Advertisement
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಸವಾಲು ಹಾಕಿದ ಶಾಸಕ ಯಶವಂತರಾಯಗೌಡ, ಶ್ರೀಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ನಯಾ ಪೈಸೆ ಲೋಪವಾಗಿದ್ದರೂ ಶಾಸಕ ಸ್ಥಾನದಿಂದ ಮಾತ್ರವಲ್ಲ ರಾಜಕೀಯದಿಂದಲೂ ನಿವೃತ್ತಿ ಹೊಂದುವುದಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಬಹಿರಂಗ ಸವಾಲು ಹಾಕಿದರು.
Related Articles
Advertisement
ಬಾಜಾ-ಭಜಂತ್ರಿ ಯಾವಾಗ ಬೇಕೆಂದಾಗ ಬಾರಿಸಲು ಬರಲ್ಲ. ಚುನಾವಣೆ ಬಂದಾಗ ಯಾರು ಏನು ಬಾರಿಸುತ್ತಾರೋ ನೋಡೋಣ ಎಂದು ತಿರುಗೇಟು ನೀಡಿದರು.
ಬಿಎಲ್ ಡಿಇ ಸಂಸ್ಥೆ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ. ಸಂಸ್ಥೆಯ ಸಮಗ್ರ ಚರಿತ್ರೆಯ ಕುರಿತು ಬರುವ ದಿನಗಳಲ್ಲಿ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ, ಈಗಿನಿಂದಲೇ ಆ ಕೆಲಸ ಆರಂಭಗೊಂಡಿದೆ ಎಂದರು. ಇನ್ನು ನಿಮ್ಮಿಂದ ನಾನು ಮಂತ್ರಿಯಾಗಿಲ್ಲ ಎನ್ನುವ ಅವರು ನಮ್ಮಂಥ ಶಾಸಕರು ನೀಡಿದ ಸಹಕಾರದಿಂದಲೇ ಸರ್ಕಾರ ರಚನೆಯಾಗಿದೆ. ಸರ್ಕಾರವೇ ಬರದಿದ್ದರೆ ನೀವೆಲ್ಲಿ ಮಂತ್ರಿ ಆಗುತ್ತಿದ್ದೀರಿ? ಎಂದು ಎಂ.ಬಿ.ಪಾಟೀಲರನ್ನು ಪ್ರಶ್ನಿಸಿದರು.
ನೀವು ಮಂತ್ರಿ ಆದದ್ದು, ಅಪ್ಪಾಜಿ ನಾಡಗೌಡ, ಶಿವಾನಂದ ಪಾಟೀಲ ಅವರು ಮಂತ್ರಿಯಾಗುವ ಅರ್ಹತೆ ಇದ್ದರೂ ನಿಮಗಾಗಿ ತ್ಯಾಗ ಮಾಡಲಿಲ್ಲವೇ, ನಿಮಗೆ ಕೃತಜ್ಞತೆ ಎಂಬುದೇ ಇಲ್ಲವೇ ಎಂದು ಪ್ರಶ್ನಿಸಿದರು.
ನಿಮಗೆ ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳಿ. ನಿಮಗೆ ಮಾತ್ರವಲ್ಲ ಕಾಂಗ್ರೆಸ್ ನಲ್ಲಿ ಇರುವ ಎಲ್ಲರಿಗೂ ಸೋನಿಯಾಜಿ, ರಾಹುಲ್ ಜೀ ಅವರ ಕೃಪೆ ಇದ್ದೇ ಇರುತ್ತದೆ. ನಿಮ್ಮನ್ನು ಮಂತ್ರಿ ಮಾಡುವಲ್ಲಿ ಪರಮೇಶ್ವರ ಅಂಥವರನ್ನು ಸ್ಮರಿಸಿ ಎಂದರಲ್ಲದೇ ನಾವು ಮಂತ್ರಿ ಮಾಡಿದ್ದೇವೆಂದು ಹೇಳಿಲ್ಲ. ಬದಲಾಗಿ ಸಾಕಷ್ಟು ಸಹಕಾರ ನೀಡಿದ್ದೇವೆ ಎಂಬುದು ನೆನಪಿರಲಿ ಎಂದರು.
2013, 2018 ರ ಚುನಾವಣೆಯಲ್ಲಿ ನೀವು ಏನೆಲ್ಲ ಕಸರತ್ತು ಮಾಡಿದರೂ ನಾನು ಗೆದ್ದೆ. ನೀವು ಕಾಡಿದಂತೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ನನ್ನ ಕೈ ಹಿಡಿದಿದ್ದಾರೆ. ಮುಂದಿನ ಚುನಾವಣೆಯಲ್ಲೂ ಅದು ಮರುಕಳಿಸಲಿದೆ ಎಂದರು. ನಾನು ಲಿಂಬೆ ಅಭಿವೃದ್ಧಿ ಮಂಡಳಿ ಮಾಡಿಸಿದ್ದನ್ನು ಸಹಿಸದೇ ನೀವು ಸಿ.ಎಂ. ಸಿದ್ದರಾಮಯ್ಯ ಅವರ ಬಳಿ ದ್ರಾಕ್ಷಿ ಅಭಿವೃದ್ಧಿ ಮಂಡಳಿ ಮಾಡಿ ಎಂದು ಹೋದಾಗ ಲಿಂಬೆ ಅಭಿವೃದ್ಧಿ ಮಾಡಿದ್ದು ಸಹ ನಿನಗೆ ಸಹಿಸಿಕೊಳ್ಳಲು ಆಗುತ್ತಿಲ್ಲವೇ ಎಂದು ಬೈದು ಕಳುಹಿಸಿದ್ದರು. ಅಂಥ ಮನಸ್ಥಿತಿ ನಿಮ್ಮದು ಎಂದು ಕುಟುಕಿದರು.
