ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ ಶಾಶ್ವತ ಶತ್ರುಗಳೂ ಇಲ್ಲ ಎನ್ನುವುದು ಹಳೇ ಮಾತು. ಆದರೆ ಈ ಮಾತು ಪದೇ ಪದೆ ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದೀಗ ಮಹಾರಾಷ್ಟ್ರದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳು ಸಹ ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ವಿಧಾನಸಭೆಗೆ ಚುನಾವಣೆ ನಡೆದು ತಿಂಗಳು ಕಳೆದರೂ ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಇಲ್ಲದ ಕಾರಣ ಸರಕಾರ ರಚನೆ ಸಾಧ್ಯವಾಗಲಿಲ್ಲ. ಯಾರೇ ಸರಕಾರ ರಚಿಸಬೇಕಿದ್ದರೂ ಇನ್ನೊಂದು ಪಕ್ಷದ ಬೆಂಬಲ ಅನಿವಾರ್ಯ ಎಂಬ ಸ್ಥಿತಿ ಮಹಾರಾಷ್ಟ್ರದಲ್ಲಿದೆ. ಸರ್ಕಾರ ರಚನೆಯಾಗಬೇಕಾದರೆ, ಚುನಾವಣೆಯಲ್ಲಿ ಎದುರು ಬದುರಾದ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಕಣದ ಸೇಡು, ಸಿಟ್ಟನ್ನು ಬದಿಗಿಟ್ಟು ಒಂದಾಗಬೇಕಾದ ಪರಿಸ್ಥಿತಿ ಈಗ ಕಾಣಿಸುತ್ತಿದೆ. ಈ ಸ್ಥಿತಿಯಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಅಲ್ಲಿನ ರಾಜಕೀಯ ಬೆಳವಣಿಗೆಗಳಿಂದ ಮತದಾರ ಮಾತ್ರ ಗೊಂದಲಕ್ಕೆ ದೂಡಲ್ಪಟ್ಟಿರುವುದಂತೂ ಸತ್ಯ.
ಫಲಿತಾಂಶ ಹೊರಬಿದ್ದ ಕೂಡಲೇ ಚುನಾವಣಾ ಪೂರ್ವ ಮೈತ್ರಿಯಂತೆ ಬಿಜೆಪಿ ಮತ್ತು ಶಿವಸೇನೆ ಸರ್ಕಾರ ರಚನೆ ಮಾಡುತ್ತವೆ ಎಂದೇ ನಂಬಲಾಗಿತ್ತು. ಆದರೆ, ಶಿವಸೇನೆ ತನ್ನ ವರಸೆಯನ್ನು ಬದಲಾಯಿಸಿ ಮುಖ್ಯಮಂತ್ರಿ ಸ್ಥಾನವನ್ನು ಬಯಸಿತ್ತು. ಈ ಎರಡು ಪಕ್ಷಗಳ ಮೈತ್ರಿಕೂಟ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ತಿಳಿದಾಕ್ಷಣ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು.
ಬಳಿಕ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರಕಾರ ರಚಿಸುವ ಕಸರತ್ತು ಅಂತಿಮ ಹಂತಕ್ಕೆ ತಲುಪಿತ್ತು. ಶುಕ್ರವಾರ ರಾತ್ರಿ ಮೂರೂ ಪಕ್ಷಗಳ ಸಭೆ ನಡೆದು ಶಿವವಸೇನೆಯ ವರಿಷ್ಠ ಉದ್ಧವ ಠಾಕ್ರೆ ಮುಖ್ಯಮಂತ್ರಿಯಾಗುವುದೆಂದು ಘೋಷಿಸಲಾಯಿತು.ಅಧಿಕಾರ ಹಂಚಿಕೆಯ ಸೂತ್ರವೂ ಸಿದ್ಧವಾಯಿತು. ಆದರೆ ಮರುದಿನ ಬೆಳಗ್ಗೆ ನಡೆದದ್ದೇ ಬೇರೆ. ಬಿಜೆಪಿ ಮತ್ತು ಎನ್‌ಸಿಪಿಯ ಒಂದು ಗುಂಪು ಬಿಜೆಪಿ ಜೊತೆಗೆ ಕೈ ಜೋಡಿಸಿದ್ದಲ್ಲದೆ ಸರಿಯಾಗಿ ಬೆಳಕು ಹರಿಯುವ ಮೊದಲೇ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿಯೂ ಆಯಿತು.ಇದು ಬಿಜೆಪಿಯ ನಿರ್ದಿಷ್ಟವಾಗಿ ಅಧ್ಯಕ್ಷ ಅಮಿತ್ ಶಾ ಅವರ ಚಾಣಕ್ಯ ನಡೆ, ಮಹಾರಾಷ್ಟ್ರದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್, ರಾತೋರಾತ್ರಿ ನಡೆದ ಕ್ಷಿಪ್ರಕ್ರಾಂತಿ ಎಂದೆಲ್ಲ ಬಣ್ಣಿಸಲಾಗುತ್ತಿದೆ.
