Advertisement

ರಾಜಕೀಯ ಮೇಲಾಟಕ್ಕೆ ಅಸ್ತ್ರವಾಗುತ್ತಿರುವ ಸಭಾಪತಿ ಸ್ಥಾನ

01:08 AM Dec 14, 2020 | sudhir |

ಬೆಂಗಳೂರು: ಶತಮಾನದ ಇತಿಹಾಸ ಹೊಂದಿರುವ ಹಾಗೂ ಶಾಸಕಾಂಗ ವ್ಯವಸ್ಥೆಯಲ್ಲಿ ರಾಜ್ಯಸಭೆಗೆ ಹೋಲಿಕೆ ಮಾಡಬಹುದಾದ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ ನಡೆದಿರುವುದು ಇದು ಎರಡನೇ ಬಾರಿ.
2017ರಲ್ಲಿ ಸಭಾಪತಿ ಆಗಿದ್ದ ಡಿ. ಎಚ್‌. ಶಂಕರಮೂರ್ತಿ ವಿರುದ್ಧ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಅದಕ್ಕೆ ಒಂದು ಮತದಿಂದ ಸೋಲಾಗಿತ್ತು. ಈಗ ಆಡಳಿತಾರೂಢ ಬಿಜೆಪಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ತಾಂತ್ರಿಕವಾಗಿ ಅದನ್ನು ಸಭಾಪತಿಯವರು ತಿರಸ್ಕರಿಸಿದ್ದರೂ, ಮಂಗಳವಾರದ ಕಲಾಪದಲ್ಲಿ ಇದು ಚರ್ಚೆಯ ವಿಷಯವಾಗಲಿದೆ.

Advertisement

ದೇಶದ ಬೇರೆ ರಾಜ್ಯಗಳಲ್ಲಿ ಅಸ್ತಿತ್ವ ದಲ್ಲಿರುವ ವಿಧಾನ ಪರಿಷತ್ತುಗಳಿಗೆ ಹೋಲಿಸಿದರೆ ನಮ್ಮದಕ್ಕೆ ವಿಶೇಷ ಸ್ಥಾನ ಮಾನವಿದೆ. 1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ಪರಿಷತ್‌ ಸ್ಥಾಪಿಸಲ್ಪಟ್ಟಿದ್ದು, 1952ರಿಂದ ಈವರೆಗೆ 44 ಮಂದಿ ಸಭಾಪತಿ ಸ್ಥಾನ ಅಲಂಕರಿಸಿದ್ದಾರೆ.

ಶಿಷ್ಟಾಚಾರದ ಪ್ರಕಾರ ರಾಜ್ಯಪಾಲರ ಬಳಿಕದ ಸ್ಥಾನ ವಿಧಾನಪರಿಷತ್ತಿನ ಸಭಾಪತಿಯವರಿದ್ದು. ಅನಂತರದ ಸ್ಥಾನದಲ್ಲಿ ಕ್ರಮವಾಗಿ ವಿಧಾನಸಭೆ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿಯವರು ಬರುತ್ತಾರೆ.

ರಾಜ್ಯದ ಶಾಸಕಾಂಗ ವ್ಯವಸ್ಥೆಯಲ್ಲಿ ಮೇಲ್ಮನೆ, ಚಿಂತಕರ ಚಾವಡಿ ಎಂದೆಲ್ಲ ಕರೆಸಿಕೊಳ್ಳುವ ವಿಧಾನ ಪರಿಷತ್ತಿನ ಈಗಿನ ಬೆಳವಣಿಗೆಗಳು ದುರದೃಷ್ಟಕರ. ಸದನದ ಘನತೆ ಮತ್ತು ಸಭಾಪತಿ ಸ್ಥಾನದ ಗೌರವದ ದೃಷ್ಟಿಯಿಂದ ಈಗಿನ ವಿದ್ಯಮಾನಗಳು ಆರೋಗ್ಯಕರವಲ್ಲ. ಸಭಾಪತಿಯಾದವರು ಇಡೀ ಸದನ ವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಆಡಳಿತ ಪಕ್ಷ ಅಥವಾ ಸರಕಾರದ ಜತೆಗೆ ಸೌಹಾರ್ದ ಸಂಬಂಧಗಳನ್ನು ಇಟ್ಟು ಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮೇಲ್ಮನೆ ಪ್ರತಿನಿಧಿಸಿದ್ದ ಕೆಲವು ಹಿರಿಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದೊಂದು ಅನಿರೀಕ್ಷಿತ ಬೆಳವಣಿಗೆ ಮನಸ್ಸಿಗೆ ತುಂಬಾ ಬೇಸರವಾಗಿದೆ. ಸಭಾಪತಿ ಸ್ಥಾನಕ್ಕೆ ಎಲ್ಲರೂ ಗೌರವ ನೀಡಬೇಕು. ಜತೆಗೆ ಸಭಾಪತಿಯವರೂ ಈ ಸ್ಥಾನದ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಸಭಾಪತಿಯಾದವರು ಯಾವುದೇ ಪಕ್ಷದ ಪರವಾಗಿ ಇರಬಾರದು. ಏಕೆಂದರೆ, ಸಭಾಪತಿಯವರ ಕೆಲಸ ಸರಕಾರ ನಡೆಸುವುದಲ್ಲ, ಸದನ ನಡೆಸುವುದಾಗಿದೆ. ಸಭಾಪತಿಯವರೇ ದಾರಿ ತಪ್ಪಿದರೆ ಸದನ ನಡೆಯುವುದು ಹೇಗೆ?
– ಡಿ. ಎಚ್‌. ಶಂಕರಮೂರ್ತಿ, ಮಾಜಿ ಸಭಾಪತಿ

