Advertisement
ರಾಜ್ಯದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹದಲ್ಲಿರುವ ಬಿಜೆಪಿ ನಾಯಕರು ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್- ಜೆಡಿಎಸ್‌ನಲ್ಲಿನ ಭಿನ್ನಾಭಿಪ್ರಾಯ ಭುಗಿಲೇಳುವ ನಿರೀಕ್ಷೆಯಲ್ಲಿದ್ದಾರೆ. ಆ ಸಂದರ್ಭ ನಿರ್ಮಾಣವಾದರೆ ಪರಿಸ್ಥಿತಿಯ ಲಾಭ ಪಡೆದು ಸ್ವಂತ ಬಲದ ಸರ್ಕಾರ ರಚನೆಯ ಚಿಂತನೆಯಲ್ಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
Related Articles
Advertisement
ಫಲಿತಾಂಶದ ಬಳಿಕ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರುವ ಜತೆಗೆ ಹೊಸ ಸರ್ಕಾರ ರಚನೆ ನಿರೀಕ್ಷೆಯು ಬಿಜೆಪಿ ನಾಯಕರಲ್ಲಿ ಹೊಸ ಭರವಸೆಗಳನ್ನು ಹುಟ್ಟಿಸಿದೆ. ಪಕ್ಷದ ಹಿರಿಯ ನಾಯಕರ ಮಟ್ಟದಲ್ಲೂ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
ನಿರೀಕ್ಷೆಯಂತೆ ಎಲ್ಲವೂ ನಡೆದಿದ್ದರೆ ಈ ಹೊತ್ತಿಗಾಗಲೇ ರಾಜ್ಯ ರಾಜಕೀಯದಲ್ಲಿ ರೋಚಕ ಬೆಳವಣಿಗೆಯಾಗಬೇಕಿತ್ತು. ಪ್ರಯತ್ನವೂ ಪರಿಣಾಮಕಾರಿಯಾಗಿಯೇ ನಡೆದಿತ್ತು. ಒಂದು ಹಂತದವರೆಗೆ ಎಲ್ಲವೂ ಯೋಜಿತ ರೀತಿಯಲ್ಲೇ ನಡೆದಿದ್ದವು. ಆದರೆ ಆ ಪ್ರಕ್ರಿಯೆಯನ್ನು ಕೆಲವರು ನಿರೀಕ್ಷಿತ ಮಟ್ಟದಲ್ಲಿ ನಿರ್ವಹಿಸದ ಕಾರಣ ವಿಫಲವಾಗಿದ್ದರಿಂದ ತುಸು ಹಿನ್ನಡೆ ಉಂಟಾಗಿತ್ತು.
ಸರ್ಕಾರ ರಚನೆ ನಿಶ್ಚಿತ: ಲೋಕಸಭಾ ಚುನಾವಣೆ ಬಳಿಕ ಸರ್ಕಾರ ರಚನೆ ನಿಶ್ಚಿತ. ಹಾಗೆಂದು ಬಿಜೆಪಿಯು ಮೈತ್ರಿ ಸರ್ಕಾರವನ್ನು ಅತಂತ್ರಗೊಳಿಸಲು ಯತ್ನಿಸುವುದಿಲ್ಲ. ಫಲಿತಾಂಶದ ಬಳಿಕ ಆ ಪಕ್ಷಗಳಲ್ಲೇ ಸುಪ್ತವಾಗಿರುವ ಭಿನ್ನಮತ ಸ್ಫೋಟಗೊಳ್ಳಲಿದೆ. ಆಗ ಸಹಜವಾಗಿಯೇ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಗಳಿಸಿದರೆ ತಿಂಗಳಲ್ಲಿ ಸರ್ಕಾರ ರಚನೆಯಾಗಬಹುದು.
ಒಂದೊಮ್ಮೆ 20ಕ್ಕಿಂತ ಕಡಿಮೆ ಸ್ಥಾನ ಗಳಿಸಿದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ 3 ತಿಂಗಳಲ್ಲಿ ರಾಜ್ಯದಲ್ಲಿ ಬದಲಾವಣೆಗಳಾಗಬಹುದು. ಯಾವುದೇ ಕಾರಣಕ್ಕೂ ಮೈತ್ರಿ ಪ್ರಶ್ನೆ ಉದ್ಭವಿಸುವುದಿಲ್ಲ. 70, 80 ಸ್ಥಾನ ಗಳಿಸಿದ್ದರೆ ಆ ಬಗ್ಗೆ ಯೋಚಿಸಬಹುದಿತ್ತು. ಆದರೆ 104 ಶಾಸಕರ ಬಲವಿದ್ದು, ಬಹುಮತಕ್ಕೆ ಬೆರಳೆಣಿಕೆ ಶಾಸಕರ ಅಗತ್ಯವಿದೆ. ಹಾಗಾಗಿ ಸ್ವಂತ ಬಲದ ಸರ್ಕಾರ ರಚನೆಯಾಗುವ ನಿರೀಕ್ಷೆ ಸಹಜವಾಗಿಯೇ ಇದೆ ಎಂದು ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ.
“5 ಬಿ’ ಜಿಲ್ಲೆಗಳಲ್ಲಿ ಹಿನ್ನಡೆ: ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನ ತಲುಪಿ, ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸವಿತ್ತು. ಆದರೆ ಲೆಕ್ಕಾಚಾರ ತುಸು ತಪ್ಪಿತು. ಮುಖ್ಯವಾಗಿ ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ನಿರೀಕ್ಷಿತ ಗುರಿ ತಲುಪುವಲ್ಲಿ ಹಿನ್ನಡೆಯಾಯಿತು.
ಬೀದರ್ ಜಿಲ್ಲೆಯ ಆರು ಕ್ಷೇತ್ರದಲ್ಲಿ ಒಂದು, ವಿಜಯಪುರ ಜಿಲ್ಲೆಯ 8 ಕ್ಷೇತ್ರದಲ್ಲಿ ಮೂರು, ಬಳ್ಳಾರಿಯ 9 ಕ್ಷೇತ್ರಗಳ ಪೈಕಿ 3, ಬೆಳಗಾವಿ ಜಿಲ್ಲೆಯ 18ರ ಪೈಕಿ 10 ಹಾಗೂ ಬೆಂಗಳೂರು ನಗರ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ 10 ಸ್ಥಾನಗಳನ್ನಷ್ಟೇ ಬಿಜೆಪಿ ಗೆಲ್ಲಲು ಸಾಧ್ಯವಾಗಿದ್ದು, ದೊಡ್ಡ ಹಿನ್ನಡೆಯಾಗಿತ್ತು. ಈ ಜಿಲ್ಲೆಗಳಲ್ಲಿ ಅಭ್ಯರ್ಥಿ ಆಯ್ಕೆ ಸೇರಿದಂತೆ ಇತರೆ ಕೆಲ ಲೋಪಗಳಿಂದ ಹಿನ್ನಡೆಯಾಯಿತು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.
* ಎಂ. ಕೀರ್ತಿಪ್ರಸಾದ್