ಹುಬ್ಬಳ್ಳಿ: ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದು, ಇದು ರಾಜ್ಯದ ರಾಜಕೀಯ ಬದಲಾವಣೆ ಹಾಗೂ ಧ್ರುವೀಕರಣಕ್ಕೆ ದಿಕ್ಸೂಚಿಯಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಭವಿಷ್ಯ ನುಡಿದರು.
ಇಲ್ಲಿನ ಗೋಪನಕೊಪ್ಪ ಜೆ.ಕೆ. ಸ್ಕೂಲ್ ರಸ್ತೆಯ ಸಿದ್ಧವೀರಸ್ವಾಮಿ ಮಠದಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಬಿಜೆಪಿ ಕೇಂದ್ರ ವಿಧಾನಸಭಾ ಕ್ಷೇತ್ರದ 8ನೇ ಮಾಸಿಕ ಸಭೆ ಹಾಗೂ ಪದಾಧಿಕಾರಿಗಳ ಅಧಿಕಾರ ಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ, 24/7 ನೀರು ಪೂರೈಕೆ ಯೋಜನೆ, ವಿಮಾನ ನಿಲ್ದಾಣ ಮೇಲ್ದರ್ಜೆ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿತ್ತು. ಆದರೆ ಸಿದ್ದರಾಮಯ್ಯ ಸರಕಾರ ಅವಳಿ ನಗರದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳದೆ ನಿರ್ಲಕ್ಷ ತೋರುತ್ತಿದೆ.
ಪಾಲಿಕೆ ನೌಕರರಿಗೆ ಪಿಂಚಣಿ ಹಣ ಬಿಡುಗಡೆ ಮಾಡುತ್ತಿಲ್ಲ. ಇರುವ ಯೋಜನೆಗಳನ್ನೂ ಸಮರ್ಪಕ ಕೈಗೆತ್ತಿಕೊಳ್ಳುತ್ತಿಲ್ಲ. ಇದನ್ನೆಲ್ಲ ಖಂಡಿಸಿ ಪಕ್ಷ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದರು. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು, ಪುರುಷರು ಸೇರಿದಂತೆ 20ಕ್ಕೂ ಅಧಿಕ ಜನರು ಪಕ್ಷಕ್ಕೆ ಸೇರ್ಪಡೆಗೊಂಡರು.
ಅವರಿಗೆ ಶೆಟ್ಟರ ಹಾಗೂ ಪಕ್ಷದ ಮಹಿಳಾ ಮುಖಂಡರು ಪಕ್ಷದ ಶಾಲು ಹೊದಿಸಿ, ಗುಲಾಬಿ ಹೂ ಕೊಟ್ಟು ಬರಮಾಡಿಕೊಂಡರು. ಕಲ್ಲನಗೌಡ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ನಾಗೇಶ ಕಲಬುರ್ಗಿ, ಲಕ್ಷ್ಮಿಬಾಯಿ ಉಪ್ಪಾರ, ಸ್ಮಿತಾ ಜಾಧವ, ಮಲ್ಲಿಕಾರ್ಜುನ ಸಾವಕಾರ, ತಿಪ್ಪಣ್ಣ ಮಜ್ಜಗಿ, ರಾಮಚಂದ್ರ ಜಾಧವ,
ವೀರೇಶ ಸಂಗಳದ, ಬೀರಪ್ಪ ಖಂಡೇಕಾರ, ಕಲ್ಲಪ್ಪ ಕಣಗೊಂಡ, ಉಮೇಶ ಕೌಜಗೇರಿ, ಲಕ್ಷ್ಮಣ ಉಪ್ಪಾರ, ಸಂತೋಷ ಚವ್ಹಾಣ, ವಸಂತ ನಾಡಜೋಶಿ, ಮೇನಕಾ ಹುರಳಿ, ಲೀನಾ ಮಿಸ್ಕಿನ ಮೊದಲಾದವರಿದ್ದರು. ಈಶ್ವರಗೌಡ ಪಾಟೀಲ ಸ್ವಾಗತಿಸಿದರು. ಶಿವಣ್ಣಾ ಹಳಾಳ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಾ ಗಂಡಗಾಳೇಕರ ನಿರೂಪಿಸಿದರು.