Advertisement

ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿ: ಪರಿಹಾರ ಸಾಧ್ಯ ಎಂದ ಸಿದ್ದರಾಮಯ್ಯ

12:27 PM Feb 13, 2022 | Team Udayavani |

ಬೆಂಗಳೂರು : ಸುಪ್ರೀಂ ಕೋರ್ಟ್ ನ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಗೆ ಎದುರಾಗಿರುವ ಅಪಾಯದ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದಿದ್ದಾರೆ.

Advertisement

ಸುಪ್ರೀಂ ಕೋರ್ಟ್ ಇತ್ತೀಚಿನ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ಜಾತಿಯ ರಾಜಕೀಯ ಮೀಸಲಾತಿಗೆ ಎದುರಾಗುವ ಅಡ್ಡಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ,ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದಿದ್ದಾರೆ.

ಮೂರು ಹಂತದ ಪರಿಶೀಲನೆ ನಡೆಸಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕೆಂದು ಸುಪ್ರೀಮ್ ಕೋರ್ಟ್ ಹೇಳಿದೆ. ದೇಶದಲ್ಲಿಯೇ ಮೊದಲಬಾರಿ ಮನೆಮನೆ ತೆರಳಿ ರಾಜ್ಯದಲ್ಲಿ ನಡೆಸಲಾಗಿರುವ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಬಹುದೆಂಬ ಭರವಸೆ ನನಗಿದೆ ಎಂದಿದ್ದಾರೆ.

ಹಿರಿಯ ವಕೀಲ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯವ್ಯಾಪ್ತಿಯಲ್ಲಿ ರಾಜಕೀಯ ಕ್ಷೇತ್ರ ಸೇರಿಲ್ಲದೆ ಇದ್ದರೂ ಅದು ರಾಜ್ಯದ ಎಲ್ಲ ಜಾತಿಜನರ ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನು ಕೂಡಾ ಸಂಗ್ರಹಿಸಿದೆ. ರಾಜ್ಯಸರ್ಕಾರ ಈ ಅಂಶವನ್ನು ಗಮನಕ್ಕೆ ತಂದರೆ ಸುಪ್ರೀಮ್ ಕೋರ್ಟ್ ಗಣನೆಗೆ ತೆಗೆದುಕೊಳ್ಳಬಹುದು ಎಂದರು.

ರಾಜ್ಯದ ಬಿಜೆಪಿ ಸರ್ಕಾರ ಕಾಲವ್ಯಯಮಾಡದೆ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ತಕ್ಷಣ ಒಪ್ಪಿಕೊಂಡು ಜಾರಿಗೆ ತರಬೇಕು. ಇದೇ ವರದಿಯನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ಮುಂದೆ ತನ್ನವಾದ ಮಂಡಿಸಿ ಹಿಂದುಳಿದ ಜಾತಿಗಳಿಗೆ ಆಗಲಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದರು.

Advertisement

ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಮನೆಮನೆಗೆ ಹೋಗಿ ರಾಜ್ಯದ ಜನತೆಯ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸಮೀಕ್ಷೆ ನಡೆಸಿದ್ದೆ. ಇದರಲ್ಲಿ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ನಿಖರವಾದ ಮಾಹಿತಿ ಇರುವುದರಿಂದ ಬೇರೆ ರಾಜ್ಯಗಳಂತೆ ಪ್ರತ್ಯೇಕ ಸಮೀಕ್ಷೆ ನಡೆಸುವ ಅಗತ್ಯ ಇರಲಾರದು ಎಂದರು.

