ಶ್ರೀರಂಗಪಟ್ಟಣ: ರಾಜ್ಯದಲ್ಲಿ ಮೇ 10ರಂದು ನಡೆ ಯುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ, ಶ್ರೀರಂಗಪಟ್ಟಣ ಕ್ಷೇತ್ರ ದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು, ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನ ಹೆಚ್ಚಾಗಿದೆ.
ಮತದಾರರಿಗೂ ಬೇಡಿಕೆ ಹೆಚ್ಚಿದ್ದು, ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಮತದಾರರೊಂದಿಗೆ ಮಾತುಕತೆ ಆರಂಭವಾಗಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪತ್ನಿಯರು ಸಹ ಪ್ರಚಾರ ಮಾಡುತ್ತಿದ್ದು, ಮತದಾರದ ಮನೆಗಳಿಗೆ ತೆರಳಿ ಪ್ರಚಾರದ ಬಿರಿಸಿನಲ್ಲಿದ್ದಾರೆ. ಮತದಾರರನ್ನು ಸೆಳೆ ಯಲು ತಮ್ಮ ಪತಿಗಳಿಗೆ ಸಾಥ್ ನೀಡುತ್ತಿದ್ದಾರೆ.
ಬಿರುಸಿನ ಮತ ಬೇಟೆ: ಜೆಡಿಎಸ್‌ನ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಕಾಂಗ್ರೆಸ್‌ನ ರಮೇಶ್ ಬಂಡಿಸಿದ್ದೇಗೌಡ ಕ್ಷೇತ್ರದೆಲ್ಲೆಡೆ ಬಿರುಸಿನ ಮತ ಬೇಟೆ ಶುರು ಮಾಡಿದ್ದು, ಇವರಿಗೆ ತಮ್ಮ ಪತ್ನಿಯರು ಸಾಥ್ ನೀಡಿ, ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಎಲ್ಲೆಡೆ ಮತ ಪ್ರಚಾರ ನಡೆಸುತ್ತಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಪತ್ನಿ ಗೀತಾ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಪತ್ನಿ ಸುಮತಿ ರಮೇಶ್ ಬಂಡಿಸಿದ್ದೇಗೌಡ ಅವರು ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.
ಕ್ಷೇತ್ರ ಸಂಚಾರ: ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಇಂಡುವಾಳು ಸಚ್ಚಿದಾನಂದ ತಮ್ಮ ಮಾವ ಎಸ್. ಎಲ್.ಲಿಂಗರಾಜು ಜೊತೆಗೂಡಿ ಈಗಾಗಲೇ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಸೇರಿ ಕ್ಷೇತ್ರ ಸಂಚಾರ ಮಾಡಿ, ಮತ ಬೇಟೆಯ ಬಹಳ ಸುದ್ದಿಯಲ್ಲಿದ್ದಾರೆ. ಅಲ್ಲದೆ, ಜೆಡಿಎಸ್ ಬಂಡಾಯ ಅಭ್ಯರ್ಥಿ ಜಿಪಂ ಮಾಜಿ ಸದಸ್ಯ ತಗ್ಗಳ್ಳಿ ವೆಂಕಟೇಶ್ ಕೂಡ ಜೆಡಿಎಸ್ ಟಿಕೆಟ್ ಕೈ ತಪ್ಪಿಸಿದ ಪಕ್ಷದ ವರಿಷ್ಠರೊಂದಿಗೆ ಅಸಮ ಧಾನಗೊಂಡು ಪಕ್ಷೇತರವಾಗಿ ಸ್ಪರ್ಧೆಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಎಷ್ಟು ಸಾಧ್ಯವೋ ಅಷ್ಟು ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿ ತಲ್ಲೀನರಾಗಿದ್ದಾರೆ.
ಹಲವು ದಿನಗಳಿಂದ ಕೈ ಟಿಕೆಟ್‌ಗಾಗಿ ಕೆಪಿಸಿಸಿ ಅಧ್ಯಕ್ಷರೊಂದಿಗೆ ಒಡನಾಡಿ ಬೆಳೆಸಿಕೊಂಡಿದ್ದ ಪಾಲಹಳ್ಳಿ ಚಂದ್ರಶೇಖರ್ ಕೂಡ ಹಲವು ಸಭೆ ಸಮಾರಂಭಗಳನ್ನು ನಡೆಸಿ ಪ್ರಚಾರದಲ್ಲಿದ್ದು, ಇದೀಗ ರಮೇಶ್ ಬಂಡಿಸಿದ್ದೇಗೌಡರಿಗೆ ಟಿಕೆಟ್ ಸಿಕ್ಕಿದ್ದು, ತಮಗೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಬಂಡಾಯದ ಕಹಳೆ ಊದುವುದಾಗಿ ತಿಳಿಸಿರುವ ಪಾಲಹಳ್ಳಿ ಚಂದ್ರಶೇಖರ್ ನಡೆ ಇನ್ನೂ ನಿಗೂಡವಾಗಿದೆ. ಅವರ ಕೆಲವು ಹಿಂಬಾಲಕರು ಜೆಡಿಎಸ್ ಕಡೆ ಮುಖ ಮಾಡಿದ್ದು, ಅವರು ಕೂಡ ತಮ್ಮ ಮುಂದಿನ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ.
ಮುಖಂಡರ ಪಕ್ಷಾಂತರ ಪರ್ವ: ಚುನಾವಣೆಗೆ ಇನ್ನೊಂದು ತಿಂಗಳು ಬಾಕಿಯಿರುವಂತೆಯೇ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಮುಖಂಡರ ಪಕ್ಷಾಂತರ ಪರ್ವ ಜೋರಾಗಿಯೇ ಸಾಗಿದೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್, ಕಾಂಗ್ರೆಸ್ ಬಿಟ್ಟು ಜೆಡಿಎಸ್, ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿ ಹೀಗೆ ಕ್ಷೇತ್ರದ ವಿವಿಧ ಗ್ರಾಮಗಳ ಮಟ್ಟ ದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ನೂರಾರು ಸಂಖ್ಯೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಪಕ್ಷ ಬದಲಿಸುತ್ತಿದ್ದು, ಇದೀಗ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರ ತೊಡಗಿದೆ.
ರಂಗೇರುತ್ತಿರುವ ಚುನಾವಣೆಯಲ್ಲಿ ಪಕ್ಷಗಳಿಂದ ಪಕ್ಷಾಂತರವಾಗುವ ಮುಖಂಡರು ಹಾಗೂ ಕಾರ್ಯಕರ್ತರನ್ನು ಮಾತುಕತೆಗಳ ಮೂಲಕ ಮನ ಪರಿವರ್ತನೆ ಮಾಡಿ, ಕಟ್ಟಿ ಹಾಕುವ ಪ್ರಯತ್ನಗಳು ಎಲ್ಲಾ ಪಕ್ಷಗಳಲ್ಲೂ ನಡೆಯುತ್ತಿದೆ. ಏನೇ ಆದರೂ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಶತ ಪ್ರಯತ್ನಗಳು ಕೂಡ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ನಡೆಯುತ್ತಿದೆ.
– ಗಂಜಾಂ ಮಂಜು