Advertisement
ಕೊತ್ತೂರು ಮಂಜುನಾಥ್‌ರ ಬೆಂಬಲ ಪಡೆದು ಸ್ಪರ್ಧಿಸಿದರೆ ಗೆಲುವು ಸುಲಭ ಎಂಬ ಕಾರಣಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅರ್ಧ ಡಜನ್‌ಗೂ ಹೆಚ್ಚು ಅಭ್ಯರ್ಥಿ ಗಳು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಇಲ್ಲಿ ಸ್ವಂತ ಬಲದಿಂದ ಗೆಲುವಿನ ಹಂತ ತಲುಪುವುದು ಕಷ್ಟ ಎಂಬ ಕಾರಣಕ್ಕೆ ಜೆಡಿಎಸ್, ಕಾಂಗ್ರೆಸ್ ವಿದ್ಯಮಾನಗಳತ್ತ ಚಿತ್ತ ನೆಟ್ಟಿದೆ.
Related Articles
Advertisement
ಸದ್ದಾಂ ಸಾಂಭಯ್ಯ ಕ್ಷೇತ್ರ ಸುತ್ತಾಡಿ ಹೋಗಿದ್ದಾರೆ. ಇದೀಗ ಮದ್ದೂರಪ್ಪ ಕ್ಷೇತ್ರದ ನಾಯಕರನ್ನು ಪರಿಚಯ ಮಾಡಿಕೊಂಡು ಸಂಚರಿಸುತ್ತಿ ದ್ದಾರೆ. ಒಂದೆಡೆ ಕೊತ್ತೂರು ಮಂಜುನಾಥ್ ಮತ್ತೇ ನಾನೇ ಅಭ್ಯರ್ಥಿ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೊತ್ತೂರು ಮಂಜುನಾಥ್ ಸ್ಪರ್ಧಿಸದಿದ್ದರೂ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವುದು ವಾಸ್ತವ.
ಈ ಕಾರಣದಿಂದಲೇ ಒಂದು ವೇಳೆ ಕೊತ್ತೂರು ಸ್ಪರ್ಧಿಸದಿದ್ದರೆ ನಾವಿದ್ದೇವೆ ಎಂದು ಅರ್ಧ ಡಜನ್‌ಗೂ ಹೆಚ್ಚು ಮಂದಿ ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ. ಇವರಲ್ಲಿ ಪ್ರಮುಖರಾಗಿರುವರು ಆನೇಕಲ್ ಮೂಲದ ಮದ್ದೂರಪ್ಪ, ಮತ್ತಷ್ಟು ಮಂದಿ ಮುಳಬಾಗಿಲು ಕ್ಷೇತ್ರದ ಮೇಲೆ ಕಣ್ಣಿಟ್ಟು ಹೈಕಮಾಂಡ್ ಮುಖಂಡರ ಒಪ್ಪಿಗೆಯಿಂದ ಕೊತ್ತೂರು ಮಂಜುನಾಥ್ ಬೆಂಬಲದಿಂದ ಸ್ಪರ್ಧಿಸಲು ತೆರೆ ಮರೆಯ ಪ್ರಯತ್ನ ಮಾಡುತ್ತಿದ್ದಾರೆ. ಕೊತ್ತೂರು ಮಂಜುನಾಥ್ ಅಲ್ಲದಿದ್ದರೆ ಯಾರು ಕಾಂಗ್ರೆಸ್ ಅಭ್ಯರ್ಥಿ ಎನ್ನುವುದೇ ಕುತೂಹಲ.