ನಿಮ್ಮ ಕೆಲಸಕ್ಕೆ ಪದೇ ಪದೇ ಸಿದ್ದೇಶ್ವರ ಶ್ರೀಗಳ ಹೆಸರು ಹೇಳಿಕೊಂಡು ಪ್ರಚಾರ ಪಡೆಯುವುದನ್ನು ಬಿಡಿ. ದೇವರಾದ ಅವರು ಎಲ್ಲರಿಗೂ ಆಶೀರ್ವಾದ ಮಾಡಿ ಮಾತನಾಡುತ್ತಾರೆ, ನನ್ನ ಬಗ್ಗೆಯೂ ಹೊಗಳಿಕೆ ಮಾತನಾಡುತ್ತಾರೆ. ಹಾಗಂತ ಅವರ ಹೆಸರನ್ನು ನಿಮ್ಮ ರಾಜಕೀಯಕ್ಕೆ ಬರುವ ಬಳಸಿಕೊಳ್ಳುವುದನ್ನು ನಿಲ್ಲಿಸಿ. ಬದಲಾಗಿ ಶ್ರೀಗಳ ಆದರ್ಶಗಳನ್ನು ಕಿಂಚಿತ್ತಾದರೂ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡಿಸಿದ ಬಗ್ಗೆ ಹೇಳಿದವರಿಗೆ ಗೊತ್ತಿರಲಿ. ಇವರಿಗಿಂತ ಮೊದಲೇ ನನ್ನ ಕುಟುಂಬ ಜಿಲ್ಲಾ ಪಂಚಾಯಿತಿ ರಾಜಕಾರಣದಲ್ಲಿತ್ತು. ಹೊಸದಾಗಿ ಜಿಲ್ಲಾ ಪರಿಷತ್ ರಚನೆಯಾದಾಗ ಎಲ್ಲೆಡ ಜನತಾ ಪಕ್ಷ ಗೆದ್ದರೆ ಕಾಂಗ್ರೆಸ್ ಕಟ್ಟಾಳುವಾಗಿದ್ದ ನಮ್ಮ ತಂದೆ ವಿಠಲಗೌಡ ಪಾಟೀಲ ಅಗರಖೇಡ ಜಿ.ಪಂ.ನಿಂದ ಗೆದ್ದಿದ್ದ ಇಡೀ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಏಕೈಕ ಅಭ್ಯರ್ಥಿ. ನಾನು ಗೆದ್ದಾಗಲೂ ಜನತಾದಳ ಜಯಭೇರಿ ಬಾರಿಸಿದ್ದರೂ ಕಾಂಗ್ರೆಸ್ ಪಕ್ಷದಿಂದ ಗೆದ್ದ ಏಕೈಕ ಅಭ್ಯರ್ಥಿ ನಾನೇ ಆಗಿದ್ದೆ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಬಿ.ಕೆ.ಗುಡದಿನ್ನಿ, ಮಿಸಾಳೆ ಅವರಂಥ ನಾಯಕರ ಕೊಡುಗೆ ಇದೆ. ಜೊತೆಗಿದ್ದವರಲ್ಲಿ ನೀವೂ ಒಬ್ಬರು. ನಂತರ ನೀವು ನನ್ನ ಚುನಾವಣೆಯಲ್ಲಿ ಏನೇನು ಮಾಡಿದ್ದೀರಿ ಎಂಬುದಕ್ಕೆ ನಾನು ಸಾಕ್ಷಿ ಕೊಡಬಲ್ಲೆ. ಆದರೆ ನಾನು ತಿಕೋಟಾ ಕ್ಷೇತ್ರದಲ್ಲಿ ನಿಮ್ಮ ವಿರುದ್ಧ ಕೆಲಸ ಮಾಡಿದ್ದನ್ನು ರುಜುವಾತು ಮಾಡಿ ಎಂದು ಯಶವಂತರಾಯಗೌಡ ಆಗ್ರಹಿಸಿದರು.
ಸಂಸದ ರಮೇಶ ಜಿಗಜಿಣಗಿ ಅವರು ಬಿಜೆಪಿ ಪಕ್ಷದಿಂದ ಜಿಲ್ಲೆಯ ನೀರಾವರಿ ಆಗಿದೆ ಎಂದಿದ್ದಾರೆ. ನೀರಾವರಿ ವಿಷಯದಲ್ಲಿ ಈವರೆಗೂ ಸುಮ್ಮನಿದ್ದ ಬಿಜೆಪಿ ನಾಯಕರು ಇದೀಗ ಎಚ್ಚರವಾಗಿದ್ದಾರೆ. ಸಂಸದರು ಇಂಡಿ ಕ್ಷೇತ್ರಕ್ಕೆ ಹೋಗಿ ನೀರಾವರಿ ಯೋಜನೆ ಮಾಡಿದ್ದು ಬಿಜೆಪಿ ಪಕ್ಷ ಎಂದಿದ್ದಾರೆ. ಅದನ್ನು ನಾವೆಲ್ಲಿ ಅಲ್ಲಗಳೆದಿದ್ದೇವೆ. ಹಾಗಂತ ನಿಮ್ಮೊಬ್ಬರಿಂದಲೇ ಎಲ್ಲವೂ ಆಗಿಲ್ಲ. ಇದರಲ್ಲಿ ಎಲ್ಲ ಸರ್ಕಾರಗಳ ಪಾಲೂ ಇದೆ. ದೇವೇಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಸಹ ನೀರಾವರಿಗೆ ಕೊಡುಗೆ ನೀಡಿದ್ದಾರೆ. ನಾವದನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕು ಎಂದರು.