Advertisement

ಬಡ ಜನರ ಸಂಕಷ್ಟಕ್ಕೆ ಸ್ಪಂದಿಸಿದ ರಾಜಕೀಯ ಪಕ್ಷಗಳು

05:05 PM May 01, 2020 | sudhir |

ರಾಮನಗರ: ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಜಿಲ್ಲಾದ್ಯಂತ ಬಡ ಕುಟುಂಬಗಳು ಮತ್ತು ನಿರಾಶ್ರಿತರಿಗೆ ತಮ್ಮದೇ ರೀತಿಯಲ್ಲಿ ನೆರವು ನೀಡಿವೆ. ಸಿದ್ಧಪಡಿಸಿದ ಆಹಾರವನ್ನು ಪೂರೈಸುವಲ್ಲಿ, ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳು ತೊಡಗಿಸಿ ಕೊಂಡಿವೆ. ರೈತರಿಂದ ನೇರವಾಗಿ ಖರೀದಿ ಮಾಡಿ ತರಕಾರಿ ಮತ್ತು ಹಣ್ಣು ವಿತರಣೆಯನ್ನು ಕಾಂಗ್ರೆಸ್‌ ಜಾರಿಯಲ್ಲಿಟ್ಟಿದೆ. ಅಗತ್ಯವಿರು ವವರಿಗೆ ದಿನನಿತ್ಯ ಬಳಸುವ ಔಷಧಿಯನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಡೆಸುತ್ತಿದ್ದಾರೆ.

Advertisement

ಜೆಡಿಎಸ್‌ನಿಂದ ಅನ್ನದಾಸೋಹ: ಎಚ್‌ಡಿಕೆ ಅನ್ನದಾಸೋಹ ಎಂಬ ಶೀರ್ಷಿಕೆಯಡಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ
ಅವರ ಅಣತಿಯಲ್ಲಿ ಜೆಡಿಎಸ್‌ ಮುಖಂಡ ಪ್ರಕಾಶ್‌ ಮತ್ತು ತಂಡ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಮೂರು ವಾರ ಗಳಿಂದ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ನಿರಾಶ್ರಿತರು, ನಿರ್ಗತಿಕರು, ವಲಸೆ ಕಾರ್ಮಿಕರು ಮತ್ತು ಬಡ ಕುಟುಂಬಗಳಿಗೆ ಸಿದ್ದಪಡಿಸಿದ ಆಹಾರ ಪೂರೈಸುತ್ತಿದ್ದಾರೆ. ಇದೀಗ ಎರಡೂ ಕ್ಷೇತ್ರಗಳ ಪ್ರತಿ ಕುಟುಂಬಕ್ಕೂ ಅಕ್ಕಿ ವಿರರಣೆ ಕಾರ್ಯ ಆರಂಭವಾಗಿದೆ.

ಕಾಂಗ್ರೆಸ್‌ ಟಾಸ್ಕ್ ಫೋರ್ಸ್‌-ತರಕಾರಿ, ಅಕ್ಕಿ ವಿತರಣೆ: ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಾಸ್ಕ್ ಫೋರ್ಸ್‌ ರಚನೆಯಾಗಿದ್ದು, ಕಳೆದ ಮೂರು ವಾರಗಳಿಂದ ರೈತರಿಂದ ನೇರವಾಗಿ ತರಕಾರಿ, ಹಣ್ಣು ಖರೀದಿ ಮಾಡಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಾರ್ಯ ಕರ್ತರು ವಿತರಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್‌ ಅವರ ಮಾರ್ಗ ದರ್ಶನದಲ್ಲಿ ಜಿಲ್ಲೆಯ ಟಾಸ್ಕ್ ಫೋರ್ಸ್‌ ಅಧ್ಯಕ್ಷರಾಗಿ ಜಿಲ್ಲಾ ಪಂಚಯ್ತಿಯ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಕಾರ್ಯನಿರ್ವಹಿಸುತ್ತಿದ್ದು, ತಾವೇ ಖುದ್ದು ರೈತರ ಬಳಿ ತೆರಳಿ, ಇಲ್ಲಿಯವರೆಗೂ ಒಟ್ಟು ಸುಮಾರು 10 ಸಾವಿರ ಟನ್‌ ತರಕಾರಿ ಖರೀದಿಸಿ ವಿತರಿಸಿದ್ದಾರೆ. ಅಗತ್ಯವಿರುವ ಕುಟುಂಬಗಳಿಗೆ ಅಕ್ಕಿ ಮತ್ತು ರಾಗಿಯನ್ನು ವಿತರಿಸಿದ್ದಾರೆ.

ಔಷಧಿ ವಿತರಿಸಿ ಗಮನ ಸೆಳೆದ ಬಿಜೆಪಿ:
ಲಾಕ್‌ಡೌನ್‌ ಜಾರಿಯಾದಾಗಿನಿಂದಲೂ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಿರಾಶ್ರಿತರು,
ನಿರ್ಗತಿಕರು ಮತ್ತು ಬಡ ಕುಟುಂಬಗಳಿಗೆ ದಿನದ ಮೂರು ಹೊತ್ತು ಉಪಹಾರ, ಊಟ ವಿತರಿಸುತ್ತಿದ್ದಾರೆ. ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ
ವರದರಾಜೇಗೌಡ ಮತ್ತು ತಂಡ ಜಿಲ್ಲೆಯಲ್ಲಿ ಅಗತ್ಯವಿರುವವರಿಗೆ ದಿನನಿತ್ಯ ಬಳಸುವ ಔಷಧವನ್ನು ಉಚಿತವಾಗಿ ಕೊಡುತ್ತಿದ್ದಾರೆ. ಜೊತೆಗೆ ನಿರಂತರವಾಗಿ ತರಕಾರಿ ಮತ್ತು ಹಣ್ಣುಗಳನ್ನು ವಿತರಿಸುತ್ತಿದ್ದಾರೆ. ಸದ್ಯದಲ್ಲೇ ಎದುರಾಗುವ ಸ್ಥಳೀಯ ಸಂಸ್ಥೆಗಳ ಚುನಾ ವಣೆಗಳ ಮೇಲೆ ಕಣ್ಣಿಟ್ಟು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂಬ ಆರೋಪಗಳನ್ನು ಕಡೆಗಣಿಸಿ ಮೂರು ಪಕ್ಷಗಳ ಮುಖಂಡರು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next