ಕಲಬುರಗಿ: ಕೂಸು ಹುಟ್ಟು ಮುಂಚಿತವಾಗಿ ಕುಲಾಯಿ ಹಾಕಬಾರದು. ಅಧಿಕಾರ ಕೊಡುವವರು ಜನರು, ಅಧಿಕಾರ ಸಿಕ್ಕಿಲ್ಲ ಅಂತಾ ಅಳಲು ಹೋಗಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನಾನು ಐದು ವರ್ಷ ಸಂಪೂರ್ಣ ಸಿಎಂ ಆಗಿ ಕೆಲಸ ಮಾಡಿದ್ದೇನೆ, ಇದು ಕೆಲವರಿಗೆ ಹೊಟ್ಟೆ ಉರಿ ಇದೆ. ಜನರು ಅಧಿಕಾರ ಕೊಟ್ರೆ ಸೇವೆ ಮಾಡಬೇಕು, ಕೊಡಲಿಲ್ಲ ಅಂದ್ರೆ ನಿಮ್ಮದೇ ಆದ ರೀತಿ ಸಮಾಜ ಸೇವೆ ಮಾಡಬೇಕೆಂದರು.
ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸಿಗ ಕಾಂಗ್ರೆಸ್ಸಿಗರು ಅಂತಾ ಜಟಾಪಟಿಯೇ ಇಲ್ಲ. ಮೊದಲಿಗರು ಇಲ್ಲ, ಹೊಸಬರೂ ಇಲ್ಲ, ವಲಸಿಗರೂ ಇಲ್ಲ. ಎಲ್ಲಾ ಕಾಂಗ್ರೆಸ್ಸಿಗರೇ ಇರೋದು. ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬುವುದೂ ಎಲ್ಲ ಸುಳ್ಳು, ಕೇವಲ ಊಹಾಪೋಹ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಂಸದ ಮುನಿಯಪ್ಪರಿಗೆ ನಾನು ಏಕವಚನದಲ್ಲಿ ಮಾತನಾಡಿಲ್ಲ, ಅವರೂ ಏಕವಚನದಲ್ಲಿ ಮಾತನಾಡಿಲ್ಲ. ನಾವೆಲ್ಲರೂ ಫ್ರೆಂಡ್ಸ್. ಭಿನ್ನಾಭಿಪ್ರಾಯಗಳು ಇರ್ತಾವೆ. ಹಾಗಂತ ವೈರಿಗಳು, ದ್ವೇಷಿಗಳು ಅಲ್ಲ. ಕಾಂಗ್ರೆಸ್ ಯಾರ ಹಿಡಿತದಲ್ಲೂ ಇಲ್ಲ. ಪಕ್ಷದಲ್ಲಿ ಎಲ್ಲ ನಾಯಕರಗಳ ಪ್ರಭಾವ ಇದೆ. ಕಾರ್ಯಕರ್ತರ ಪ್ರಭಾವವೂ ಇದೆ ಎಂದರು.
ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಆಗಿ ಐವತ್ತು ದಿನಗಳಾದರೂ ಕೇಂದ್ರ ಸರ್ಕಾರ ಒಂದು ರೂಪಾಯಿ ಹಣ ನೀಡಿಲ್ಲ. ಸಿಎಂ ಯಡಿಯೂರಪ್ಪ ನಾಳೆ ಕೊಡ್ತಾರೆ, ನಾಳೆ ಕೊಡ್ತಾರೆ ಅಂತಾ ಹೇಳ್ತಾನೇ ಇದ್ದಾರೆ. ಬಿಜೆಪಿಯವರು, ಬಿಎಸ್‌ವೈ, ರಾಜ್ಯದ 25 ಸಂಸದರು ಯಾರೂ ಸಹ ಪ್ರಧಾನಿಗೆ ಒತ್ತಾಯ ಮಾಡಿಲ್ಲ ಎಂದರು.
ಬಿಜೆಪಿಯವರು 105 ಜನ ಇಟ್ಟುಕೊಂಡು ಆಡಳಿತ ಮಾಡುತ್ತಿದ್ದಾರೆ. ಅವರಿಗೆ ಬಹುಮತ ಇಲ್ಲ. ಉಪಚುನಾವಣೆ ಆದ ಮೇಲೆ ನಾವು ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿ ಸರ್ಕಾರ ಪತನ ಆಗುತ್ತೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ಹದಿನೈದು ಕ್ಷೇತ್ರಗಳಲ್ಲಿ ಉಪ ಚುನಾವಣೆ ವಿಚಾರದಲ್ಲಿ ಬಿಜೆಪಿ ಸರ್ಕಾರದ ಅಣತಿಯಂತೆ ಚುನಾವಣೆ ಆಯೋಗ ನಡೆದುಕೊಳ್ಳುತ್ತಿದೆ. ಚುನಾವಣಾ ಆಯೋಗದವರು ಸ್ವಯಂಪ್ರೇರಿತವಾಗಿ ವಾದ ಮಾಡಿದರು. ನಂತರ ಮತ್ತೆ ದಿನಾಂಕ ಘೋಷಣೆ ಮಾಡಿದರು. ಅನರ್ಹ ಶಾಸಕರಿಗೆ ಅನುಕೂಲ ಆಗಲಿ ಅಂತಾ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.