Advertisement

ಕಣಕ್ಕೆ  ಮೆರುಗು ನೀಡಿದ ರಾಜಕೀಯ ಗಣ್ಯರು

11:12 AM May 12, 2018 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿಯೂ ವಿವಿಧ ರಾಜಕೀಯ ಪಕ್ಷಗಳ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ಬಂದು ಹೋಗುವ ಮೂಲಕ ಕಣವನ್ನು ರಂಗೇರಿಸಿದ್ದು ವಿಶೇಷ.

Advertisement

ಪ್ರಧಾನಿ ಮೋದಿಯಿಂದ ಹಿಡಿದು ಹಿರಿಯ ನಟ ರಾಜ್‌ ಬಬ್ಬರ್‌ ತನಕ ಬಹಳಷ್ಟು ನಾಯಕರು ಜಿಲ್ಲೆಗೆ ಬಂದು ಅಬ್ಬರದ ಪ್ರಚಾರ ಮಾಡಿ ಹೋಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಜಿಲ್ಲೆಗೆ ಎರಡು ಬಾರಿ ಆಗಮಿಸಿ ಪ್ರಚಾರ ನಡೆಸುವ ಮೂಲಕ ಸಂಚಲನ ಮೂಡಿಸಿದ್ದರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿಯವರು ಕೂಡ ಚುನಾವಣೆ ದಿನಾಂಕ ಘೋಷಣೆಗೂ ಮೊದಲು ಜಿಲ್ಲೆಗೆ ಹಲವು ಬಾರಿ ಆಗಮಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. ಚುನಾವಣೆ ಘೋಷಣೆಯಾದ ಬಳಿಕ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ರಾಜ್ಯ ಮಟ್ಟದ ಕೆಲವು ನಾಯಕರು ಬಂದಿದ್ದರೂ ಬಹಿರಂಗ ಪ್ರಚಾರ ಸಭೆಗೆ ಮಂಗಳೂರು ನಗರಕ್ಕೆ ಬಂದಿಲ್ಲ. ಜೆಡಿಎಸ್‌ನಿಂದ ಯಾವುದೇ ಮುಂಚೂಣಿ ನಾಯಕರು ಅಥವಾ ತಾರಾ ಪ್ರಚಾರಕರು ಬಂದಿಲ್ಲ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಲೋಕ ಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌, ಉಪನಾಯಕ ಆನಂದ್‌ ಶರ್ಮಾ, ಕೇಂದ್ರ ಮಾಜಿ ಅರ್ಥಸಚಿವ ಪಿ. ಚಿದಂಬರಂ, ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯಿಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ಸಚಿವ ಡಿ.ಕೆ. ಶಿವಕುಮಾರ್‌, ಚಿತ್ರನಟ ರಾಜ್‌ ಬಬ್ಬರ್‌, ಕೇರಳ ಕಾಂಗ್ರೆಸ್‌ ಮುಖಂಡ ರಮೇಶ್‌ ಚೆನ್ನಿತ್ತಲ, ಎಐಸಿಸಿ ಪ್ರ. ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಸೇರಿದಂತೆ ರಾಷ್ಟ್ರೀಯ, ರಾಜ್ಯ ನಾಯಕರು ಬಹಿರಂಗ ಸಭೆಗಳು, ಪ್ರಚಾರ ಜಾಥಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿಗಳಿಗೆ ಮತಯಾಚಿಸಿದ್ದರು.

ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಜವುಳಿ ಖಾತೆ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಅಂಕಿಅಂಶ ಸಚಿವ ಡಿ.ವಿ. ಸದಾನಂದ ಗೌಡ ಮುಂತಾದ ಅಗ್ರಗಣ್ಯ ನಾಯಕರು ಪಾಲ್ಗೊಂಡು ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣೆ ದಿನಾಂಕ ಘೋಷಣೆ ಮೊದಲು ಉಡುಪಿ ಹಾಗೂ ದ.ಕನ್ನಡ ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆ ಯಲ್ಲಿ ಭಾಗವಹಿಸಿ ರೋಡ್‌ಶೋ ನಡೆಸಿದ್ದರು, ಬಹಿರಂಗ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದರು.

Advertisement

ಅಮಿತ್‌ ಶಾ ಕೂಡ ಚುನಾವಣಾ ದಿನಾಂಕ ಪ್ರಕಟವಾಗುವ ಮೊದಲು ಜಿಲ್ಲೆಯಲ್ಲಿ ಜನಸುರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣಾ ಘೋಷಣೆಯಾದ ಬಳಿಕ ರಾಹುಲ್‌ ಗಾಂಧಿ ಜಿಲ್ಲೆಗೆ ಆಗಮಿಸಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ, ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಅಮಿತ್‌ ಶಾ ಅವರು
ಮಂಗಳೂರಿನಲ್ಲಿ ರೋಡ್‌ ಶೋ ನಡೆಸಿದ್ದರು.

2013ರಲ್ಲಿ ಬಂದಿದ್ದ ಸ್ಟಾರ್‌ ನಾಯಕರು
2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸಚಿವರಾಗಿದ್ದ ಎಂ. ವೀರಪ್ಪ ಮೊಯಿಲಿ, ಆಸ್ಕರ್‌ ಫೆರ್ನಾಂಡಿಸ್‌, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ, ಆಗ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮುಂತಾದ ನಾಯಕರು ಆಗಮಿಸಿ ಪ್ರಚಾರ ನಡೆಸಿದ್ದರು. ಬಿಜೆಪಿ ಪರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌, ವರುಣ್‌ ಗಾಂಧಿ, ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಷಿ, ಅನಂತ ಕುಮಾರ್‌, ಡಿ.ವಿ. ಸದಾನಂದ ಗೌಡ ಮುಂತಾದ ನಾಯಕರು ಪ್ರಚಾರ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next