Advertisement

ಬೇಗ್‌ ವಶಕ್ಕೆ ರಾಜಕೀಯ ಕಾರಣ?

10:26 PM Jul 16, 2019 | Team Udayavani |

ಬೆಂಗಳೂರು: ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆರ್‌. ರೋಷನ್‌ಬೇಗ್‌ ಅವರನ್ನು ಸೋಮವಾರ ರಾತ್ರಿ ದಿಢೀರ್‌ ವಶಕ್ಕೆ ಪಡೆದು ಮಂಗಳವಾರ ಮಧ್ಯಾಹ್ನ ಬಿಡುಗಡೆ ಮಾಡಿರುವ ಎಸ್‌ಐಟಿ ಕ್ರಮ ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisement

ಸೋಮವಾರ ಬೆಳಗ್ಗೆ ಎಸ್‌ಐಟಿ ಮುಂದೆ ರೋಷನ್‌ ಬೇಗ್‌ ಪರವಾಗಿ ಹಾಜರಾಗಿದ್ದ ವಕೀಲರಿಗೆ ಜುಲೈ 19 ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಮುಖ್ಯಸ್ಥರೇ ಸೂಚಿಸಿ ಪತ್ರ ಸಹ ಕೊಟ್ಟಿದ್ದಾರೆ. ಇಷ್ಟಾದರೂ ರಾತ್ರಿ ಯಾಕೆ ವಶಕ್ಕೆ ಪಡೆಯಲಾಯಿತು ಎಂಬ ಪ್ರಶ್ನೆ ಮೂಡಿದೆ.

ರೋಷನ್‌ಬೇಗ್‌ ಪರಾರಿಯಾಗಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಯಿತು ಎಂಬುದು ಎಸ್‌ಐಟಿ ಪೊಲೀಸರ ವಾದ. ಆದರೆ, ಜುಲೈ 19 ಕ್ಕೆ ಹಾಜರಾಗುವಂತೆ ಎಸ್‌ಐಟಿಯೇ ಸೂಚಿಸಿ ಮತ್ತೆ ವಶಕ್ಕೆ ಪಡೆದಿರುವುದರ ಹಿಂದೆ ರಾಜಕೀಯ ಸೇಡಿನ ಕ್ರಮ ಎಂಬುದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ರೋಷನ್‌ಬೇಗ್‌ ಅವರು ಇದೆಲ್ಲಾ ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ.

ಗುರುವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲಿದ್ದು ರೋಷನ್‌ಬೇಗ್‌ ಅವರು ಸರ್ಕಾರ ಬೆಂಬಲಿಸುವ ವಿಶ್ವಾಸವಿತ್ತು. ಆದರೆ, ಅವರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದ ಕಾರಣ ಅನುಮಾನಗೊಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

ರೋಷನ್‌ಬೇಗ್‌ ಅವರು ದಿಢೀರ್‌ ವಶಕ್ಕೆ ಪಡೆದಿರುವುದರಿಂದ ತೀವ್ರ ಬೇಸರಗೊಂಡಿದ್ದಾರೆ. ನಾನೇ ಖುದ್ದು ಹಾಜರಾಗುವುದಾಗಿ, ಯಾವುದೇ ಸಮಯದಲ್ಲಿ ಕರೆದರೂ ವಿಚಾರಣೆಗೆ ಬರುವುದಾಗಿ ತಿಳಿಸಿದ್ದರೂ ವಶಕ್ಕೆ ಪಡೆಯಲಾಯಿತು ಎಂದು ಕಾಂಗ್ರೆಸ್‌ ಹೈಕಮಾಂಡ್‌ ಮುಂದೆಯೂ ಅಸಮಾಧಾನ ಹೊರಹಾಕಿದ್ದಾರೆಂದು ತಿಳಿದುಬಂದಿದೆ.

Advertisement

ಇಷ್ಟಾದರೂ ಇದೀಗ ರೋಷನ್‌ಬೇಗ್‌ ವಿಶ್ವಾಸಮತ ಸಂದರ್ಭದಲ್ಲಿ ಸರ್ಕಾರದ ಪರ ಮತ ಹಾಕ್ತಾರಾ? ಇಲ್ಲವಾ? ಎಂಬುದು ಕಾದು ನೋಡಬೇಕಾಗಿದೆ. ಅವರು ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ, ಅವರು ಇನ್ನೂ ಶಾಸಕರೇ. ಜತೆಗೆ, ರಾಜೀನಾಮೆ ಅಂಗೀಕಾರ ತಡ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ ಮೆಟ್ಟಿಲೇರಿರುವ ಐವರು ಶಾಸಕರಲ್ಲಿ ಇವರೂ ಇದ್ದಾರೆ. ಆ ಕುರಿತ ಸುಪ್ರೀಂಕೋರ್ಟ್‌ನ ತೀರ್ಪು ಬುಧವಾರ ಬೆಳಗ್ಗೆ ಹೊರಬೀಳಲಿದೆ.

ನಾನೆಲ್ಲೋ ಓಡಿ ಹೋಗ್ತಿನಿ ಅಂದುಕೊಂಡು ವಶಕ್ಕೆ ಪಡೆದಿದ್ದರು. ಎಸ್‌ಐಟಿ ತನಿಖೆಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತೇನೆ. ಜು.19ಕ್ಕೆ ಹಾಜರಾಗಲು ಸೂಚಿಸಿದ್ದಾರೆ, ಹಾಜರಾಗುತ್ತೇನೆ. ನನ್ನ ಪರ ಎಸ್‌ಐಟಿಗೆ ಹೋಗಿದ್ದವರಿಗೆ ಜು.19ಕ್ಕೆ ಬರುವಂತೆ ಎಸ್‌ಐಟಿ ಮುಖ್ಯಸ್ಥರೇ ಪತ್ರ ಕೊಟ್ಟಿದ್ದರು. ಆದರೂ ತಪ್ಪು ಗ್ರಹಿಕೆಯಿಂದ ವಶಕ್ಕೆ ಪಡೆದಿದ್ದಾರೆ. ದೇಶದಲ್ಲಿ ಎಲ್ಲಾದರೂ ಹೋಗಬಹುದು ಎಂದು ಹೇಳಿದ್ದಾರೆ. ನಾನು ವಿದೇಶಕ್ಕೇನೂ ಹೋಗುವುದಿಲ್ಲ.
-ರೋಷನ್‌ಬೇಗ್‌, ಮಾಜಿ ಸಚಿವ

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೋಷನ್‌ ಬೇಗ್‌ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮೊದಲು ಸ್ವೀಕರ್‌ ಅವರ ಗಮನಕ್ಕೆ ತರಲಾಗಿದೆ.
-ಎಸ್‌. ಗಿರೀಶ್‌, ಡಿಸಿಪಿ, ಎಸ್‌ಐಟಿ

Advertisement

Udayavani is now on Telegram. Click here to join our channel and stay updated with the latest news.

Next