Advertisement
ಸಂತೋಷ ಆತ್ಮಹತ್ಯೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ-ಪ್ರತ್ಯಾರೋಪ, ಪ್ರತಿಭಟನೆಗಳು ಈ ಅನುಮಾನ ಹುಟ್ಟು ಹಾಕಿದೆ. ಸಂತೋಷ ಸಾವನ್ನು ಮುಂದಿಟ್ಟುಕೊಂಡು ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ನೇರ ಹಾಗೂ ವೈಯಕ್ತಿಕವಾಗಿ ಟೀಕೆಗಳಿಗೆ ಇಳಿದಿದ್ದಾರೆ.
Related Articles
Advertisement
ಸಂತೋಷ ಪಾಟೀಲ ಪ್ರಕರಣವನ್ನು ಹಗುರವಾಗಿ ತೆಗೆದು ಹಾಕುವಂತಿಲ್ಲ. ಅವರು ಮಾಡಿರುವ ಕಾಮಗಾರಿಗಳು ಮತ್ತು ಬಿಲ್ ಪಾವತಿ ವಿಷಯ ಸಹ ನಿರ್ಲಕ್ಷ್ಯ ಮಾಡುವಂತಿಲ್ಲ. ಆದರೆ ಯಾವುದೇ ಕಾರ್ಯಾದೇಶ ಇಲ್ಲದೆ 108 ಕಾಮಗಾರಿಗಳನ್ನು ಸಂತೋಷ ಪಾಟೀಲ ಯಾವ ಧೈರ್ಯದ ಮೇಲೆ ತೆಗೆದುಕೊಂಡರು. ಇದಕ್ಕೆ ಪ್ರೇರಣೆ ನೀಡಿದವರು ಯಾರು ಎಂಬುದು ಈಗ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಗೊತ್ತಿದೆ. ಆದರೆ ಯಾರೂ ಬಹಿರಂಗವಾಗಿ ಇದನ್ನು ಹೇಳುತ್ತಿಲ್ಲ. ಬದಲಾಗಿ ಸಂತೋಷ ಆತ್ಮಹತ್ಯೆಯನ್ನು ತಮ್ಮ ರಾಜಕೀಯ ದಾಳಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾವಿನ ಮನೆಯಲ್ಲಿ ರಾಜಕಾರಣ ಮಾಡಬಾರದು ಎನ್ನುತ್ತಲೇ ಸಂತೋಷ ಮನೆಯಲ್ಲಿ ಒಬ್ಬರಿಗೊಬ್ಬರು ಗಂಭೀರ ಆರೋಪ ಮಾಡುತ್ತಿದ್ದಾರೆ. ಯಾರಿಂದಲೂ ನಿಜಾಂಶ ಹೊರಬರುತ್ತಿಲ್ಲ.
ಶಾಸಕರಿಗೆ ಗೊತ್ತಿಲ್ಲವೇ?: ಸಂತೋಷ ಪಾಟೀಲ ಕಾಮಗಾರಿ ಕೈಗೊಂಡ ಹಿಂಡಲಗಾ ಕ್ಷೇತ್ರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಟಾಳಕರ ಈ ಕ್ಷೇತ್ರದ ಶಾಸಕರು. ಹಿಂಡಲಗಾ ಗ್ರಾಮದಲ್ಲಿ ಸಂತೋಷ 108 ಕಾಮಗಾರಿಗಳನ್ನು ಕೈಗೊಂಡಿದ್ದರೂ ಅದರ ಬಗ್ಗೆ ಶಾಸಕರಿಗೆ ಮಾಹಿತಿ ಇರಲಿಲ್ಲ ಎಂಬುದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ತಮ್ಮ ಕ್ಷೇತ್ರದಲ್ಲಿ ಗಮನಕ್ಕೆ ತರದೇ 108 ಕಾಮಗಾರಿಗಳು ನಡೆದಿದ್ದರೂ ಶಾಸಕರು ಏಕೆ ಪ್ರಶ್ನೆ ಮಾಡಲಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ ಕ್ಷೇತ್ರದಲ್ಲಿ ಯಾವುದೇ ಒಂದು ಕಾಮಗಾರಿ ನಡೆದರೆ ಅದನ್ನು ಶಿಷ್ಟಾಚಾರದ ಪ್ರಕಾರ ಶಾಸಕರ ಗಮನಕ್ಕೆ ತರಬೇಕು. ಅದು ಸಂಬಂಧಪಟ್ಟ ಇಲಾಖೆ ಗಮನಕ್ಕೂ ಇರಬೇಕು. ಆದರೆ ಇಲ್ಲಿ 108 ಕಾಮಗಾರಿ ನಡೆದಿದೆ ಎಂದ ಮೇಲೆ ಇಲಾಖೆಗೂ ಗೊತ್ತಿರಬೇಕು. ಶಾಸಕರ ಗಮನಕ್ಕೂ ಬಂದಿರಲೇ ಬೇಕು. ಇಷ್ಟೊಂದು ಕಾಮಗಾರಿ ನಡೆದ ಮೇಲೆ ಯಾರೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಂದು ಸಣ್ಣ ಗ್ರಾಮದಲ್ಲಿ 108 ಕಾಮಗಾರಿಗಳು ನಡೆದ ಮೇಲೆಯೂ ಶಾಸಕರು, ಜಿಪಂ, ತಾಪಂ ಅಧಿಕಾರಿಗಳು ಏಕೆ ಗುತ್ತಿಗೆದಾರರನ್ನು ಪ್ರಶ್ನೆ ಮಾಡಲಿಲ್ಲ. ಕಾರ್ಯಾದೇಶ (ವರ್ಕ್ ಆರ್ಡರ್) ದ ಪರಿಶೀಲನೆ ಏಕೆ ಮಾಡಲಿಲ್ಲ ಎಂಬುದು ಇಲ್ಲಿ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ಇದೇ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಹಿಜಾಬ್ ವಿಚಾರದಲ್ಲಿ ಕೈಸುಟ್ಟುಕೊಂಡ ನಂತರ ಬಿಜೆಪಿ ವಿರುದ್ಧ ತಿರುಗಿ ಬೀಳಲು ಕಾಯುತ್ತಿದ್ದ ಕಾಂಗ್ರೆಸ್‌ಗೆ ಈಗ ಸಂತೋಷ ಪಾಟೀಲ ರೂಪದಲ್ಲಿ ಹೊಸ ಅಸ್ತ್ರ ಸಿಕ್ಕಿದೆ. ಸಂತೋಷ ಪಾಟೀಲ ಹೆಸರು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಹಳೆಯ ಪ್ರಕರಣಗಳಿಗೆ ಮತ್ತೆ ಜೀವ ಕೊಡುವ ಪ್ರಯತ್ನ ನಡೆದಿದೆ. ಈ ಎಲ್ಲ ಗಲಾಟೆಗಳ ಮಧ್ಯೆ ಸಂತೋಷನ ಕುಟುಂಬದ ಸದಸ್ಯರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕದಿರಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಾಂಗ್ರೆಸ್‌ಗೆ ಅಸ್ತ್ರ: ಸಂತೋಷ ಪಾಟೀಲ ಪ್ರಕರಣ ತ್ವರಿತವಾಗಿ ಬಗೆಹರಿಸದಿದ್ದರೆ ಮುಂದೆ ಇದು ಈಶ್ವರಪ್ಪಗೆ ತಿರುಗುಬಾಣವಾಗಲಿದೆ ಎಂದು ಕೆಲವರು ಸಿಎಂಗೆಎಚ್ಚರಿಸಿದ್ದರು. ಪ್ರಕರಣದ ಸಾಧ್ಯಾಸಾಧ್ಯತೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಸುಲಭವಾಗಿ ಬಗೆಹರಿಯುತ್ತಿದ್ದ ಪ್ರಕರಣವನ್ನು ಒಂದು ಅಸ್ತ್ರದ ರೂಪದಲ್ಲಿ ಕಾಂಗ್ರೆಸ್‌ಗೆ ಕೊಟ್ಟರು.
