Advertisement

ರಾಜಕೀಯ ಹಾದಿ ಸುಲಭವಲ್ಲ:  ರಜನಿ ಸಕಾಲಿಕ ನಿರ್ಧಾರ 

08:13 AM Jan 02, 2018 | Team Udayavani |

ಸುಮಾರು ಎರಡು ದಶಕಗಳಿಂದ ತನ್ನ ರಾಜಕೀಯ ಪ್ರವೇಶದ ಕುರಿತು ಕೇಳಿ ಬರುತ್ತಿದ್ದ ಊಹಾಪೋಹಗಳಿಗೆ ಮೇರು ನಟ ರಜನೀಕಾಂತ್‌ ವರ್ಷದ ಕಡೆಯ ದಿನ ತೆರೆಯೆಳೆದಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಿಗೂ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ ರಜನಿ. ಸಹಜವಾಗಿಯೇ ರಜನಿಯ ರಾಜಕೀಯ ಪ್ರವೇಶ ನಾನಾ ರೀತಿಯ ವಿಶ್ಲೇಷಣೆಗಳಿಗೂ, ಚರ್ಚೆಗಳಿಗೂ ಕಾರಣವಾಗಿದೆ. ಮುಖ್ಯವಾಗಿ ರಜನೀಕಾಂತ್‌ ರಾಜಕೀಯ ಪ್ರವೇಶಿಸಲು ಆಯ್ದುಕೊಂಡ ಸಮಯ ಅತ್ಯಂತ ಪಕ್ವವಾಗಿದೆ ಎನ್ನಲಾಗುತ್ತಿದೆ. ಇದು ನಿಜವೂ ಹೌದು. ಜಯಲಲಿತಾ ನಿಧನದ ಬಳಿಕ ತಮಿಳುನಾಡಿನಲ್ಲಿ ದೊಡ್ಡ ನಿರ್ವಾತವೊಂದು ನಿರ್ಮಾಣವಾಗಿದೆ. ಬಲಿಷ್ಠ ನಾಯಕರಿಲ್ಲದೆ ರಾಜ್ಯ ಕಳೆಗುಂದಿದೆ. ಎಐಎಡಿಎಂಕೆ ಹಲವು ಬಣಗಳಾಗಿ ವಿಭಜನೆಯಾಗಿದೆ. ಸರಕಾರ ಐದು ವರ್ಷ ಅಧಿಕಾರದಲ್ಲಿ ಉಳಿಯಲಿದೆ ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ. ವಿಪಕ್ಷವಾದ ಡಿಎಂಕೆಯ ಪರಮೋಚ್ಚ ನಾಯಕ ಕರುಣಾನಿಧಿಯವರೂ ಹಿಂದಿನ ವರ್ಚಸ್ಸು ಉಳಿಸಿಕೊಂಡಿಲ್ಲ. ವಯಸ್ಸು ಅವರನ್ನು ಮೂಲೆಗುಂಪು ಮಾಡಿದೆ. ಪ್ರಸ್ತುತ ಅವರ ಪುತ್ರ ಸ್ಟಾಲಿನ್‌ ಪಕ್ಷದ ಚುಕ್ಕಾಣಿ ಹಿಡಿದಿದ್ದರೂ ಅವರಿಗೆ ತಂದೆಗಿರುವ ರಾಜ್ಯವ್ಯಾಪಿ ವರ್ಚಸ್ಸು ಇಲ್ಲ. ಅಲ್ಲದೆ ಡಿಎಂಕೆಯಲ್ಲೂ ಒಳ ಜಗಳವಿದೆ. ಹೀಗೆ ಎರಡು ದ್ರಾವಿಡ ಪಕ್ಷಗಳು ಬಲಹೀನವಾಗಿರುವ ಸಂದರ್ಭವನ್ನು ನೋಡಿಕೊಂಡು ರಾಜಕೀಯ ಪ್ರವೇಶಿಸಿರುವುದು ಬುದ್ಧಿವಂತಿಕೆಯ ನಡೆ. 