Advertisement

ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಒಳ್ಳೆಯ ಸಂಪ್ರದಾಯವಲ್ಲ. ಸಭಾಪತಿ ಸ್ಥಾನವನ್ನು ತೀರಾ ರಾಜಕೀಯ ಮೇಲಾಟಗಳಿಗೆ ಎಳೆದು ತರುವುದು ಶೋಭೆಯಲ್ಲ. ಹಾಗೆಯೇ ಸಭಾಪತಿಯವರು ಕೂಡ ತುಂಬಾ ಎಚ್ಚರಿಕೆ ಮತ್ತು ಸೂಕ್ಷ್ಮತೆಯಿಂದಿರಬೇಕು. ಸರಕಾರವನ್ನು ತೀರಾ ಮುಜುಗರಕ್ಕೆ ಒಳಪಡಿಸುವಂತಹ ಕೆಲಸವನ್ನೂ ಮಾಡಬಾರದು. ಅದೇ ರೀತಿ ಆಡಳಿತ ಪಕ್ಷಕ್ಕೆ ಬಹುಮತದ ಸಂಖ್ಯಾಬಲ ಬಂದ ತತ್‌ಕ್ಷಣ ಸಭಾಪತಿ ವಿರುದ್ದ ಅವಿಶ್ವಾಸ ಮಂಡನೆಯೂ ಸಮಂಜಸವಲ್ಲ.
– ವಿ.ಆರ್‌. ಸುದರ್ಶನ್‌, ಮಾಜಿ ಸಭಾಪತಿ

ರಾಜಕೀಯ ಹೊಂದಾಣಿಕೆ ಮೇಲ್ಮನೆಯಲ್ಲಿ ಅನಿ ವಾರ್ಯ. ಅಧಿಕಾರಕ್ಕೆ ಬರುವ ಪಕ್ಷಕ್ಕೆ ಮೇಲ್ಮನೆಯಲ್ಲಿ ಬಹುಮತ ಇರುವುದು ಕಡಿಮೆ. ಹಿಂದೆ ನಿರಂತರವಾಗಿ ಕಾಂಗ್ರೆಸ್‌ ಗೆಲ್ಲುತ್ತಿದ್ದರಿಂದ ಸಮಸ್ಯೆ ಇರಲಿಲ್ಲ. ಈಗೀಗ ಅಧಿಕಾರಕ್ಕೆ ಬರುವ ಪಕ್ಷಗಳ ಬದಲಾವಣೆ ಆಗುತ್ತಿರುವುದರಿಂದ ರಾಜಕೀಯ ಲೆಕ್ಕಾ ಚಾರ ಬದಲಾಗುತ್ತವೆ. ಸಭಾಪತಿ ಮೇಲೆ ಸದನ ವಿಶ್ವಾಸ ಹೊಂದಿಲ್ಲ ಎಂದಾದರೆ, ಅದನ್ನು ಎದುರಿಸಬೇಕು ಅಥವಾ ರಾಜೀನಾಮೆ ಕೊಡಬೇಕು.
– ಕ್ಯಾ| ಗಣೇಶ್‌ ಕಾರ್ಣಿಕ್‌, ಮಾಜಿ ವಿಧಾನ ಪರಿಷತ್‌ ಸದಸ್ಯ

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next