Advertisement

ಮತಕ್ಕಾಗಿ ಮುಗಿಬಿದ್ದ ರಾಜಕೀಯ ನಾಯಕರು

11:28 PM Apr 14, 2019 | Lakshmi GovindaRaju |

ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನೇರಡೇ ದಿನ ಬಾಕಿ ಇದ್ದು, ಮತದಾರರ ಒಲವು ಗಳಿಸಲು ರಾಜಕೀಯ ನಾಯಕರು ಅಬ್ಬರದ ಪ್ರಚಾರದ ಮೊರೆ ಹೋಗಿದ್ದಾರೆ.

Advertisement

ಜನರ ಒಲವು ಗಳಿಸಲು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ರಜಾದಿನವಾಗಿದ್ದ ಭಾನುವಾರ, ಚುನಾವಣಾ ಪ್ರಚಾರದ ಕಾವು ತುಸು ಜೋರಾಗಿಯೇ ಇತ್ತು. ರಾಜ್ಯದ ವಿವಿಧೆಡೆ ಭಾನುವಾರ ನಡೆದ ಚುನಾವಣಾ ಪ್ರಚಾರ ಝಲಕ್‌ ಇಲ್ಲಿದೆ.

ರಾಜ್ಯದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಶೇಷ ಪೂಜೆ ನಡೆಸಿದರು. ಬಳಿಕ, ಕೊಳ್ಳೇಗಾಲ, ಚಾಮರಾಜನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು, ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಅಪ್ಪ-ಮಕ್ಕಳಿಗೆ ಜನರೇ ಮನೆಯ ದಾರಿ ತೋರಿಸುತ್ತಾರೆ: ಬಿಎಸ್‌ವೈ
– ಮಂಡ್ಯದಲ್ಲಿ ಸುಮಲತಾ ಗೆಲ್ಲುವುದು ಖಚಿತವಾಗುತ್ತಿದ್ದಂತೆ ಅಪ್ಪ-ಮಕ್ಕಳು ಮನಬಂದಂತೆ ಮಾತನಾಡುತ್ತಿದ್ದಾರೆ. ಚುನಾವಣೆ ಬಳಿಕ ಜನರೇ ಇವರಿಗೆ ರಾಜಕೀಯ ನಿವೃತ್ತಿ ನೀಡುತ್ತಾರೆ.

– 2 ವರ್ಷದ ಮೊದಲೇ ಪುಲ್ವಾಮಾ ದಾಳಿ ಬಗ್ಗೆ ಮಾಹಿತಿಯಿತ್ತು ಎನ್ನುತ್ತಾರೆ ಸಿಎಂ. ಹುಡುಗಾಟದ ಮಾತೇ ಇದು?. 44 ಸೈನಿಕರು ಬಲಿದಾನವಾದರು. ಮಾಹಿತಿಯಿದ್ದೂ ತಿಳಿಸದೇ ಇರುವುದು ದೇಶದ್ರೋಹದ ಕೆಲಸ ತಾನೇ. ನಿಮ್ಮಂತ ಒಬ್ಬ ಸಿಎಂ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವುದು ನಮ್ಮ ದುರ್ದೈವ.

Advertisement

– ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎನ್ನುತ್ತಾರೆ ರೇವಣ್ಣ. ದೇವೇಗೌಡರೂ ಇದನ್ನೇ ಹೇಳಿದ್ದರು. ದೇವೇಗೌಡರು ನಿವೃತ್ತಿಯಾದರೇನ್ರೀ ರೇವಣ್ಣನವರೇ?. ಹಗುರ ಮಾತು ನಿಲ್ಲಿಸಿ. ಚುನಾವಣೆ ಬಳಿಕ, ಅಪ್ಪ-ಮಕ್ಕಳನ್ನು ಜನರೇ ಮನೆಗೆ ಕಳಿಸುತ್ತಾರೆ.

– ಮಕ್ಕಳು, ಸೊಸೆಯಂದಿರ ಕಾಟ ಮುಗೀತು. ಈಗ ಮೊಮ್ಮಕ್ಕಳ ಕಾಟ ಪ್ರಾರಂಭವಾಗಿದೆ. ಆದರೆ, ತುಮಕೂರಲ್ಲಿ ದೇವೇಗೌಡರು ಗೆಲ್ಲುವುದೇ ಕಷ್ಟವಾಗಿದೆ.

