪಾಲಿಕೆ ಸದಸ್ಯರಾದ ಗೋವಿಂದರಾಜುಲು, ಶ್ರೀನಿವಾಸ್‌ ಮೋತ್ಕರ್‌, ಮೆಹಪೂಜ್‌ ಅಲಿಖಾನ್‌, ಓಬಳೇಶ್‌, ಮೌಲಾನಾ ಇದ್ರೀಸ್‌, ನೂರ್‌ ಬಾಷ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next