ಜೆಡಿಎಸ್‌ನಿಂದ ಹಿಂದಿನ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಸಮೃದ್ಧಿ ಮಂಜುನಾಥ್ ಮತ್ತೇ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದಾರೆ. ಸೋತಾಗಿನಿಂದಲೂ ಕ್ಷೇತ್ರದಲ್ಲೇ ಇದ್ದು ಜನರ ಮನಸು ಗೆಲ್ಲಲು ಸಮೃದ್ಧಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಆಲಂಗೂರು ಶಿವಣ್ಣ ತಂಡ ಇವರಿಂದ ದೂರ ಕಾಪಾಡಿಕೊಳ್ಳುತ್ತಿರುವುದು ಕೊಂಚ ಹಿನ್ನಡೆಯಾಗಿದೆ. ಆದರೂ, ಸಮೃದ್ಧಿ ಕ್ಷೇತ್ರದಾದ್ಯಂತ ಸಂಚರಿಸಿ ತಮ್ಮದೇ ಅಭಿಮಾನಿ ಪಡೆ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಡಳಿತಾರೂಢ ಬಿಜೆಪಿಗೆ ಇಲ್ಲಿ ಬೇರು ಮಟ್ಟದ ಬಲ ಇಲ್ಲದೇ ಇರುವುದರಿಂದ ಪಕ್ಷದ ಅಭ್ಯರ್ಥಿಯಾಗಲು ಅಂತ ಪೈಪೋಟಿ ಕಾಣಿಸುತ್ತಿಲ್ಲ. ಸಂಸದ ಮುನಿಸ್ವಾಮಿ ಹಿಂದೂ ಸಮಾಜೋತ್ಸವಗಳ ಮೂಲಕ ವಿವಾದಾಸ್ಪದ ಹೇಳಿಕೆ ನೀಡುವು ಮೂಲಕ ಹಿಂದೂ ಮತದಾರರ ಮನಗೆಲ್ಲುವ ಪ್ರಯತ್ನ ಮಾಡಿದ್ದರು. ಆದರೆ, ಅದು ನಿರೀಕ್ಷಿತ ಮಟ್ಟದಲ್ಲಿ ಫಲ ಕೊಟ್ಟಂತೆ ಕಾಣುತ್ತಿಲ್ಲ. ಕೆಲವು ದಿನ ಸಂಸದ ಮುನಿಸ್ವಾಮಿ ಪತ್ನಿ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ವದಂತಿ ಹರಡಿತ್ತು. ಆದರೆ, ಸದ್ಯಕ್ಕೆ ಅಂತ ಪ್ರಯತ್ನಗಳು ಕಾಣಿಸುತ್ತಿಲ್ಲ.
ಬಿಜೆಪಿಯಿಂದ ಯಾರಾದರೂ ಅಭ್ಯರ್ಥಿಯಾಗಲೇ ಬೇಕು. ಆ ಕಾರಣಕ್ಕಾಗಿ ಶೀಗೆಹಳ್ಳಿ ಸುಂದರ್ ಸಂಸದ ಮುನಿಸ್ವಾಮಿ ಹಿಂದೆ ಸುತ್ತಾಡುತ್ತಾ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದಾರೆ. ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ. ಕೊತ್ತೂರು ಮಂಜುನಾಥ್ ಸಂಬಂಧಿಕರು ಕೆಲವರು ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಜಾತಿ ಪ್ರಮಾಣ ಪತ್ರ ಕೈಕೊಟ್ಟಿದ್ದರಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ವಿರುದ್ಧ ಮುನಿಸಿಕೊಂಡಿರುವ ಸ್ವಾಭಿಮಾನಿ ಜೆಡಿಎಸ್ ಮುಖಂಡ ಆಲಂಗೂರು ಶ್ರೀನಿವಾಸ್ ಮತ್ತು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಬೆಂಬಲಿಗರು ಒಗ್ಗೂಡಿ ಹಿಂದೊಮ್ಮೆ ಸ್ಪರ್ಧಿಸಿ ಹೋಗಿದ್ದ ಆದಿನಾರಾಯಣರನ್ನು ಅಭ್ಯರ್ಥಿಯಾಗಿಸುವ ಪ್ರಯತ್ನ ನಡೆಸುತ್ತಿದೆಯೆಂದು ಹೇಳಲಾಗುತ್ತಿದೆ.
ಇದು ಇನ್ನೂ ಖಚಿತಪಟ್ಟಿಲ್ಲ. ಆಮ್ ಆದ್ಮಿ ಪಕ್ಷದಿಂದ ದಲಿತ ಹೋರಾಟಗಾರರಾದ ಕೀಲು ಹೊಳಲಿ ಸತೀಶ್ ಮತ್ತು ಸಂಗಸಂದ್ರ ವಿಜಯ ಕುಮಾರ್ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದಾರೆ. ಇವರಿಬ್ಬರಲ್ಲಿ ಯಾರೇ ಅಭ್ಯರ್ಥಿಯಾದರೂ ಕಾರ್ಮಿಕ ವರ್ಗ, ಅಲ್ಪಸಂಖ್ಯಾತರು ಹಾಗೂ ದಲಿತ ವರ್ಗದ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಒಟ್ಟಾರೆ ಮುಳಬಾಗಿಲು ಕ್ಷೇತ್ರದಿಂದ ಹಿಂದೆ ಸೋತಿದ್ದ ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ ಮತ್ತು ಕೊತ್ತೂರು ಮಂಜುನಾಥ್ ಬೆಂಬಲದಿಂದ ಆಗಲಿರುವ ಕಾಂಗ್ರೆಸ್ ಅಭ್ಯರ್ಥಿ ನಡುವೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನಡೆಯುವ ಸೂಚನೆಗಳು ಸಿಗುತ್ತಿವೆ.