– ಸಿಎಂ ಅವರು ಮಂಡ್ಯದಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಲು ವಾಮಮಾರ್ಗ ಅನುಸರಿಸುತ್ತಿದ್ದಾರೆ. 150 ಕೋಟಿ ಖರ್ಚು ಮಾಡಲು ಸಿದ್ದರಾಗಿದ್ದಾರೆ ಎಂಬುದಾಗಿ ಸಂಸದ ಶಿವರಾಮೇಗೌಡರ ಪುತ್ರ ಚೇತನ್‌ ಗುತ್ತಿಗೆದಾರರೊಡನೆ ಮಾತನಾಡಿರುವ 17 ನಿಮಿಷದ ರೆಕಾರ್ಡ್‌ ಇದೆ. ಈ ಬಗ್ಗೆ ತನಿಖೆ ನಡೆಸಲಿ. ಅವರ ವಿರುದ್ಧ ಆಯೋಗಕ್ಕೆ ದೂರು ನೀಡುತ್ತೇವೆ.

– ಈ ಬಾರಿ ಮಾತ್ರವಲ್ಲ, ಮುಂದಿನ ಬಾರಿಯೂ ಮೋದಿಯವರೇ ಪ್ರಧಾನಿ ಎಂದು ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿಯೇ ಹೇಳಿದ್ದಾರಲ್ಲ.

– ಮೋದಿ ಕೋಮುವಾದಿ ಎನ್ನುವ ಕಾಂಗ್ರೆಸಿಗರು, ಮೋದಿಯವರು ಪರಿಶಿಷ್ಟ ಜಾತಿಗೆ ಸೇರಿದ ರಾಮನಾಥ ಕೋವಿಂದ್‌ರನ್ನು ರಾಷ್ಟ್ರಪತಿ ಮಾಡಿದರು ಎಂಬುದು ನೆನಪಿರಲಿ.

– ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು, ಸೋನಿಯ ಗಾಂಧಿಯ ಹೆಬ್ಬೆಟ್ಟು ಆಗಿದ್ದರು.

– ಶ್ರೀನಿವಾಸಪ್ರಸಾದ್‌ ಆರೋಗ್ಯ ಸರಿಯಿಲ್ಲ, ಅವರು ಆಸ್ಪತ್ರೆಯಲ್ಲಿದ್ದಾರೆ ಎಂದಿರುವ ಪರಮೇಶ್ವರ್‌, ಕ್ಷಮಾಪಣೆ ಕೇಳಲಿ.

ನಾನು 14ನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಚುನಾವಣೆ ನನಗೆ ಬಹಳ ಮಹತ್ವದ್ದು. ಉಳಿದ ಚುನಾವಣೆಗಳಲ್ಲಿ ಗೆದ್ದುದಕ್ಕಿಂತ ಹೆಚ್ಚು ಸಂತೋಷವನ್ನು ಈ ಚುನಾವಣೆಯ ಗೆಲುವು ನೀಡಲಿದೆ. 42 ವರ್ಷಗಳ ಸುದೀರ್ಘ‌ ರಾಜಕೀಯ ಜೀವನದಲ್ಲಿ ನೆಮ್ಮದಿ ತಂದು ಕೊಡಲಿದೆ. ಹೆಮ್ಮೆ ಪಡುವ ಚುನಾವಣೆಯಾಗಿ ಜೀವನದಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ.
-ಶ್ರೀನಿವಾಸ ಪ್ರಸಾದ್‌, ಚಾಮರಾಜನಗರ ಬಿಜೆಪಿ ಅಭ್ಯರ್ಥಿ.

ಹೋರಾಟವನ್ನೇ ಮೈಗೂಡಿಸಿಕೊಂಡಿರುವ ದೇವೇಗೌಡರ ಕುಟುಂಬದ ಕುಡಿ ನಿಖೀಲ್‌ ಕುಮಾರಸ್ವಾಮಿಗೆ ಮತ ನೀಡಿ. ಅಂಬರೀಶ್‌ ಸ್ನೇಹಜೀವಿ. ಆದರೆ, ಸುಮಲತಾಗೆ ಹಿಂಬಾಲಕರು ತಲೆ ಕೆಡಿಸಿ ಸ್ನೇಹ ಬಾಂಧವ್ಯದಿಂದಿದ್ದ ನಮ್ಮ ಮತ್ತು ಅವರ ಮಧ್ಯೆ ಒಡಕುಂಟು ಮಾಡಿದ್ದಾರೆ.
-ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ. (ಮಂಡ್ಯದಲ್ಲಿ ನಿಖೀಲ್‌ ಪರ ಪ್ರಚಾರದಲ್ಲಿ).