ದೂರಿನಲ್ಲೇನಿದೆ?: ಉಡುಪಿ: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ಸಹೋ ದರ ಪ್ರಶಾಂತ್‌ಗೌಡಪ್ಪ ಪಾಟೀಲ ನೀಡಿದ ದೂರಿನ ವಿವರ ಹೀಗಿದೆ:
2020 -21ನೇ ಸಾಲಿನಲ್ಲಿ ಬೆಳ ಗಾವಿ ಜಿಲ್ಲೆ ಹಿಂಡಲಗಾ ಗ್ರಾಪಂ ವ್ಯಾಪ್ತಿಯ ಶ್ರೀಲಕ್ಷಿ ¾àದೇವಿ ಜಾತ್ರೆ ಜರುಗುವ ಹಿನ್ನೆಲೆಯಲ್ಲಿ ಊರಿನ ಪ್ರಮುಖರು ಮತ್ತು ಸ್ವಾಮಿಗಳು ಸೇರಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಜಾತ್ರೆಯ ವಿಷಯ ತಿಳಿಸಿ, ರಸ್ತೆ, ಚರಂಡಿ, ಪೇವರ್ ಜೋಡಣೆ ಕಾಮಗಾರಿ ಮಾಡಿಕೊಡಬೇಕು ಎಂದು ವಿನಂತಿಸಿಕೊಂಡಿದ್ದರು.
ಆಗ ಸಚಿವರು ನೀವು ನಮ್ಮ ಕಾರ್ಯಕರ್ತರು, ಕೆಲಸ ಪ್ರಾರಂಭಿಸಿ ಎಂದು ತಿಳಿಸಿದ್ದರು. ಊರಿಗೆ ಹಿಂದಿರುಗಿದ ಪ್ರಮುಖರು ಹಾಗೂ ಹಿಂಡಲಗಾ ಗ್ರಾಪಂ ಅಧ್ಯಕ್ಷರು ಸಂತೋಷ್ ಪಾಟೀಲ್‌ಗೆ ಕೆಲಸ ಆರಂಭಿಸಲು ತಿಳಿಸಿದ್ದರು. ಅದರಂತೆ ಪಾಟೀಲ್ ಮತ್ತು ಉಳಿದ ಗುತ್ತಿಗೆದಾರರು ಸೇರಿಕೊಂಡು ಸುಮಾರು 4 ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ಸ್ವಂತ ಹಣದಿಂದ ಹಾಗೂ ಇತರ ಸಹಾಯದಿಂದ ಸರ್ಕಾರದ ಹಣ ಪಡೆಯದೆ ಪೂರ್ಣಗೊಳಿಸಿದ್ದರು. ಕಾಮಗಾರಿ ಬಿಲ್ ಮಂಜೂರು ಮಾಡುವಂತೆ ಸಚಿವರು ಮತ್ತು ಆಪ್ತರನ್ನು ಹಲವಾರು ಬಾರಿ ಭೇಟಿಯಾಗಿ ವಿನಂತಿಸಿಕೊಂಡಿದ್ದರು. ಆದರೆ ಅವರೆಲ್ಲರೂ ಹಾಗೆ ಕೆಲಸ ಆಗುವುದಿಲ್ಲ, ಶೇ.40 ಕಮಿಷನ್ ನೀಡಿದರೆ ಬಿಲ್ ಪಾಸ್ ಮಾಡುವುದಾಗಿ ಹೇಳಿದ್ದರು. ಈ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘದವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.