ಮುಳಬಾಗಿಲು ಕ್ಷೇತ್ರದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿ ರುವುದು ಕೊತ್ತೂರು ಮಂಜುನಾಥ್ ಮತ್ತು ನಾನು ಮಾತ್ರ. ಚುನಾವಣೆ ಎಂದು ಬಂದಾಗ ಯಾರೇ ಅಭ್ಯರ್ಥಿಯಾದರೂ ಎದುರಿಸಲು ಸಿದ್ಧ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಬೆಂಬಲದಿಂದ ಗೆಲ್ಲುವ ವಿಶ್ವಾಸವಿದೆ. ● ಸಮೃದ್ಧಿ ಮಂಜುನಾಥ್.(ಜೆಡಿಎಸ್)
ಕಳೆದ ಎರಡು ವರ್ಷ ಗಳಿಂದಲೂ ಮುಳ ಬಾಗಿಲು ಕ್ಷೇತ್ರದಲ್ಲಿ ಪ್ರಚಾರ ಬಯಸದೆ ಸಮಾಜ ಸೇವೆಮಾಡುತ್ತಿದ್ದು, ಬಹುತೇಕ ಮುಖಂಡರನ್ನು ಸಂಪರ್ಕಿಸಿ ಒಲವು ಗಿಟ್ಟಿಸಿಕೊಂಡಿದ್ದೇನೆ. ಕೊತ್ತೂರು ಮಂಜುನಾಥ್ ಸಹಕಾರ ನೀಡಿದರೆ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಸಿದ್ಧ. ● ಬಿ.ಮದ್ದೂರಪ್ಪ, (ಕಾಂಗ್ರೆಸ್ ಆಕಾಂಕ್ಷಿ)
ಮುಳ ಬಾಗಿಲು ಕ್ಷೇತ್ರದಲ್ಲಿ ಕೊತ್ತೂರು ಮಂಜು ನಾಥ್, ಸಮೃದ್ಧಿ ಮಂಜುನಾಥ್ ಮಾತ್ರ ಬಲಿಷ್ಠವಾಗಿಲ್ಲ, ಬಿಜೆಪಿ ಕೂಡ ಪ್ರಬಲವಾಗಿದೆ. ದುಡ್ಡಿನ ಚುನಾವಣೆಗೆ ಪ್ರಜ್ಞಾವಂತರು ವಿದ್ಯಾವಂತರು ಯುವಕರು ಬೆಲೆ ಕೊಡಲ್ಲ, ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗೆ ಮತದಾರರು ಬಿಜೆಪಿ ಬೆಂಬಲಿಸುತ್ತಾರೆ. ● ಸೀಗೇಹಳ್ಳಿ ಸುಂದರ್ (ಬಿಜೆಪಿ)
ಮುಳ ಬಾಗಿಲು ಕ್ಷೇತ್ರದಿಂದ ನಾನೇ ಸ್ಪರ್ಧಿಸುವೆ, ಸಾಧ್ಯವಾ ಗದಿದ್ದರೆ ಸ್ಥಳೀಯರೊಬ್ಬರಿಗೆ ಬೆಂಬಲ ವ್ಯಕ್ತಪಡಿಸುವೆ. ● ಕೊತ್ತೂರು ಮಂಜುನಾಥ್. (ಕಾಂಗ್ರೆಸ್)
ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲವೆಂಬ ಜೆಡಿಎಸ್ ಆರೋಪಗಳಲ್ಲಿ ಹುರುಳಿಲ್ಲ. ಎಂತದ್ದೇ ವೇದಿಕೆಯಲ್ಲಿ ಈ ಕುರಿತು ಬಹಿರಂಗ ಚರ್ಚೆಗೆ ಸಿದ್ಧವಿದ್ದೇನೆ. ● ಎಚ್.ನಾಗೇಶ್, ಶಾಸಕರು.
-ಕೆ.ಎಸ್.ಗಣೇಶ್