ಕಾವೇರಿ ನೀರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಏಕೈಕ ವ್ಯಕ್ತಿ ರೆಬಲ್‌ಸ್ಟಾರ್‌ ಅಂಬರೀಶ್‌. ನನ್ನ ತಂದೆ, ಅಂಬರೀಶ್‌ ಅವರು ಕೇಂದ್ರ ಸಚಿವರಾಗಿ, ಮೂರು ಬಾರಿ ಸಂಸದರಾಗಿ, ರಾಜ್ಯಮಂತ್ರಿಯಾಗಿಯಾಗಿ ಜಿಲ್ಲೆಗೆ ಮಾಡಿರುವ ಸೇವೆ ಸ್ಮರಿಸಿ, ಅಮ್ಮನಿಗೆ ಮತ ನೀಡಿ.
-ಅಭಿಷೇಕ್‌ ಗೌಡ. (ಕೆ.ಆರ್‌.ಪೇಟೆಯಲ್ಲಿ ಪ್ರಚಾರ).

ನಿಮ್ಮೆಲ್ಲರ ಧೈರ್ಯ, ಬೆಂಬಲ, ನಂಬಿಕೆಯಿಂದ ಸುಮಲತಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಅವರ ಪರ ಎದ್ದಿರುವ ಈ ಸನಾಮಿ ಕೊನೆವರೆಗೂ ಹೀಗೆಯೇ ಮುಂದುವರಿಸಿಕೊಂಡು ಹೋಗಬೇಕು.
-ದೊಡ್ಡಣ್ಣ, ಚಿತ್ರನಟ.

ಅಮ್ಮನ ಮೇಲೂ ನಿಮ್ಮ ಅಭಿಮಾನವಿರಲಿ: ದರ್ಶನ್‌

ಮಂಡ್ಯ ಜಿಲ್ಲೆ ಮದ್ದೂರಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ದರ್ಶನ್‌ ಬಿರುಸಿನ ಪ್ರಚಾರ ನಡೆಸಿ, ಸುಮಲತಾ ಪರ ಮತಯಾಚಿಸಿದರು. ಅಭಿಮಾನಿಗಳು, ಚೆಲುವರಾಯಸ್ವಾಮಿ ಬೆಂಬಲಿಗರು, ರೈತಸಂಘದ ಕಾರ್ಯಕರ್ತರು ಸಾಥ ನೀಡಿದರು. ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆಯೂ ನಡೆಯಿತು. ದರ್ಶನ್‌ ಪ್ರಚಾರದ ವೈಖರಿ ಹೀಗಿತ್ತು:

– ಅಂಬರೀಶ್‌ ಅಭಿಮಾನದೊಂದಿಗೆ ಜಿಲ್ಲೆಯ ಸ್ವಾಭಿಮಾನ ಉಳಿಸಬೇಕಾದರೆ ಸುಮಲತಾ ಗೆಲುವು ಅತ್ಯಗತ್ಯ.

– ಹಣಕ್ಕಾಗಿ ಮತಗಳನ್ನು ಮಾರಿಕೊಂಡು ಪಶ್ಚಾತ್ತಾಪ ಪಡಬೇಡಿ.

– ಅಪ್ಪಾಜಿ (ಅಂಬರೀಶ್‌) ಮೇಲೆ ತೋರಿದ ಪ್ರೀತಿ, ಅಭಿಮಾನವನ್ನು ಸುಮಲತಾಗೂ ನೀಡಿ.

ಚುನಾವಣೆ ನಂತರ ಮತ್ತೆ ಬಿಎಸ್‌ವೈ ಸಿಎಂ: ಶ್ರೀರಾಮುಲು
ಹುಣಸೂರು ಸುತ್ತಮುತ್ತ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಶ್ರೀರಾಮುಲು.

– ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯಾಗಿಸಲು ಬಿಜೆಪಿ ಬೆಂಬಲಿಸಿ.