Advertisement

ತಮಿಳುನಾಡಿನಲ್ಲಿ ಸಿನೆಮಾ ಕ್ಷೇತ್ರಕ್ಕೂ ರಾಜಕೀಯಕ್ಕೂ ಲಾಗಾಯ್ತಿನಿಂದ ಹತ್ತಿರದ ನಂಟಿದೆ. ಡಿಎಂಕೆ ಸ್ಥಾಪಕ ಸಿ.ಎನ್‌.ಅಣ್ಣಾದೊರೆಯಿಂದ ಹಿಡಿದು ಇತ್ತಿಚೆಗಿನ ವಿಶಾಲ್‌ ತನಕ ಹಲವು ಸಿನೇಮಾ ಮಂದಿ ರಾಜಕೀಯದಲ್ಲಿ ಕೈಯಾಡಿಸಿದ್ದಾರೆ. ಈ ಪೈಕಿ ಅತ್ಯಂತ ಯಶಸ್ವಿಯಾದವರು ಎಂ. ಜಿ. ರಾಮಚಂದ್ರನ್‌ ಮತ್ತು ಜಯಲಲಿತಾ. ಕರುಣಾನಿಧಿಯವರನ್ನೂ ಈ ಸಾಲಿಗೆ ಸೇರಿಸಿಕೊಳ್ಳಬಹುದು. ಕ್ಯಾಪ್ಟನ್‌ ವಿಜಯಕಾಂತ್‌ ಒಮ್ಮೆ ಶೇ. 10 ಮತ ಬಾಚಿಕೊಂಡು ಭರವಸೆ ಮೂಡಿಸಿದರೂ ಸದ್ಯಕ್ಕೆ ಕಳೆಗುಂದಿದ್ದಾರೆ. ಯುವನಟ ವಿಶಾಲ್‌ ಇತ್ತೀಚೆಗೆ ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನ ಮಾಡಿದ್ದರು. ಅಂತೆಯೇ ವಿಜಯ್‌ ಎಂಬ ಯುವನಟನೂ ತನ್ನ ರಾಜಕೀಯ ಹಂಬಲವನ್ನು ಗುಟ್ಟಾಗಿಟ್ಟುಕೊಂಡಿಲ್ಲ. ಕಮಲಹಾಸನ್‌ ಈಗಾಗಲೇ ರಾಜಕೀಯ ಪ್ರವೇಶಿಸಿದ್ದರೂ ಅವರ ನಡೆಗಳು ಮಾತ್ರ ಸ್ಪಷ್ಟವಾಗಿಲ್ಲ. ಈ ಮಟ್ಟಿಗೆ ಹೇಳುವುದಾದರೆ ರಜನಿಯೇ ಸ್ಪಷ್ಟವಾದ ಹೆಜ್ಜೆಯಿಟ್ಟಿದ್ದಾರೆ. ಅವರ ಅಧ್ಯಾತ್ಮಿಕ ರಾಜಕೀಯ ಎಂಬ ಪರಿಕಲ್ಪನೆ ಈಗಾಗಲೇ ಸಾಕಷ್ಟು 

ಚರ್ಚೆಗೆ ಕಾರಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ನಾಸ್ತಿಕವಾದಿಗಳನ್ನೇ ರಾಜಕೀಯದ ಮುಂಚೂಣಿಯಲ್ಲಿ ಕಂಡಿದ್ದ ತಮಿಳುನಾಡು ಇದೀಗ ರಜನೀಕಾಂತ್‌ರ ಆಧ್ಯಾತ್ಮಿಕ ಮೌಲ್ಯದ ರಾಜಕೀಯದ ಬಗ್ಗೆ ಕುತೂಹಲ ತಾಳಿದೆ.
ರಜನೀಕಾಂತ್‌ಗೆ ರಾಜಕೀಯದ ಅಗ್ನಿಪರೀಕ್ಷೆ ಎದುರಾಗಲು ಇನ್ನೂ ಮೂರು ವರ್ಷವಿದೆ. ಆದರೆ ಇದಕ್ಕೂ ಮೊದಲು ಅವರನ್ನು ಕರ್ನಾಟಕದ ವಿಧಾನಸಭೆ ಚುನಾವಣೆಗೆ ಕರೆತರಲು ಬಿಜೆಪಿ ಪ್ರಯತ್ನ ನಿರತವಾಗಿದೆ. ತಮಿಳುನಾಡಿನಂತೆ ಕರ್ನಾಟಕದಲ್ಲೂ ರಜನಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ.ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೆಳೆಯುವ ಸಾಮರ್ಥ್ಯವಿರುವ ರಜನೀಕಾಂತ್‌ ಪ್ರಚಾರಕ್ಕೆ ಬಂದರೆ ಲಾಭವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಒಂದು ಸಂದರ್ಭದಲ್ಲಿ ರಜನೀಕಾಂತ್‌ ಕೂಡ ಬಿಜೆಪಿಯತ್ತ ಒಲವು ಬೆಳೆಸಿಕೊಂಡಿದ್ದರು. ಪ್ರಧಾನಿ ಮೋದಿಯ ಕಾರ್ಯಶೈಲಿಯನ್ನು ಅವರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ರಜನೀಕಾಂತ್‌ ಬಂದರೂ ಬರಬಹುದು ಎನ್ನಲಾಗುತ್ತಿದೆ. ಹಾಗೊಂದು ವೇಳೆ ಬಂದರೆ ಅವರ ರಾಜಕೀಯ ವರ್ಚಸ್ಸಿನ ಪರೀಕ್ಷೆಗೂ ತವರು ರಾಜ್ಯವಾದ ಕರ್ನಾಟಕವೇ ಮೊದಲ ವೇದಿಕೆಯಾಗಬಹುದು.