ಅದೇ ರೀತಿ ಗುತ್ತಿಗೆದಾರ ಸಂತೋಷ್ ಮಾಧ್ಯಮಗಳ ಮೂಲಕ ಮಾರ್ಚ್ ತಿಂಗಳಿನಲ್ಲಿ ಈಶ್ವರಪ್ಪ ಶೇ.40 ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದರು. ಆದರೆ ಈ ಬಿಲ್ ಪಾಸ್ ಆಗದ ಕಾರಣ ಸಚಿವರು ಮತ್ತು ಆಪ್ತರ ವಿರುದ್ಧ ವಿಡಿಯೋ ಫೂಟೇಜ್ ಮೂಲಕ ನಾಲ್ಕು ಕೋಟಿ ರೂ. ಕಾಮಗಾರಿ ಹಣದ ಬಿಲ್ ಪಾಸ್ ಮಾಡದ ಕಾರಣ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗುತ್ತೀರಿ ಎಂದು ಮಾಧ್ಯಮಗಳಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಸಂತೋಷ್ ಹಲವಾರು ಕಾಮಗಾರಿಗಳಿಗಾಗಿ ಹಣ ಹಾಕಿದ್ದರಿಂದ ಅಡಚಣೆಯಾಗಿ ಶೇ.40 ಕಮಿಷನ್ ವಿಷಯದ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಹೊಸದಿಲ್ಲಿ ಮಟ್ಟದ ಬಿಜೆಪಿ ವರಿಷ್ಠರಿಗೆ, ಪ್ರಧಾನಿ ಕಚೇರಿಗೆ ಭೇಟಿ ನೀಡಿ ಈಶ್ವರಪ್ಪ ವಿರುದ್ಧ ಬಿಲ್ ಪಾಸ್ ಮಾಡದ ಹಾಗೂ 40ಪರ್ಸೆಂಟ್ ಕಮಿಷನ್ ಕುರಿತು ದೂರು ಸಲ್ಲಿಸಿದ್ದರು. ಆದರೂ ಬಿಲ್ ಪಾಸ್ ಆಗಿಲ್ಲ. ಹೀಗಾಗಿ ಮನನೊಂದು ತನ್ನ ಮೊಬೈಲ್‌ನಿಂದ ವಾಟ್ಸಾಪ್ ಮೂಲಕ ಡೆತ್ ನೋಟ್ ಸಂದೇಶವನ್ನು ಮಾಧ್ಯಮಗಳು ಮತ್ತು ಆಪ್ತರಿಗೆ ಕಳುಹಿಸಿ ಏ.11ರ ರಾತ್ರಿ ಸುಮಾರು 11 ಗಂಟೆಯಿಂದ ಏ.12ರ ಬೆಳಗ್ಗೆ 10 ಗಂಟೆ ಮಧ್ಯಾವಧಿಯಲ್ಲಿ ಉಡುಪಿಯ ಶಾಂಭವಿ ಲಾಡ್ಜ್ನ ಕೊಠಡಿ ಸಂಖ್ಯೆ 207ರಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಈ ಸಾವಿಗೆ ಕಾರಣರಾದ ಆರೋಪಿಗಳ ವಿರುದ್ದ ಕ್ರಮ ಜರಗಿಸಬೇಕೆಂದು ಪ್ರಶಾಂತ ದೂರು ನೀಡಿದ್ದಾರೆ. ಈ ದೂರು ದಾಖಲಾಗುತ್ತಿದ್ದಂತೆ ಪೊಲೀಸರ ತನಿಖೆ ಪ್ರಕ್ರಿಯೆ ಬುಧವಾರ ಆರಂಭಗೊಂಡಿತು. ಆದರೆ ಮಹಜರು ಪ್ರಕ್ರಿಯೆ ವೇಳೆ ಮತ್ತೆ ಹೈಡ್ರಾಮಾ ನಡೆಯಿತು. ಈ ನಡುವೆ ಆರೋಪಿಗಳ ಬಂಧನವಾಗುವವರೆಗೆ ಶವ ಬಿಟ್ಟು ಕೊಡುವುದಿಲ್ಲ ಎಂದು ಪ್ರಶಾಂತ್ ತಿಳಿಸಿದರು. ಹೀಗಾಗಿ ಮೃತದೇಹ ಬುಧವಾರ ಸಂಜೆಯವರೆಗೂ ಕೊಠಡಿಯಲ್ಲಿಯೇ ಇತ್ತು.
ಪ್ರಶಾಂತ್ ಪಾಟೀಲ್ ನೀಡಿದ ದೂರಿನಂತೆ ತನಿಖೆ ಆರಂಭಗೊಂಡಿದೆ. ಫೋರೆನ್ಸಿಕ್ ತಜ್ಞರ ಮೂಲಕ ಹಲವಾರು ಮಾದರಿ, ಸಾಕ್ಷ್ಯ ಸಂಗ್ರಹಿಸಲಾಗಿದೆ. ಸದ್ಯ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ. ಮತ್ತಷ್ಟು ತನಿಖೆ ನಡೆಯುತ್ತಿದೆ. -ದೇವಜ್ಯೋತಿ ರೇ, ಪಶ್ಚಿಮ ವಲಯ ಐಜಿಪಿ
-ಕೇಶವ ಆದಿ