– ಪಾಕ್‌ ಬಿಟ್ಟು ಉಳಿದೆಲ್ಲಾ ರಾಷ್ಟ್ರಗಳು, ಇಡೀ ದೇಶವೇ ಮೋದಿಯೇ ಮತ್ತೂಮ್ಮೆ ಪ್ರಧಾನಿಯಾಗಲೆಂಬ ಅಭಿಲಾಷೆ ಹೊಂದಿದೆ.

– ಚುನಾವಣೆ ನಂತರ ಈ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.

– ರಾಜ್ಯದೆಲ್ಲೆಡೆ ಬಿಜೆಪಿ ಅಲೆ ಎದ್ದಿದ್ದು, ನಿಶ್ಚಿತವಾಗಿ ಮತ್ತೂಮ್ಮೆ ಮೋದಿ ನೇತೃತ್ವದ ಸರ್ಕಾರ ಅಧಿಕಾರ ಹಿಡಿಯುವುದು ಶತಸಿದ್ಧ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ವಜಾ: ಡಾ.ಜಿ.ಪರಮೇಶ್ವರ್‌
ಮಂಡ್ಯದಲ್ಲಿ ಪರಮೇಶ್ವರ್‌ ಚುನಾವಣಾ ಪ್ರಚಾರ.

– ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಮುಲಾಜಿಲ್ಲದೆ ಕೆಪಿಸಿಸಿ ವತಿಯಿಂದ ವಜಾ ಮಾಡಲಾಗುತ್ತದೆ.

– ಸಂವಿಧಾನ ಬದಲಿಸುವ, ಮೀಸಲಾತಿ ರದ್ದು ಮಾಡುವ ಹಾಗೂ ಅಂಬೇಡ್ಕರ್‌ ಮೂರ್ತಿ ಧ್ವಂಸಗೊಳಿಸುವ ಪಕ್ಷಕ್ಕೆ ನಾವು ಅಧಿಕಾರ ಕೊಟ್ಟರೆ ನಮ್ಮ ಅಂತ್ಯ ನಮ್ಮ ಕೈಯಿಂದಲೇ ಕೊನೆಗೊಳ್ಳುತ್ತದೆ.

– ದೇಶದ ಜನರ ಉತ್ತಮ ಜೀವನಕ್ಕೆ ಬೇಕಾದ ವಿಚಾರಧಾರೆಗಳಿಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಬದ್ಧ. ಆದರೆ, ಬಿಜೆಪಿ ಮನುಸ್ಮತಿ ವಿಚಾರಧಾರೆಗೆ ಒತ್ತುಕೊಂಡಿದೆ.

– ಮೋದಿಯ ಅಭಿವೃದ್ಧಿ ಮಾತುಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತ.

ಅಂಬಿ ಮಣ್ಣಿನ ಮಗನಾದರೆ ಸುಮಲತಾ ಯಾರು?
ಕೆ.ಆರ್‌.ಪೇಟೆ ಸುತ್ತಮುತ್ತ ಸುಮಲತಾ ಪರ ಪ್ರಚಾರ ನಡೆಸಿದ ಯಶ್‌, ವಿರೋಧಿಗಳಿಗೆ ಮಾತಿಗೆ ನೀಡಿದ ಛಾಟಿ ಏಟು ಹೀಗಿತ್ತು:

– ಅಂಬರೀಶ್‌ ಈ ಮಣ್ಣಿನ ಮಗನಾದ ಮೇಲೆ ಅವರ ಧರ್ಮಪತ್ನಿ ಏನಾಗಬೇಕು? ಮಂಡ್ಯ ಗೌಡ್ತಿಯಲ್ಲವೇ?.

– ಕೆಲವರು ಅಮ್ಮನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಮ್ಮ ಚುನಾವಣೆ ನಂತರ ಎಲ್ಲಿಯೂ ಹೋಗಲ್ಲ.

– ಕೊನೆಯ ಮೂರು ದಿನದಲ್ಲಿ ಹಣ ಕೊಟ್ಟು ಜೆಡಿಎಸ್‌ನವರು ಬದಲಾವಣೆ ಮಾಡುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ದಯಮಾಡಿ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ. ಸ್ವಾಭಿಮಾನಕ್ಕಾಗಿ ಸುಮಲತಾ ಅವರನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿಕೊಡಿ.

Advertisement

Udayavani is now on Telegram. Click here to join our channel and stay updated with the latest news.

Next