ತಮಿಳುನಾಡಿನಾದ್ಯಂತ ರಜನೀಕಾಂತ್‌ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸದ್ಯಕ್ಕೆ ಈ ಅಭಿಮಾನಿಗಳೇ ರಾಜಕೀಯ ಕಾರ್ಯಕರ್ತರರಾಗಿಯೂ ದುಡಿಯಲು ತಯಾರಾಗಿದ್ದಾರೆ. ಅಂತೆಯೇ ಪ್ರಭಾವ, ವರ್ಚಸ್ಸು, ಉನ್ನತ ನಾಯಕರ ಜತೆಗಿನ ಸಂಪರ್ಕ ಎಲ್ಲವೂ ಇದೆ. ಆದರೆ ಇವೆಲ್ಲ ರಾಜಕೀಯದ ಆರಂಭದಲ್ಲಿ ಪ್ರಯೋಜನಕ್ಕೆ ಬಂದೀತೇ ಹೊರತು ಮುನ್ನಡೆಯಲು ಅಲ್ಲ. ಹೀಗಾಗಿಯೇ ರಜನಿ ಪಾಲಿಗೆ ರಾಜಕೀಯದ ಹಾದಿ ಎಣಿಸದಷ್ಟು ಸುಲಭ ಅಲ್ಲ ಎನ್ನುತ್ತಿರುವುದು. ಮೊದಲಾಗಿ ರಜನಿ ರಾಜಕೀಯಕ್ಕೆ ಯಾವುದೇ ಚಳವಳಿಯ ಹಿನ್ನೆಲೆಯಿಲ್ಲ.

ಚಳವಳಿ ಅಥವ ಹೋರಾಟದಿಂದ ಹುಟ್ಟದ ರಾಜಕೀಯ ಪಕ್ಷ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎನ್ನುವುದಕ್ಕೆ ಧಾರಾಳ ಉದಾಹರಣೆಗಳಿವೆ. ಅಲ್ಲದೆ ಎಂಜಿಆರ್‌, ಜಯಲಲಿತಾ ಅಥವಾ ಕರುಣಾನಿಧಿಯಾಗಲಿ ರಾಜಕೀಯದಲ್ಲಿ ಉತ್ತುಂಗಕ್ಕೆ ಏರಲು ಬಹಳಷ್ಟು ಹೋರಾಟ ಮಾಡಿದ್ದಾರೆ. ತಾರಾ ವರ್ಚಸ್ಸು ಆರಂಭದಲ್ಲಷ್ಟೇ ಅವರಿಗೊಂದು ಬ್ರೇಕ್‌ ಒದಗಿಸಲು ನೆರವಾಗಿತ್ತಷ್ಟೆ. ಉಳಿದಂತೆ ರಾಜಕೀಯದಲ್ಲಿ ಅವರು ತಮ್ಮ ಹಾದಿಯನ್ನು ಸವೆಸಿದ್ದು ಹೋರಾಟದಿಂದಲೇ. ಈ ಅಂಶವನ್ನು ನೆನಪಿನಲ್ಲಿಟ್ಟುಕೊಂಡು ಮುನ್ನಡೆದರೆ ರಜನೀಕಾಂತ್‌ ನಿಜವಾದ ತಲೈವ ಆಗಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next