Advertisement

ಗದ್ದುಗೆ ಹೋರಾಟ: ಗೋವಾ, ಬಿಹಾರದಲ್ಲೂ ರಾಜಕೀಯ ಹೈಡ್ರಾಮಾ ಶುರು!

05:02 PM May 17, 2018 | Team Udayavani |

ಬೆಂಗಳೂರು: ಬಿಎಸ್ ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೆ, ಮತ್ತೊಂದೆಡೆ ಕರ್ನಾಟಕದ ಹೈಡ್ರಾಮಾ ಗೋವಾ ಹಾಗೂ ಬಿಹಾರದಲ್ಲಿಯೂ ಮುಂದುವರಿದಿದೆ.

Advertisement

222 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ 104ರಲ್ಲಿ ಜಯಗಳಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್ 78 ಹಾಗೂ ಜೆಡಿಎಸ್ 38 ಸ್ಥಾನ, ಪಕ್ಷೇತರರು ಇಬ್ಬರು ಆಯ್ಕೆಯಾಗಿದ್ದರು.

ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯಪಾಲ ವಜೂಬಾಯ್ ವಾಲಾ ಅವರು ಬುಧವಾರ ರಾತ್ರಿ ಪ್ರಮಾಣವಚನ ಸ್ವೀಕರಿಸುವಂತೆ ಬಿಜೆಪಿ ನಿಯೋಜಿತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಪ್ರಮಾಣವಚನ ಸ್ವೀಕರಿಸಲು ಸಂದೇಶ ರವಾನಿಸಿದ್ದರು.

ಕಾಂಗ್ರೆಸ್, ಜೆಡಿಎಸ್ ಮುಖಂಡರು ರಾಜ್ಯಪಾಲರನ್ನು ಭೇಟಿಯಾಗಿ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು, ನಮ್ಮಲ್ಲಿ ಸರ್ಕಾರ ರಚನೆಗೆ ಬೇಕಾದ ಅಗತ್ಯದ ಶಾಸಕರ ಸಂಖ್ಯೆ ಇರುವುದಾಗಿ ಮನವಿ ಮಾಡಿತ್ತು. ಆದರೆ ರಾಜ್ಯಪಾಲರು ಬಿಜೆಪಿ ವರಿಷ್ಠ ಬಿಎಸ್ ವೈಗೆ ಪ್ರಮಾಣವಚನ ಸ್ವೀಕರಿಸುವಂತೆ ಸಂದೇಶ ರವಾನಿಸಿದ್ದರು.

ಈ ಕ್ರಮದ ನಡುವೆಯೇ ಕಾಂಗ್ರೆಸ್, ಜೆಡಿಎಸ್ ರಾತ್ರೋರಾತ್ರಿ ಸುಪ್ರೀಂಕೋರ್ಟ್ ಕದ ತಟ್ಟಿ, ಬಿಎಸ್ ವೈ ಪ್ರಮಾಣವಚನ ಸಮಾರಂಭಕ್ಕೆ ತಡೆ ನೀಡುವಂತೆ ಮನವಿ ಮಾಡಿತ್ತು. ತಡರಾತ್ರಿಯಿಂದ ನಸುಕಿನವರೆಗೂ ವಿಚಾರಣೆ ನಡೆಸಿದ್ದ ಸುಪ್ರೀಂ ತ್ರಿಸದಸ್ಯ ಪೀಠ, ಪ್ರಮಾಣವಚನಕ್ಕೆ ತಡೆ ನೀಡಲು ನಿರಾಕರಿಸಿ, ಶುಕ್ರವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

Advertisement

ಇಂದು ಬಿಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯಪಾಲರ ಕ್ರಮವನ್ನು ಖಂಡಿಸಿದರು.

ಮಾಯಾವತಿ, ರಾಹುಲ್ ಗಾಂಧಿ ಕೂಡಾ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಪ್ರತಿಕ್ರಿಯೆ ನೀಡಿದ್ದರು. ಕರ್ನಾಟಕದ ರಾಜಕೀಯದ ಬಿಕ್ಕಟ್ಟು ಗೋವಾ ಹಾಗೂ ಬಿಹಾರದಲ್ಲಿಯೂ ಮುಂದುವರಿದಿದೆ.

ಗೋವಾ, ಬಿಹಾರದಲ್ಲಿ ಪ್ರತಿಭಟನೆ

2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಅಂದು ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. 40 ಸದಸ್ಯರನ್ನೊಳಗೊಂಡ ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 12 ಸ್ಥಾನ ಗಳಿಸಿತ್ತು. ಬಳಿಕ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದರು.

ಇದೀಗ ಕರ್ನಾಟಕದಲ್ಲಿ ಪ್ರತಿಭಟನೆ ಆರಂಭವಾದ ಬಳಿಕ ಗೋವಾದಲ್ಲಿಯೂ ರಾಜ್ಯಪಾಲರ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಶಾಸಕರು ನಿರ್ಧರಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಬಿಹಾರದಲ್ಲಿಯೂ 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಆರ್ ಜೆಡಿ 80 ಸ್ಥಾನ, ಜನತಾ ದಳ ಸಂಯುಕ್ತ 71, ಕಾಂಗ್ರೆಸ್ 27, ಬಿಜೆಪಿ 53 ಹಾಗೂ ಇತರೆ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಅಂದು ಸರ್ಕಾರ ರಚಿಸಲು ಜೆಡಿಯುಗೆ ರಾಜ್ಯಪಾಲರು ಆಹ್ವಾನ ನೀಡಿದ್ದರು. ನಿತೀಶ್ ಕುಮಾರ್, ಆರ್ ಜೆಡಿ ಬೆಂಬಲದೊಂದಿಗೆ ಸಿಎಂ ಆಗಿದ್ದರು. ತೇಜಸ್ವಿನಿ ಯಾದವ್ ಡಿಸಿಎಂ ಆಗಿದ್ದರು. ಬಳಿಕ ಯಾದವ್ ವಿರುದ್ಧ ಸಿಬಿಐ ಭ್ರಷ್ಟಾಚಾರದ ಪ್ರಕರಣ ದಾಖಲಿಸಿತ್ತು. 2017ರ ಜುಲೈನಲ್ಲಿ ತೇಜಸ್ವಿನಿ ರಾಜೀನಾಮೆ ಕೊಟ್ಟಿದ್ದರು. ತದ ನಂತರ ನಿತೀಶ್ ಕುಮಾರ್ ಕೂಡಾ ರಾಜೀನಾಮೆ ನೀಡಿದ್ದರು. ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸುವ ಮೂಲಕ ನಿತೀಶ್ ಕುಮಾರ್ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಚುನಾವಣೆಯಲ್ಲಿ ತಮ್ಮದೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ಸರ್ಕಾರ ರಚನೆಗೆ ಅವಕಾಶ ಕೊಡಬೇಕೆಂದು ತೇಜಸ್ವಿನಿ ಯಾದವ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next