2010ರಲ್ಲಿಯೇ ಸುಪ್ರೀಂಕೋರ್ಟ್ ರಾಜಕೀಯ ಮೀಸಲಾತಿಗೆ ಪ್ರತ್ಯೇಕ ಮಾನದಂಡ ರೂಪಿಸುವಂತೆ ಆದೇಶಿಸಿತ್ತು. ಆ ಆದೇಶವನ್ನು ಪರಿಶೀಲಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದೆ. ಅದೇ ಸಮಿತಿಯನ್ನು ಪುನರ್ರಚಿಸಿ ಈಗಿನ ಬಿಕ್ಕಟ್ಟಿಗೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆಗೆ ಬಂದಾಗೆಲ್ಲ ಸುಪ್ರೀಮ್ ಕೋರ್ಟ್ ವಿಸ್ತೃತ,ವಿಶ್ವಾಸಾರ್ಹ ಅಂಕಿ-ಅಂಶಗಳ ಆಧಾರವನ್ನು ಕೇಳುತ್ತಾ ಬಂದಿದೆ. ಇದು ಕರ್ನಾಟಕದಲ್ಲಿ ನಡೆದಂತೆ ಮನೆಮನೆಗೆ ಹೋಗಿ ಸಂಗ್ರಹಿಸಿದ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೇ ಸರಿಯಾದ ಉತ್ತರವಾಗಿದೆ ಎಂದರು.

ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸಿದ್ದವಿರುವುದರಿಂದ ಸುಪ್ರೀಮ್ ಕೋರ್ಟ್ ಆದೇಶದಿಂದ ಬೇರೆ ರಾಜ್ಯಗಳಂತೆ ಕರ್ನಾಟಕ ರಾಜ್ಯ ಆತಂಕ ಪಡಬೇಕಾಗಿಲ್ಲ. ರಾಜ್ಯ ಸರ್ಕಾರ ರಾಜಕೀಯ ಮಾಡದೆ ಈ ವರದಿಯನ್ನು ಮೊದಲು ಜಾರಿಗೆ ತರಬೇಕು ಎಂದರು.

ಸುಪ್ರೀಮ್ ಕೋರ್ಟ್ ಆದೇಶವನ್ನು ಜಿಲ್ಲಾ ಪಂಚಾಯತ್ –ತಾಲೂಕು ಪಂಚಾಯತ್ ಚುನಾವಣೆಗಳನ್ನು ಮುಂದೂಡಲು ಸಿಕ್ಕಿದ ಪಿಳ್ಳೆ ನೆಪ ಎಂದು ಪರಿಗಣಿಸದೆ ತಕ್ಷಣ ಹಿಂದುಳಿದ ಜಾತಿಗಳಿಗೆ ಆಗಲಿರುವ ರಾಜಕೀಯ ಅನ್ಯಾಯವನ್ನು ಸರಿಪಡಿಸಲು ಯುದ್ದೋಪಾದಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಕ್ಷಣ ವಿರೋಧಪಕ್ಷಗಳ ನಾಯಕರು ಮತ್ತು ಕಾನೂನು ತಜ್ಞರ ಸಭೆ ಕರೆದು ಚರ್ಚೆ ನಡೆಸಿ, ಸುಪ್ರೀಮ್ ಕೋರ್ಟ್ ಆದೇಶದಿಂದ ಉದ್ಭವವಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಅಭಿಪ್ರಾಯ ಪಡೆದು ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯತ್-ತಾಲೂಕು ಪಂಚಾಯತ್ ಗಳಲ್ಲಿ ದೇಶದಲ್ಲಿಯೇ ಮೊದಲ ಬಾರಿ ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ನೀಡಿದ ರಾಜ್ಯ ಕರ್ನಾಟಕ. ಪ್ರಧಾನಿ ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಮಾಡಿ ಈ ಮೀಸಲಾತಿಯನ್ನು ಇಡೀ ದೇಶಕ್ಕೆ ವಿಸ್ತರಿಸಿದ್ದನ್ನು ಇಲ್ಲಿ ನೆನಪು ಮಾಡಬಯಸುತ್ತೇನೆ ಎಂದರು.

ಹಿಂದುಳಿದ ಜಾತಿಗಳು ದಶಕಗಳ ಕಾಲದಿಂದ ರಾಜಕೀಯ ಮೀಸಲಾತಿ ಇಲ್ಲದೆ ಕಾರಣದಿಂದ ನ್ಯಾಯಬದ್ದ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿವೆ. ಸುಪ್ರೀಂ ಕೋರ್ಟ್ ಆದೇಶದಿಂದ ಮತ್ತೆ ಅವರು ಅವಕಾಶವನ್ನು ಕಳೆದುಕೊಂಡರೆ ಅದು ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next