ಚುನಾವಣಾ ಕಣದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದ ಪಕ್ಷಗಳು ಒಂದು ಹಂತದಲ್ಲಿ ಮಿತೃತ್ವ ಸಾಧಿಸಹೊರಟಿರುವುದು ಬದಲಾದ ರಾಜಕೀಯ ಪರಿಸ್ಥಿತಿಯ ದ್ಯೋತಕ.
ಎನ್‌ಡಿಎ ಮಿತ್ರಪಕ್ಷವಾಗಿದ್ದ ಶಿವಸೇನೆ ಬಿಜೆಪಿಯನ್ನು ಟೀಕಿಸಲು ಸಿಗುವ ಯಾವ ಅವಕಾಶವನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೂ ಚುನಾವಣೆಯನ್ನು ಬಿಜೆಪಿಯ ಜೊತೆಗೆ ಎದುರಿಸಿತು. ಫಲಿತಾಂಶ ಪ್ರಕಟವಾದ ಬಳಿಕ ಹಠಾತ್ ತನ್ನ ವರಸೆ ಬದಲಾಯಿಸಿ ಅಧಿಕಾರದಲ್ಲಿ ಸಮಪಾಲಿಗೆ ಬೇಡಿಕೆಯಿಟ್ಟಿತು.
ಚುನಾವಣೆಗೆ ಮುಂಚೆ ಈ ಕುರಿತು ಚಕಾರವೆತ್ತದ ಶಿವಸೇನೆಯ ಈ ಬದಲಾದ ನಿಲುವು ಎಲ್ಲ ಸಮಸ್ಯೆಗಳಿಗೆ ಮೂಲವಾಯಿತು.
ಬಿಜೆಪಿಯಿಂದ ಅಧಿಕಾರದಲ್ಲಿ ಸಮಪಾಲು ಸಿಗುವುದಿಲ್ಲ ಎಂದು ಸ್ಪಷ್ಟವಾದ ಬಳಿಕ ಶಿವಸೇನೆಗೆ ಚುನಾವಣೆಯಲ್ಲಿ ತನ್ನ ಬದ್ಧ ಎದುರಾಳಿಗಳಾಗಿ ಸ್ಪರ್ಧಿಸಿದ್ದ ಶಿವಸೇನೆ ಮತ್ತು ಎನ್‌ಸಿಪಿ ಜೊತೆಗೆ ಕೈಜೋಡಿಸಲು ಸಿದ್ಧಾಂತವಾಗಲಿ, ನೈತಿಕತೆಯಾಗಲಿ ಅಡ್ಡಿಯಾಗಲಿಲ್ಲ. ಮೂರೂ ಪಕ್ಷಗಳ ಗುರಿ ಅಧಿಕಾರ ಮಾತ್ರ ಆಗಿತ್ತು. ಎಲ್ಲವೂ ಅಂತಿಮಗೊಂಡ ಮೇಲೆ ರಂಗ ಪ್ರವೇಶ ಮಾಡಿದ ಬಿಜೆಪಿಗೂ ಚುನಾವಣೆ ಸಂದರ್ಭದಲ್ಲಿ ತಾನು ಎನ್‌ಸಿಪಿ ಮತ್ತು ಅಜಿತ್ ಪವಾರ್ ವಿರುದ್ಧ ಮಾಡಿದ ರಾಷ್ಟ್ರೀಯ ಭ್ರಷ್ಟ ಪಕ್ಷ, ಭ್ರಷ್ಟಾಚಾರದ ಪಿತಾಮಹ ಎಂಬಿತ್ಯಾದಿ ಆರೋಪಗಳು ನೆನಪಾಗಲಿಲ್ಲ. ಶಿವಸೇನೆಯ ಹಿಂದುತ್ವವಾಗಲಿ, ಬಿಜೆಪಿಯ ಭ್ರಷ್ಟಾಚಾರ ವಿರೋಧಿ ನೀತಿಯಾಗಲಿ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ಜಾತ್ಯತೀತತೆಯಾಗಲಿ ಎಲ್ಲವೂ ಬರಿ ಬೊಗಳೆ ಎನ್ನುವುದು ಸಾಬೀತಾಯಿತು. ಒಟ್ಟಾರೆಯಾಗಿ ಎಲ್ಲ ಪಕ್ಷಗಳು ತತ್ವ- ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿರುವುದು ಸ್ಪಷ್ಟ.
ಮತ ಚಲಾಯಿಸಿ ತಿಂಗಳಾದರೂ ಸರ್ಕಾರ ರಚನೆ ಯಾಗದೆ ಇರುವುದು ವಿಷಾದನೀಯ. ಪ್ರಜಾತಂತ್ರದಲ್ಲಿ ಪ್ರಜೆಗಳ ಪಾತ್ರ ಮತ ಹಾಕುವುದಷ್ಟಕ್ಕೆ ಸೀಮಿತವಾಗಿದೆ. ನಂತರ ನಡೆಯುವ ಎಲ್ಲ ಬೆಳವಣಿಗೆಗಳಿಗೆ ಅವರು ಮೂಕ ಪ್ರೇಕ್ಷಕರು ಮಾತ್ರ. ಇದು ಜಗತ್ತಿನ ಅತಿ ದೊಡ್ಡ ಚಲನಶೀಲ ಪ್ರಜಾಪ್ರಭುತ್ವದ ನಿಜವಾದ ದುರಂತ.